Thursday, December 29, 2011

ಸರಸೀ - ೨

ಹೂಡುತ್ತಿದ್ದಾರಂತೆ ಕೋಟಿ ರುಪಾಯಿ ಖರೀದಿಸಲು ವಿದ್ಯುತ್ತು.
ಹುಚ್ಚು ಮಂತ್ರಿಗಳು,ಸುಮ್ಮನೆ ನನ್ನವಳ ನಗಿಸಿದ್ದರೆ ಸಾಕಿತ್ತು.

-----------------------------------------------------
ನಿನ್ನ ಕನಸಿನೊಳಗಣ ಪ್ರೇಮದರಮನೆಯ ಕಟ್ಟಲೆನ್ನ ನಲ್ಲೆ .,
ಮೊದಲು ನಿದ್ರಿಸಲು ಕೊಡಿ , ಎಂದಳಾಕೆ ನಿಮ್ಮ ನಾ ಬಲ್ಲೆ :)

-----------------------------------------------------
ಹಾಸಿಗೆಯೇಕೂ ಸರಿಯಿಲ್ಲ ,
ನಗುತಳಂದಳು ಗೆಳತಿ
ಸುತ್ತು ಯಾತಕೋ ನಲ್ಲ :)
-----------------------------------------------------

ಕನಸಿಲ್ಲದೆ ಮಲಗಿದ್ದುಂಟು
ಮನಸಿಲ್ಲದೇ ಮಲಗಿದ್ದುಂಟು
ನಿನ್ನ ಬಾಹುಬಂಧದ
ನೆನಪಿಲ್ಲದೆ ಮಲಗಿದ್ದಿಲ್ಲ ಪ್ರಣಯಸಖಿ- ಶುಭರಾತ್ರಿ

 

Tuesday, December 13, 2011

ಸರಸೀ ....

ಪಾತ್ರವೆನೆಗೆ ಇಷ್ಟವೆಂದೆ
ಮುದ್ದು ಕೃಷ್ಣ ಬೆಣ್ಣೆ ಕಳ್ಳ
ಅವಳಿಗ್ಯಾಕೆ ಬೇಕಂತೆ
ಬೆಣ್ಣೆಯ ಪಾತ್ರ-ಅರ್ಥವೇ ಆಗಲಿಲ್ಲ

------------------------------
ನೂಪುರದೊಡನೆ ಆಡಬಲ್ಲೆ ನಾ ರಾತ್ರಿ ಇಡೀ.,
ನಾಚುತವಳು ಅಂದಳು ,ನಡುವಿಗುಡಲಾರೆ ಗೆಜ್ಜೆಯ -ಬಿಡಿ
-ಮತ್ತೆ ಅರ್ಥವಾಗಲಿಲ್ಲ
------------------------------

ಮಧುತುಪ್ಪ ಇಷ್ಟವೆಂದೆ
ಮಧುವಂತಿ ತುಟಿ ವರೆಸಿಕೊಂಡಳು
-ಅರ್ಥವಾಗುತ್ತಿಲ್ಲ

------------------------------
ಅಬ್ಬಿಗುಳಿಗೆ ಕಿಚ್ಚನಿಟ್ಟು
ಹಬೆಗುಡುವ ನೀರನಿಡಿದು
ಚಳಿ ಎಂದು ಕೂಗುತಾಳೆ ...
-ಬಹುಶಃ ಹುಷಾರಿಲ್ಲ

------------------------------
ಊಟಿ ಸೇಬು ಊಟಿಯಲ್ಲಷ್ಟೇ ಏನೋ ಜಾಣೇ.,
ಅಂದಿದ್ದಕ್ಕವಳ ಕೆನ್ನೆ ಕೆಂಪಾಗಿದ್ದೇಕೆ ನಾ ಕಾಣೆ..

-ತಿಂದದ್ದು ನೆನಪಾಗಿರಬೇಕು
 

Sunday, October 30, 2011

ಹಿಂಗೆಲ್ಲಾ ಅನ್ಸತ್ತೆ :)

ಹೀಗೆ ಪ್ರೇಮದ ನೆನಹುಗಳ ಮೇಲೆ ಕುಳಿತು  ,ಇತಿಹಾಸದ ಪುಟಗಳನ್ನ ಕವಚುತ್ತಾ ಹೋದರೆ ಡಣ್ಣನೆ ಮುಖಕ್ಕೆ ರಾಚುವ ಸತ್ಯ., ಪ್ರೀತಿಗೆ , ಪ್ರೇಮಕ್ಕೆ ಹುಡುಗಿಯರ ಕಾಣಿಕೆ ಸೊನ್ನೆ.ಯೋಚನೆ ಮಾಡಿ ., ಪ್ರೇಮ ವೈಫಲ್ಯ ಅಂದ್ರೆ ತಕ್ಷಣ  ದೇವದಾಸ ನೆನಪಾಗ್ತಾನೆ.,ಪಾರು ಮದ್ವೆ ಆಗಿ settle  ಅಗಿಬಿಡ್ತಾಳೆ.ಹಾಗಾದರೆ ಈ ಹುಡ್ಗೀರಿಗೆ ಪ್ರೇಮ ಲವ್ವು ಇವೆಲ್ಲ ಸುಮ್ಮನೆ ಆಟದ ಸಮಾನುಗಳೇ??.ಒರಿಜಿನಲ್  ಲವ್ವು ಹೇಳದು ಇಲ್ಲವೇ ಇಲ್ಯೇ??.
ಯಾವ್ದಾರು ಹುಡುಗಿ ಜೊತೆ ಜಗಳ ಮಾಡಿ ಪಲ್ಟಿ ಹೊಡೆಸ್ಬೇಕು ಅಂದ್ರೆ ಹಿಂಗೆ ಮಾತಾಡಿ.ಆಮೇಲೆ ಆ ಹುಡುಗಿ ಸಮಾಧಾನ ಮಾಡಕ್ಕೆ ನಿಮಗೆ ಏಳು ಹನ್ನೊಂದು ಆದರೆ ನನಿಗ್ ಗೊತ್ತಿಲ್ಲ ಅಷ್ಟೇ.

basically , ಪ್ರೀತಿಸಿದಷ್ಟು ಕಾಲ , ಪ್ರೀತಿ ಸತ್ಯವೇ ಆಗಿರುತ್ತದೆ.ಸ್ವಲ್ಪ ಕನ್ಫ್ಯೂಸ್ ಅಲ ?? ಹೇಳ್ತೀನಿ ತಾಳಿ.
ಮೂಲತಃ ಅದು  ,  ಅಹಂಕಾರವನ್ನ ಪೋಷಿಸುವ ಮತ್ತು ಪೋಷಿಸಿಕೊಳ್ಳುವ ಭಾವ.ಒಂದು ಹುಡುಗಿ ., ಕೈ ಕೊಟ್ಟು ಹೋದಳು ಎಂದಾಗ ., ಅಥವಾ ತಿರಸ್ಕರಿಸಿದಳು ಅದು ಹುಡುಗನ ಅಹಂಕಾರಕ್ಕೆ ಬೀಳುವ ಪೆಟ್ಟಾಗಿರುತ್ತದೆ.ಆ ಪೆಟ್ಟನ್ನ ತುಂಬಿಕೊಳ್ಳುವ ಸಲುವಾಗಿ , ಹುಡುಗ ಅನುಕಂಪದ ಮೊರೆ ಹೋಗುತ್ತಾನೆ.ಬಹಿರಂಗವಾಗಿ ತೋರಗೊಡುತ್ತಾನೆ.ಕುಡಿತ ಧೂಮಪಾನ ಇವುಗಳ ಮೂಲಕ ಸಮಾಜದ ಗಮನ ಬೇಡುತ್ತಾನೆ.ಕೈಗೆ ಸಿಗದ ಹುಡುಗಿಯನ್ನ ಬಯ್ಯುವ ಮೂಲಕ ತನ್ನ ಅಹಮಿಕೆಗೆ ಆದ ನೋವನ್ನು ತುಂಬಿಕೊಳ್ಳುತ್ತಾನೆ.ಬಹುಶಃ ಪುರುಷ ಪ್ರಧಾನ ವ್ಯವಸ್ತೆ ಆಗಿದ್ದರಿಂದ ಆತನ ಆ ಎಲ್ಲ ಡ್ರಾಮಾಗಳಿಗೆ ಬೆಲೆ ಸಿಗುತ್ತದೆ.ಅಹುದಹುದೆನ್ನಲು ಒಂದಿಷ್ಟು ಜನ ಕೂಡ.public  affection of attraction ನಮ್ಮ ಮೂಲ ಗುಣಗಳಲ್ಲಿ ಒಂದು ಅಷ್ಟಕ್ಕೂ.

ಹುಡುಗಿಯರಿಗೆ ಹಾಗಾದ್ರೆ ., ಲವ್ವಿನ ಫೀಲಿಂಗ್ ಬರೋದೆ ಇಲ್ವೆ.ಅಥವಾ ಅವರು ಬೇಜಾರೆ ಆಗೋಲ್ವೇ?? ಯಾಕೆ ಇತಿಹಾಸದ ಪುಟಗಳಲ್ಲಿ ,ವರ್ತಮಾನದ ವಾರ್ತೆಗಳಲ್ಲಿ ., ಲವ್ ಫೈಲ್ಯುರ್ ಆಗಿ ಮಕಾಡೆ ಮಲಗಿದ ಹುಡುಗಿಯರು ಸಿಗದೇ ಇಲ್ಲ.ಅಥವಾ ಭಾಳ ಕಮ್ಮಿ??
ಅದಕ್ಕೆ ಕಾರಣಗಳು ಹಲವಾರು., ಹುಡುಗಿಗೆ ಮನೆತನದ ಘನತೆ- ಗೌರವಗಳು ಪ್ರೇಮಕ್ಕಿಂತ ಯಾವತ್ತೂ ಹೆಚ್ಚು ಹೇಳುವ ಮನೋಭಾವವನ್ನ ತುಂಬಲಾಗಿರುತ್ತದೆ.ಮಾನಸಿಕವಾಗಿ ಗಂಡಿನಷ್ಟು ಸಮರ್ಥಳಲ್ಲದ ಕಾರಣ ., ಆ ತರದ ರಿವಾಜುಗಳನ್ನ ಮೀರಿ ನಡೆಯಲು ಬಹಳಷ್ಟು ಕೇಸ್ ಗಳಲ್ಲಿ ಸೋಲುತ್ತಾಳೆ.
ಮತ್ತೆ., ಇಲ್ಲ ಆತನ ಮರೆಯುವುದು ಸಾಧ್ಯವೇ ಇಲ್ಲ ., ನಾನು ಹೀಗೆ ಇದ್ದುಬಿಡುತ್ತೇನೆ ಎಂಬ ನಿರ್ಧಾರ ಮಾಡಿದರೂ ತನ್ನ ಮನೆ ಇದ್ದದ್ದು ನಿಧಾನವಾಗಿ "ಅತ್ತಿಗೆಯ" ಮನೆಯಾಗುವುದು., ಓರಗೆಯ ಹುಡುಗಿಯರ ,ಗೆಳತಿಯರ ಮಕ್ಕಳ ಚಿನ್ನಾಟದ ಮುಂದೆ ., ನಿರ್ಧಾರಗಳ ತಾಯಿಬೇರು ಜೀವ ಕಳೆದುಕೊಳ್ಳುತ್ತದೆ.ಅದಕ್ಕೆ ., ಲವ್ವು ಮಾಡಿದಷ್ಟು ಕಾಲ ಮಾತ್ರ ಸತ್ಯ., ಆಮೇಲೆ ಬರೀ ನೆನಪಷ್ಟೇ.

ನಂಗೆ ಅನ್ಸಿದ್ದೆಲ್ಲ ಸರೀ ಇರ್ಬೇಕು ಅಂತೆ ರೂಲ್ಸ್ ಏನಿಲ್ಲ ಬಿಡಿ:)


Monday, August 29, 2011

ತಲೆಮಾರು-೨

ವಿಷಣ್ಣ ಭಾವದ ಶೃಂಗದಲ್ಲಿ ಕುಳಿತು ಶಶಾಂಕ ಅಳುವುದೊಂದು ಬಾಕಿ ಇತ್ತು.ಅಷ್ಟಕ್ಕೂ ತಾನು ಮಾಡಿದ್ದೂ ಹೇಗೆ ಮತ್ತು ಏನಕ್ಕೆ ತಪ್ಪು ಅಂತ ಅರ್ಥವೇ ಆಗದೆ ತೊಳಲಾಡಿದ್ದ.ಕಾಲೇಜ್ ನಲ್ಲಿ ಹುಡುಗಿಯರೂ ಕುಡೀತಾರೆ., ಇನ್ನು ನಾನು ಕುಡಿದಿಲ್ಲ ಅಂದ್ರೆ .,ಪಾಪು ಅಂತ ಜೀವಮಾನವಿಡಿ ಅಣಕಿಸುತ್ತಾರೆ. ಅದಕ್ಕಿಂತ ದೊಡ್ಡ ಅವಮರ್ಯಾದೆ ಮತ್ತೊಂದಿಲ್ಲ .,ಇವತ್ತಿನ ಕಾಲಕ್ಕೆ ಅಪ್ಪ ಇನ್ನು ಅಪ್ಡೇಟ್ ಆಗೇ ಇಲ್ಲ ಎಂದು ಬೇಜಾರಿಸುತ್ತಾ.ಗೆಳೆಯ ಸಂಜಯನಿಗೆ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಲು ಹೊರಟ.
                                                   ------------------------------
  ಸಂಜೆ ಅಡ್ಡಾದಲ್ಲಿ ., ಶಶಾಂಕ ತಾ ಸಿಕ್ಕಿಬಿದ್ದ ಘಟನೆ ಹೇಳಿದರೆ ಗೆಳೆಯರೆಲ್ಲ ಬಿದ್ದು ಬಿದ್ದು ನಗುತ್ತಿದ್ದರು.ಸಣ್ಣ ಮುಖ ಮಾಡಿ ಕುಳಿತ ಶಶಾಂಕನನ್ನ ನೋಡಲಾಗದೆ .,ಸಂಧ್ಯಾ ಎಲ್ಲರಿಗೂ ಕಣ್ಸನ್ನೆ ಮಾಡಿ ಸುಮ್ಮನಾಗಿಸಿದಳು. ಹೋಗಿ ಶಶಾಂಕನನ್ನ ಸಮಾಧಾನ ಮಾಡತೊಡಗಿದಳು.,
"ಶಶ್., ಅವೆಲ್ಲ ಕಾಮನ್ ಕಣೋ .,ಅವ್ರಿಗೆ ಎಲ್ಲಾರು ತಾವ್ ಹೇಳ್ದಂಗೆ ಕೇಳಬೇಕು ಅಂತ ಆಸೆ .,ನಮ್ಮಪ್ಪಾನೂ ಬೈತಾರೆ ., ಜೀನ್ಸ್ ಯಾಕೆ ಅಷ್ಟು  ಕೆಳಗೆ ಹಾಕ್ಕೊತೀಯ ., ಅಷ್ಟು ಟೈಟ್ ಶರ್ಟ್ ಏನಕ್ಕೆ  ಅಂತೆಲ್ಲ .,ತಲೆ ಮೇಲೆ ಸೆರಗು ಹಾಕ್ಕೊಂಡು ಕೂತ್ಕೊಳೋಕೆ ಇದೇನು ಹತ್ತನೇ ಶತಮಾನನ.ಹಾಗ್ ಇರ್ಬೇಕು ಅನ್ತಿದ್ದಿದ್ರೆ ಹತ್ನೆ ಕ್ಲಾಸ್ಗೆ ಬಿಡಿಸಬೇಕಿತ್ತು. ಇಂಟರ್ನ್ಯಾಷನಲ್ ಸ್ಚೂಳು ಕಾಲೇಜು ಸೇರಿದ ಮೇಲೆ ಅದೇ ಸ್ಟ್ಯಾಂಡರ್ಡ್ ನ ಮೇನ್ಟೇನ್ ಮಾಡಬೇಕು.ಅವರಿಗೆಲ್ಲ ಅದೆಲ್ಲಿ ಅರ್ತ ಆಗತ್ತೆ ..ಅವರಿದ್ದಾಗ ಇರೋ ಕಾಲೇಜೆ ಇವಗಳು ಇರೋದು ಅನ್ಕೊಂಡ್ ಬಿಟ್ಟಿಯಾರೆ., ಓಲ್ಡ್  ಜನ್ಕ್ಸ್ "

ಸಂಜಯನೂ ದನಿಗೂಡಿಸಿದ
"ಹು ಮಗಾ.,ಅವರಿದ್ದಾಗ .,ಇರೋ values  ನ ಫಾಲ್ಲೋ ಮಾಡಬೇಕು ಅಂದ್ರೆ ಅವಾಗಿನ ಲೈಫ್ ಸ್ಟೈಲ್ ಇವಾಗ್ಲೂ ಇರ್ಬೇಕು..ನಮಪ್ಪಂಗೆ ಅಥವಾ ನಿಮಪ್ಪಂಗೆ ಆಟ ಆಡಬೇಡ .,ಆದ ಮಾಡಬೇಡ ಈದ್ ಮಾಡಬೇಡ ಅಂತ ನಮ್ಮಜ್ಜ ನಿಮ್ಮಜ್ಜ ಕಂಡಿಶನ್ ಹಾಕಿದ್ರಾ?? ಇದನ್ನೇ ಓದು ., ಇಷ್ಟೇ ಮಾರ್ಕ್ಸ್ ತೆಗಿ ಇಲ್ಲ ಅಂದ್ರೆ ಕಾಲ್ ಮುರೀತೀನಿ ಅಂತ ಯಾವಾಗ್ಲಾರು ಹೇಳಿದ್ರ .,?? ದುಡ್ ಇಟ್ಕೊಂಡ್ರೆ.,ಒಳ್ಳೆ ಡ್ರೆಸ್ ಹಾಕ್ಕೊಂಡ್ರೆ ಮಾತ್ರ ಮರ್ಯಾದೆ ಸಿಗೋದ ಅವಾಗೆಲ್ಲ??
ಬಿಕ್ಷುಕರು ಬಂದ್ರೆ ಕಾರಿನ ಗ್ಲಾಸ್ ಇಳಿಸದೆ ಮುಖ ಸಿಂಡರಿಸ್ತಾರೆ ., ನಾವ್ ಅದೇ ಸ್ಟ್ಯಾಂಡರ್ಡ್ ಮಾಡ್ತೀವಿ ಅಂದ್ರೆ ಅವ್ರಿಗೆ ಉರಿ" ಅಂತ ಸ್ವಲ್ಪ ಲಾಜಿಕಲ್  ಸ್ವಲ್ಪ ಸಿಟ್ಟಿನ ವಾದ ಮುಂದಿಟ್ಟ.

"ಮಗಾ .,ಅಷ್ಟಕ್ಕೂ ದುಡ್ಡು ಮಾಡೋದ್ ಏನಕ್ಕೆ .,ಜನ ದುಡಿಯೋದ್  ಏನಕ್ಕೆ ., ಲೈಫ್ ಎಂಜಾಯ್ ಮಾಡೋಕೆ ತಾನೆ ??..ಎಷ್ಟ್ ದಿನ ಬದುಕ್ತಿಯೋ ಯಾರಿಗ್ ಗೊತ್ತು., ಈ ಬೆಂಗಳೂರಲ್ಲಿ ಸಾಯೋದಿಕ್ಕೆ ರೀಸನ್ನೇ ಬೇಡ.ನಾಳೆ ಬಗ್ಗೆ ಯೋಚನೆ ಮಾಡ್ತಾ ಮಾಡ್ತಾ ಇವತ್ತಿನ ಸಾಯ್ಸೋ ಮಂದಿ ಫೂಲಿಶ್ ಕಣೋ.live  today ., tommarrow is  too  late "  ಹರೀಶ ಕೂಡ ಒಂದಿಷ್ಟು ಪದ ಸೇರಿಸಿದ."ಆಚೆ ಕಿವಿಲ್ ಕೇಳಿ ಈಚೆ ಕಿವಿಲ್ ಬಿಡೋ ಮಗಾ" ಎಂದು ಮುಂದುವರೆಸಿದ.
ಮಬ್ಬುಗತ್ತಿಲನಲ್ಲಿ ಮುಂದಿನ ಯೋಚನೆ ಮಾಡೋಣ ಎಂಬ ನಿರ್ಧಾರದೊಂದಿಗೆ  ., ಮತ್ತೊಮ್ಮೆ ಸಿಕ್ಕಿಹಾಕಿಕೊಳ್ಳಬೇಡ ಎಂಬ ಎಚ್ಚರಿಕೆಯೊಂದಿಗೆ ಮೀಟಿಂಗ್ ., ಪ್ರತಿಷ್ಟಿತ ಬಾರ್ ಒಂದಕ್ಕೆ ಸ್ಥಳಾಂತರಗೊಂಡಿತು.                                                                                                           ---------------------------------                                                         ಹಳೆಯ ಗೆಳೆಯ ರಾಮಮೂರ್ತಿಯೊಂದಿಗೆ .,ಕೈಯಲ್ಲಿದ್ದ ಗ್ಲಾಸ್ ಒಳಗಿನ ನಿಧಾನ ವಿಷ ನೋಡುತ್ತಾ  ., "ಮಗನೂ ಕುಡಿಯುತ್ತಾನೆ ಮಾರಾಯ" ಎಂದೇಳಿದ ರಾಜೇಂದ್ರ.
ದೊಡ್ಡದೊಂದು ನಗೆಯ ನಕ್ಕು ಮೂರ್ತಿ ಹೇಳಿದ "ತಾವು ಕುಡಿಯುತ್ತಿರುವುದೇನೂ ಗೊಮೂತ್ರವೋ"
"ಹಾಗಲ್ಲಯ್ಯ., ನಾನು ದುಡೀತೇನೆ ., ಜೀವನ ಕಂಡಿದ್ದೇನೆ .,ಕಷ್ಟ ಸುಖಗಳು ಗೊತ್ತು., ಅವನಿಗಿನ್ನೂ ಮೀಸೆ ಸರಿಯಾಗಿ ಮೂಡಿಲ್ಲ ಗೊತ್ತಾ"
"ನಿನ್ನಪ್ಪ ನಿನ್ನ ವಯಸ್ಸಿಗೆ ಕುಡೀತಿದ್ರೆನೂ??., ಅವಾಗ ಅವರು ಜೀವನ ಕಂಡಿರ್ಲಿಲ್ವ??"
"ಹಾಗಲ್ಲಯ್ಯ ........" ಅರ್ಧದಲ್ಲೇ ತಡೆದ ಮೂರ್ತಿ
"ನೋಡು ., ಕುಡಿಯುವುದಕ್ಕೆ ಅವೆಲ್ಲ ಕಾರಣಗಳಷ್ಟೆ., ನಿನ್ನ ಮಗನಿಗೆ ಕೇಳಿದರೆ ಅವನೂ ಒಂದಷ್ಟು ಕಾರಣಗಳನ್ನ ಕೊಟ್ಟಾನು.ಅದಲ್ಲ ಉತ್ತರ.ನೀ ಅವನ ವಯಸ್ಸಿದ್ದಾಗ ., ಶೆಟ್ಟರ ಅಂಗಡಿಯ ಸುಬ್ಬಣ್ಣನಿಗೂ ನಿನ್ನಪ್ಪ ಗೌರವ ಕೊಡುತ್ತಿದ್ದರು.ಅವರು ಶ್ರೀಮಂತರು ಹೇಳುವ ಕಾರಣಕ್ಕಾ??.ಅವಾಗ ಅವರವ ವ್ಯಕ್ತಿತ್ವ., ಅವರಿಗೆ ಗೌರವ ದಕ್ಕಿಸಿಕೊಡುತ್ತಿತ್ತು.ತಿಳಿದವರು ಹೇಳುವ ಕಾರಣಕ್ಕೆ ಗೌರವ ಕೊಡು .,ವಯಸ್ಸಿಗೆ ಗೌರವ ಕೊಡು ಅಂತ ನಿನ್ನ ಅಪ್ಪ ನಿನಗೆ ತಿದ್ದಿದ್ದರು.ಇವಾಗ ನೀ ಮಾಡಿದ್ದೇನು .,ನೀ ಒಬ್ಬನೇ ಅಲ್ಲ ನಾವೆಲ್ಲಾ ಮಾಡಿದ್ದೇನು"
 ರಾಜೇಂದ್ರನಿಗೆ ಮಗಾ ಕುಡಿಯುವುದಕ್ಕೂ ., ಇದಕ್ಕೂ ಎತ್ತೆಣಿ0ದೆತ್ತ ಸಂಬಂದ ಎಂದು ಅರ್ಥವಾಗಲಿಲ್ಲ.
"ಮನೆಯಲ್ಲಿ ಅಡಿಗೆ  ಮಾಡುವ ಆಳಿಗೆ ನಾಗ ಅಂತ ಕರೆ ಅಂತ ನಿನ್ನ ಮಗನಿಗೆ ಹೇಳಿಕೊಟ್ಟಿದ್ದಿಯ.,ಅಥವಾ ವಯಸ್ಸು ಮತ್ತು ತಿಳುವಳಿಕೆಗಿಂತ ., ದುಡ್ಡಿನ ಆಧಾರದ ಮೇಲೆ ಮನುಷ್ಯನಿಗೆ ಗೌರವ ಕೊಡುವುದ ಹೇಳಿಕೊಟ್ಟು., ಟೋಟಲ್ಲಾಗಿ ದುಡ್ಡಿನ ಸಂಸ್ಕೃತಿಯಲ್ಲಿ ಮಗನ ಬೆಳಿಸಿ ಈಗ ನಿನ್ನ ಹಾಗೆ ಇರಬೇಕು ಅಂದರೆ ?? ಆತ ದುಡ್ಡು ಯಾವ ಸಂಸ್ಕೃತಿ ಹೇಳತ್ತೂ  ಅದನ್ನ ಅನುಸರಿಸುತ್ತಾನೆ ., ಅಷ್ಟೇ "
"ಬಿಸಿನೆಸ್ಸ್ ಕೂಡ ಒಂದು ರೀತಿಯ ರೀಲೆಶನ್ ಆಗಿದ್ದ ಕಾಲವನ್ನ., ರೀಲೆಶನ್ ಕೂಡ ಒಂದು ಬಿಸಿನೆಸ್ಸ್ ಆಗುವ ಹಾಗೆ ಬದಲಾಯಿಸಿದ ಕೀರ್ತಿ ನಮ್ಮದು ರಾಜೇಂದ್ರ., ಪರಿವರ್ತನೆ ಜಗದ ನಿಯಮ"
ರಾಜೇಂದ್ರನಿಗೆ ಇವೆಲ್ಲ ಸಹ್ಯವಾಗಲಿಲ್ಲ.,ಬೋಳಿಮಗ ಬುದ್ದಿಜೀವಿ ಆಡಿದ ಹಾಗೆ ಆಡ್ತಾನೆ ಅಂತ ಮನಸ್ಸಿನಲ್ಲೇ ಬಯ್ಯುತ್ತ ಎದ್ದ.
"ಬಾಯಿಗೆ ಮೌತ್ ಫ್ರೆಶ್ನೆರ್ ಹಾಕ್ಕೊಳೋ ಮಗನಿಗೆ ಗೊತಾದ್ರೆ ಮರ್ಯಾದೆಗೇಡು" ಅಂತ ಮೂರ್ತಿ ಕಿಚಾಯಿಸಿದ್ದು ತಮಾಷೆಗೆ ಅಂತ ಅನ್ನಿಸಲಿಲ್ಲ ರಾಜೇಂದ್ರನಿಗೆ. ಅದರೂ ಹಾಕಿಕೊಳ್ಳುವುದ ಮರೆಯಲಿಲ್ಲ.
                                                                    --------------------------------------
ಸಂಜೆಯ ಮೀಟಿಂಗ್ ಮುಗಿದ ಮೇಲೆ ಶಶಾಂಕ ಸಂಧ್ಯಾಳನ್ನ ಅವಳ ಮನೆಗೆ ಬಿಟ್ಟ., ಅವಳ ಅವತಾರ ನೋಡಿದ ಅಜ್ಜಿ ಭಗವಂತ ಈ ಹುಡ್ಗೀ ದುಂಡಗೆ ಓಡಾಡಿ ಅದನ್ನೂ ಫ್ಯಾಶನ್  ಅಂತ ಹೇಳದೊಂದು ಬಾಕಿ ಇದ್ದು  ಅಂತ ದೊಡ್ಡಕೆ ಗೊಣಗಿದ್ದು  ಕೇಳಿ ತುಟಿಯಂಚಲ್ಲೇ ನಕ್ಕ.ಅಪ್ಪನಿಗೆ ಗೊತ್ತಾಗದಿರಲಿ ಅಂತ ಮೌತ್ ಫ್ರೆಶ್ನೆರ್ ಹಾಕಿಕೊಳ್ಳುವದ ಮರೆಯಲಿಲ್ಲ.

Tuesday, June 28, 2011

ತಲೆಮಾರು -೧ರಾಮ ಕುರ್ಚಿಯಲ್ಲಿ ಕುಳಿತಿದ್ದ ರಾಜೇಂದ್ರ ಶರ್ಮ ಮಗನನ್ನು ತರಾಮಾರಿ ಬೈಯ್ಯುತ್ತಿದ್ದರು.
"ನಿನ್ ವಯ್ಯಸ್ಸಿಗೆ ನನಗೆ ಗಂಜಿ ಗಂಜಿಗೆ ಗತಿ ಇರಲೇ ಗೊತ್ತಾ??., ಹಸಿದ ಹೊಟ್ಟೆಯಲ್ಲಿ  ಕವಚಿ ಮಲಗುತ್ತಿದ್ದೆ ರಾತ್ರಿ.,ವಾರಾನ್ನ ಮಾಡಿ ಈ ., ಇವತ್ತಿನ ಹಂತಕ್ಕೆ ಬಂದಿದ್ದೇನೆ ,ನಿನಗೇನು ಕಡಿಮೆ ಹಾಂ".,,"ನಾನು ಗಂಜಿ ಕುಡಿಯುತ್ತಿದ್ದ ಕಾಲಕ್ಕೆ ನೀನು ಎಣ್ಣೆ ಹೊಡ್ಯುತ್ತಿಯಾ ನಾಚಿಕೆ ಆಗಬೇಕು ನಿನ್ನ ಜನ್ಮಕ್ಕೆ. ಛೀ"

ಶಶಾಂಕ ಶರ್ಮ ಮೆದುಳು ತಕ್ಷಣಕ್ಕೆ ಕೆಲಸ ಮಾಡುವುದನ್ನೇ ನಿಲ್ಲಿಸಿದಂತಿತ್ತು.ಈ ಪರಿ ಅಪ್ಪನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಅಂತ ಅಂದಾಜು ಇರಲಿಲ್ಲ ಮಾರಾಯನಿಗೆ.ಉತ್ತರವಾದರೂ ಏನು ಕೊಟ್ಟಾನು??.
ಇನ್ನೊಮ್ಮೆ ಕುಡಿದದ್ದು ಕಂಡರೆ ಕಾಲು ಮುರಿದು ಬಿಡುತ್ತೇನೆ ಎಂಬ ಎಚ್ಚೆರಿಕೆಯ ಮಾತಿನೊಂದಿಗೆ ಅವತ್ತಿನ ಪ್ರಹಸನ ಮುಗಿದಿತ್ತು.

-------------------------------------------------------------------------------------------------------------
ಮಲಗಿದ ರಾಜೇಂದ್ರ ಶರ್ಮನಿಗೆ ಬಾಲ್ಯದ ನೆನಪುಗಳು ತಲೆ ತುಂಬಿಕೊಂಡವು.
ಅಮ್ಮಾ ...ಎಂದಳುತ್ತಾ  ತರಚಿದ ಕಾಲಿನೊಂದಿಗೆ ಬಂದಾಗ ಆ ಕಾಂಗ್ರೆಸ್ಸ್ ಸೊಪ್ಪಿನ ರಸ ಹಚ್ಚಿ ರಕ್ತ ಕಟ್ಟಿಸಿದ ಆಯಿ.ರಾತ್ರಿಯ ಅನ್ನವೇ ., ಬೆಳಗಿನ ಹುರಿದನ್ನದ ಮುಖವಾಡ ಹೊತ್ತು ., ಹೊಟ್ಟೆಯ ಪಾಡಿಸಿದ ನೆನಪುಗಳು ಹಾಯತೊಡಗಿದವು  

ರಾಜೇಂದ್ರ ಹುಟ್ಟಿದ ಊರು ಲಿಂಗನಮಕ್ಕಿ ಜಲಾಶಯದ ನೀರ ಹೊಟ್ಟೆಯೊಳಗೆ ಮಲಗಿತ್ತು.ಕೊಪ್ಪಲಮನೆ ಎಂಬ,ಅಕ್ಷರಶಃ ಮೂರು ಮತ್ತೊಂದು ಮನೆ ಇದ್ದ ಊರದು.ಅಪ್ಪ ಅಮ್ಮ ಅಜ್ಜ ಅಜ್ಜಿ ಮತ್ತು ೭ ಜನ ಸಹೋದರ -ಸಹೋದರಿಯರಲ್ಲಿ ನಾಲ್ಕನೆಯ ಮಗ ರಾಜೇಂದ್ರ ಶರ್ಮ.ಬಹುಶಃ ಹುಟ್ಟಿದಾಗ ,ಆ ಹುಟ್ಟಿಗೊಂದು ಕಾರಣ ಇರಲೇ ಬೇಕೆಂಬ, ಸಾಧನೆಯ ಸಾಧನ ಆಗಲೇ ಬೇಕೆಂಬ ಮಹತ್ವಾಕಾಂಕ್ಷೆ ಯಾರಲ್ಲೂ ಇದ್ದಿದ್ದು ಸುಳ್ಳು.ಮನೆಯ ಎದಿರಿಗಿನ ಸೊಂಪಾದ ತೋಟ. ಅದರಾಚೆಗೆ ಹೊಳೆವ ಹೊಳೆ.ವೈಷ್ಣ ಹೊಳೆ ಅಂತ ಕರೆಯುತ್ತಿದ್ದರದಕ್ಕೆ.ಅದೇ ಹೆಸರೋ ಅಥವಾ ಯಾವದಾದರೂ ಹೆಸರಿನ ಅಪಭ್ರಮ್ಷವೋ ಕೆದಕಿದವರಿಲ್ಲ.ಅಲ್ಲೇ ರಾಜೇಂದ್ರ ಈಜು ಕಲಿತದ್ದು.ದೊಡ್ಡಣ್ಣ ಹಿಯಾಳಿಸುತ್ತಲೇ.,ಕಲಿಸಿಕೊಟ್ಟಿದ್ದ.ಅಷ್ಟಕ್ಕೂ ಈಜು ಒಂದು ಮೂಲಭೂತ ಅಗತ್ಯವೇ ಆಗಿತ್ತು.೬ ಮೈಲು ದೂರದ ಶಾಲೆಗೆ ಇದೆ ಹೊಳೆಯನ್ನ ತೆಪ್ಪದ ಮೇಲೆ ದಾಟಬೇಕಿತ್ತು.

ಹೊಳೆ ನೀರು., ಹಾವು ಹಸೆ ,ಸಂಕ .,,ಎಲ್ಲವನ್ನೂ ಬದುಕಿನ ಒಂದು ಭಾಗವಾಗೆ ನೋಡುತ್ತಾ ತೆಗೆದುಕೊಳ್ಳುತ್ತಾ ಬೆಳೆದ ಜನಗಳ ಮದ್ಯ ರಾಜೇಂದ್ರನೂ ಒಬ್ಬನಾಗಿದ್ದ.ಅವನ ಜೀವನದ ಬಹಳ ದೊಡ್ಡ ತಿರುವು ., ಶರಾವತಿ ನದಿ ನೀರಿನ ತಿರುವಿಗೆ ಆಣೆಕಟ್ಟು ಕಟ್ಟಲು ಸರ್ಕಾರ ನಿರ್ಧರಿಸಿದ್ದು.ನಮ್ಮದು ಮುಳುಗಡೆ ಪ್ರದೇಶವಂತೆ ಅಂತ ಕೇಳಿದಾಗಲೇ ., ಆ ಭಾಗದ ಜನರ ಎದೆ ಬಡಿತ ದಸಕ್ಕೆನ್ದಿತ್ತು.ದೊಡ್ಡವರ ಭಾವನೆಗಳ ತುಮುಲ ಅರ್ಥವಾಗುವ ವಯಸ್ಸಲ್ಲ ಅವನದು.ಮನೆಯ ಅಪ್ಪ -ಅಜ್ಜಂದಿರು ಗುಳೆ ಏಳುವ ವ್ಯವಸ್ಥೆಯಲ್ಲಿ ತೊಡಗಿದ್ದರೆ., ರಾಜೇಂದ್ರ ಅಣ್ಣ ತಮ್ಮಂದಿರ ಜೊತೆ  "ಹೇ ಇವತ್ತು ಹೊಳೆ ಇಷ್ಟು ಮೇಲೆ ಬಂದಿದೆ" ಅಂತ ಲೆಕ್ಕ ಹಾಕುತ್ತಿದ್ದ.

ಆಮೇಲೆ ಬೆಂಗಳೂರಿಗೆ ಬಂದಿದ್ದು.ಮೈಯ ಬೆವರ ಪ್ರತಿಹನಿಯು ಇಂದು ಸಾಮ್ರಾಜ್ಯವಾಗಿ ನಿಂತಿದೆ.ಕೆಲವೊಂದು ದಿವಸ ಕಾಲಿ ಅರ್ಧ ಕಪ್ಪು ಚಾದಲ್ಲೇ ದಿನದ ಜೀವನ ಮುಗಿಸಿ ಬಂದದ್ದುಂಟು.ಯಾಕೆ ಮಗ ಹೀಗಾಗುತ್ತಿದ್ದಾನೆ ಹೇಳುವುದೇ ಅರ್ಥವಾಗದ ವಿಷಯವಾಗಿಬಿಟ್ಟಿದೆ.ಚನ್ನಾಗಿ ಓದಲಿ .ತನ್ನಂತೆ ಕಷ್ಟ ಪಡದೆ ಇರಲಿ ಎಂದು ಅಂತಾರಾಷ್ಟ್ರೀಯ ಮಟ್ಟದ ಶಾಲೆಗೇ ಸೇರಿಸಿದ್ದೇನೆ.ಜನಮಾನಸದ ಮದ್ಯೆ ಕೀಳು ಆಗದಿರಲಿ ಹೇಳುವ ಕಾರಣಕ್ಕೆ ಲಕ್ಷ ಕೊಟ್ಟು ಎಂಜಿನೀರ್ ಓದಿಸುತ್ತಿದ್ದೇನೆ.ಅದರೂ ..ಯಾಕೊ ತಾನು ಹೇಳಿದ ಮಾತು ಕೇಳುತ್ತಿಲ್ಲ ಶಶಾಂಕ ಹೇಳುವುದು.ನಿಧಾನಕ್ಕೆ ಅರ್ಥವಾಗುತ್ತಿದೆ.

ಯಾಮಿನಿ ಆತನ ರಾತ್ರಿಯ ತಬ್ಬಿಕೊಂಡಿತು.
                                                                                                                             (contd....)

Sunday, June 19, 2011

ಜಾಗತೀಕರಣ ಮತ್ತು ಅಪ್ಪಂದಿರ ದಿನ

ಗಣಪತಿಯ ಆಕಾರವೇ ಎಷ್ಟು ವಿಚಿತ್ರ ಅಲ್ಲವಾ..ಒಂದು ಬಗೆಯ ವಿಚಿತ್ರ ಅಕಾರ .ಡೊಳ್ಳು ಹೊಟ್ಟೆ ,ಸೊಂಡಿಲು ,ಇಲಿ ಹಾವು ..ನಾವು ವಿಕಾರ ಮತ್ತು ಅಪೂರ್ಣತೆಯನ್ನ ಪೂಜೆ ಮಾಡ್ತು. ಪೂರ್ಣತೆಯ ಹಂಬಲಕ್ಕಾ??..ಬಿಡು.ಮೊದಲು ಮೃಥಿಕಾ ಪೂಜೆ ಅಂತ ಮಣ್ಣನ್ನೇ ತಂದು ಪೂಜೆ ಮಾಡಿ ಹಾಗೆ ವಿಸರ್ಜನೆ ಮಾಡ್ತಿದ್ದರಂತೆ. ಆ ಮೇಲೆ ಮೆಲ್ಲ ಮೆಲ್ಲನೆ ಆಕರ ಬರೋಕೆ ಶುರುವಾಗಿರಬೇಕು.ಚೌತಿ ಹಬ್ಬ ಅಂದರೆ ದೂರ್ವೆ ಗುಡ್ಡ ಹತ್ತಿ  ಕಿತ್ತು ತರುವ  ಗರಿಕೆ ,ವಿಷ್ಣು ಕಾಂತಿ. ಮನೆಯಲ್ಲಿ ದೇವರ ಮಂಟಪದ ಎದುರು ಇರುವ ಅಟ್ಟಣಿಗೆಯಲ್ಲಿ ಕಟ್ಟುವ ಪಲವುಳಿಗೆ (ಫಲಾವಳಿ)ಆ ಹೊತ್ತಿಗೆ ಬಿಡುವ ಹಣ್ಣು ಹೂವು ,ಕಾಡಿನ ಎಂತೆತದೋ ಹೂವು.ಅವೆನ್ನೆಲ್ಲ ತಂದು ಕಟ್ಟೋದು ರೂಡಿ.ಸುತ್ತ ಮುತ್ತ ಸಿಗುವುದರಲ್ಲೇ ಹಬ್ಬಕ್ಕೆ ಚಂದ ಮಾಡುವ ಸಡಗರ.ಮನೆ ಎದುರು ಮಾವಿನ ಚಂಡೆ ,ಚಕ್ಕುಲಿ ಕಾಯಿಕಡುಬು.,ಸರಿಯಗುವುದ್ದಕ್ಕಿಂತ ಹಾಳೆ ಆಗುವ ಪಂಚಕಜ್ಜಾಯದ  ಹದ.

ಹಬ್ಬಕ್ಕೆ ವಾಸನೆ ಇರ್ತದೆ ಅಂದ್ರೆ ಯಾರದ್ರೂ ನಗಬಹುದು ,ಆದ್ರೆ ನಮಗೆ ಬರಲಿಕ್ಕಿಲ್ಲ.ಚೌತಿ ಹಬ್ಬ ಬರೋ ಹೊತ್ತಿಗೆ ಮಳೆಗಾಲದ ದೊಡ್ಡ ಹೊಡೆತ ಮುಗಿದಿರುತ್ತದೆ.ಹೂ ಬಿಡೋ ಗಿಡ ಎಲ್ಲ ಹೂ ಬಿಟ್ಟು ಜೋತಾಡ ತೊಡಗುತ್ತಿರುತ್ತವೆ.ಕೆಸರು ಥಂಡಿ ಎಲ್ಲ ಒಣಗಿದ್ದರು ತೇವ ಏನೂ ಹೋಗಿರೋದಿಲ್ಲ.ನಮ್ಮ ಮನೆಗಳಲ್ಲಿ ಚಕ್ಕುಲಿಯ ಪರಿಮಳ ಬರೋದು ಚೌತಿಲಿ ಮಾತ್ರ ಅಲ್ವ.ಚೌತಿ ಹಬ್ಬದ ಹಾಡನ್ನ ಬೇರೆ ಯಾವಾಗಲು ಹೇಳಲ್ಲ.ಜೋರು ಜಂಗಟೆ  ಆಗೀಗ ಬೀಳುವ ಹನಿ ಹನಿ ಮಳೆ.ಎಲ್ಲ ಸೇರಿ ಒಂದು ಆವರಣ ಸೃಷ್ಟಿಯಾಗಿರತ್ತೆ.ಚೌತಿ ಹಬ್ಬ ಅಂದ್ರೆ ಇದೆಲ್ಲ ನೆನಪಿಗೆ ಬರತ್ತಲ್ವಾ.ದೀವರು ಗೌರಿ ಬಿಡುವ ವರೆಗಿನ ಎಲ್ಲ ಚಿತ್ರಣಗಳೂ.

ಬರೀ ಚೌತಿಗಲ್ಲ ,.ನವರಾತ್ರಿಗೆ ದೊಡ್ದಬ್ಬಕ್ಕೆ.,ಈಗಲೂ -ಮಟ ಮಟ ಮಧ್ಯಾನ್ನದಲ್ಲೂ ಕಣ್ಮುಚ್ಚಿ ಕುಳಿತರೆ ಆ ಘಮ ಮೂಗಿಗೆ ಬಡಿಯತ್ತೆ. ಒಳಗೆಲ್ಲೋ ಇಳಿದು ನಡುಮನೆಯ ಮಂದ ಕತ್ತಲು ,ವಳ್ಳೆಣ್ಣೆ   ಕಂಪು ಗಂಟೆಯ ಶಬ್ದ ತುಂಬಿಕೊಳ್ಳುತ್ತದೆ. ಶ್ರೀಪಾದು ಈ ವಾಸನೆಯನ್ನ ಹಿಡಕೊಂಡ್ರೆ ಮಾತ್ರ  ನಾವೆಲ್ಲ ಹೇಳುವ "ಜಾಗತೀಕರಣ" ವನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ.ನೋಡು ನಾನು ನೀನು ಈಗ ದೂರ್ವೆ ಕೊಯ್ಯೋದಿಲ್ಲ.ಫಲವುಳಿಗೆ ಬಹುಷಃ ದೊಡ್ಡಪ್ಪ ಶಾಸ್ತ್ರಕ್ಕೆ ಅಂತ ಕಡ್ತಾರೆ.ಅಮ್ಮ ಒಬ್ಳೇ ಚಕ್ಲಿ ಮಾಡಬೇಕಲ್ಲ ಅಂತ ಮಾಡೋದು. ಈಗಿನ ಮಕ್ಳು ನಾನು ಜನ್ಗಟೆ ಹೊಡಿತಿ ,ನಂಗೆ ಜನ್ಗಟೆ ಬೇಕು ಅಂತ ಅತ್ತು ರಂಪ ಮಾಡೋದಿಲ್ಲ.ಗರಿಕೆ ಹುಲ್ಲು ಬೇಕೇ ಬೇಕು ಅಂತ ಇಲ್ಲ. ಗಣಪತಿ ಸಾಗರದಿಂದ ಬರತ್ತೆ ಮತ್ತು ನಾನು ನೀನು ಎಲ್ಲ "ಗಣೇಶ ಚತುರ್ಥಿ"ಗೆ ಅಂತ ಕೊಡುವ ರಜಕ್ಕೆ ಊರಿಗೆ ಬರ್ತೇವೆ.ಹಬ್ಬದ ದಿನ ನಮಗೆ ಮೀಟಿಂಗ್ ಇದ್ರೆ ಮೀಟಿಂಗೆ ಮುಖ್ಯ. ಹಬ್ಬ ಏನೂ ಮುಂದಿನ ವರ್ಶಾನೂ ಬರತ್ತೆ ಅಲ್ವ.

"ಅಪ್ಪಂದಿರ ದಿನ " ಹೆಸರು ಕೇಳಿದ್ರೆ ಗೊತಾಗತ್ತೆ ಅದು ನಮ್ಮ ಹಬ್ಬ ಅಲ್ಲ ಅಂತ,.ಪಿತೃ ದೇವೋ ಭವ ಅಂತ ದಿನಾ ಮಂತ್ರದಲ್ಲಿ ಹೇಳ್ತಿವಿ ನಾವು.ಪ್ರೀತಿಸುದಕ್ಕೆ .,ಅದನ್ನ ವ್ಯಕ್ತ ಪಡಿಸುವುದಕ್ಕೆ ಇಂತದ್ದೆ ದಿನ ಹೇಳಿ ನಾವು ಮಾಡಿತ್ತುಕೊಂಡಿದ್ದಲ್ಲ.ಅಪ್ಪನ ಪ್ರೀತಿಯನ್ನ ಕೇವಲ ಒಂದು ದಿನಕ್ಕೆ ಫಾರ್ಮಾಲಿಟಿ ಮಾಡಿಕೊಂಡಿಲ್ಲ ನಾವು.ಬಹುಷಃ ನಾವು ದಿನವೂ ಅಪ್ಪನ ಕಾಲಿಗೆ ನಮಸ್ಕಾರ ಮಾಡಿಯೇ ತೀರ್ಥ ತಗೊಳ್ತಿವಿ.ಅಲ್ವಾ

ಇದಕ್ಕೆ ಏನಂತ ಹೆಸರಿಡೋಣ .ನಮ್ಮ ಮನೆಯ ಚೌತಿ ಹಬ್ಬ ಅರಿವಿಗೆ ಬರದಂತೆ ನಿಸ್ತೇಜವಾಗೋದು.ಮಾರಿಜಾತ್ರೆ ಮೂಡ ನಂಬಿಕೆ ಅನ್ಸೋದು.fathers day ,mothers day  feb-14 ನಮ್ಮ ಮನೆಯಂಗಳಕ್ಕೆ ಮನೆಯೊಳಗೇ ಬಂದು ಕೂರೋದು.ಹೊಗೊಪ್ಳಲ್ಲಿ ಇನ್ನೊಂದು ಹತ್ತು ವರ್ಷಕ್ಕೆ  ಜನವೇ ಇಲ್ಲದಂತಾಗುವುದು.ಇನ್ನೊಂದು ಇಪ್ಪತ್ತು ವರ್ಷಕ್ಕೆ  ಜನ ಯಾರೂ ಇರಲ್ಲ ಹೇಳಿ ವಾಪಸ್ಸು ಹೋಗ್ತಾರೆ ಅಂತ ದೀವರು ಗೌರಿ ಹಬ್ಬದ ದಿನಾನೆ ಗೌರಿನ ಹೊಳೆಗೆ ಬಿಟ್ಟು ಬರುವಂತಾಗುವುದು.??

ಇದ್ಯಾವ್ದೂ ಅರ್ಥವಾಗದೆ ದೇಶದ ಬಗ್ಗೆ ,ಜಾಗತೀಕರಣದ ಬಗ್ಗೆ ,ಪ್ರಗತಿಯ ಬಗ್ಗೆ ,ನಮಗೆ ಬೇಕಿರುವ ಪ್ರಗತಿಯ ಬಗ್ಗೆ  ಮಾತಾಡಿ ಪ್ರಯೋಜನವಿಲ್ಲವೇನೂ???

(ನನಗೆ ಬಂದ ಒಂದು ಪತ್ರ, ಅಪ್ಪಂದಿರ  ದಿನದ ಭರಾಟೆಯ ಹಿನ್ನಲೆಯಲ್ಲಿ ಹಾಕ್ತ ಇದ್ದಿ )

Monday, June 13, 2011

ತಲ್ಲಣಿಸದಿರು ಕಂಡ್ಯ ತಾಳು ಮನವೆ..............

ಆತ್ಮೀಯ .,

ನಮ್ಮ ಅತೃಪ್ತಿ ಮತ್ತು ಮಿತಿಗಳು ನಮಗೆ ಕಾಣುವುದಕ್ಕೆ ಶುರುವಾಗುವುದು ನಮ್ಮೆದುರು ಆ ಕೊರತೆ ಇಲ್ಲದವರು ನಿಂತಾಗ.ಅಂಥದೊ ಮಂಕು ಸಿಟ್ಟು ಬೇಜಾರು ,ನಮ್ಮ ಖುಷಿಯ ಸಂತೋಷದ  ಒಂದಷ್ಟು ಕ್ಷಣಗಳನ್ನ  ಯಾರೋ ನಮ್ಮಿಂದ ಕಿತ್ತುಕೊಂಡು ಬಿಟ್ಟರು ಅನ್ನುವ ಸಿಟ್ಟು.ಈ ದುಗುಡ ಶಾಂತ ಆಗೋದು ಮತ್ತೆ ಅಮ್ಮ ನೆನಪಾಗಿ ,ಹಪ್ಪಳ ಉಪ್ಪಿನಕಾಯಿ ಮಾಡುವುದರಲ್ಲೇ ಖುಷಿ ಕಾಣುವ ಅಮ್ಮ .ಅಜ್ಜಿ.ಇದನ್ನೆಲ್ಲಾ ದಾಟುವುದಕ್ಕೆ ಸಾದ್ಯವಿದ್ದೂ ದಾಟದ ,.ಇಂತದ್ದಕ್ಕೆಲ್ಲ ಹೊಂದಿಕೊಳ್ಳಲಾಗದೆ ಮೀರುವ ದಾರಿಯೂ ಗೊತ್ತಿಲ್ಲದೇ ಒದ್ದಾಡುವ ನೆಂಟರಿಷ್ಟರು  ಇವರೆಲ್ಲ ನೆನಪಾದಾಗ .ದಿನನಿತ್ಯದ ಅಗತ್ಯಗಳಿಗೆ ಬಲವಂತದ ಕಡಿವಾಣ ಹಾಕಿ ಕೇಳಿದಾಗ ದುಡ್ಡು ಕೊಡುವ ಅಪ್ಪ ನೆನಪಾದಾಗ.
ಅದರೂ
ಏನೋ ಕಹಿ ಏನೋ ಕೊಸರು ಒಳಗೊಳಗೆ ವಿಷವಾಗಿಬಿಡುವ ಭಯ.
ಎಲ್ಲರೂ ಕ್ಯಾಮೆರಾ ಇರುವ ಮೊಬೈಲ್ ತಗೊಂಡಾಗ ., ಕೈಲ್ಲಿ ಸೆಲ್ಲೆ ಇಲ್ಲದ ನಾವು ಕಿಳರಿಮೆಯಿಂದ ನರಳುವಾಗ ,ಅದನ್ನೇ ಬೇರೆಯವರು ಎತ್ತಿ ಆಡಿದಾಗ  ಯಾಕೋ ಅಳು ಬಂದು ಬಿಡ್ತದೆ.ಛೆ ಯಾವಾಗ ಇದೆಲ್ಲ ಮುಗಿಯುತ್ತದೆ.ನನ್ ಹತ್ರ ಯಾರೂ ಹೊಸ ಸಿನಿಮ ಬಗ್ಗೆ ಕೇಳಲ್ಲ.ಹೊಸ ಫ್ಯಾಶನ್ ಬಗ್ಗೆ ಮಾತಾಡಲ್ಲ.ಬೇರೆ ಹುಡುಗಿಯರ ಜೊತೆ ಮಾತನಾಡುವ ಹಾಗೆ ಮಾತಾಡಲ್ಲ.ಹೇಗೆ ಇದನ್ನೆಲ್ಲಾ ನಿನಗೆ ಮೀರುವುದಕ್ಕೆ (?!) ಸಾದ್ಯವಾಯಿತು  ಅಂತೆಲ್ಲ ಕೇಳ್ತಾರೆ.ಯಾಕೆ ನಿನಗೆ ಬೇರೆ ಹುಡುಗಿಯರ ತರಹ ಆಕರ್ಷಕವಾಗಿ ಡ್ರೆಸ್ ಮಾಡಿ ಮಿಂಚಬೇಕು ಅನ್ಸಲ್ಲ ಅಂತ ಕೇಳ್ತಾರೆ.ಹೇಗೆ ಹೇಳಲಿ ಅದೆಲ್ಲ ನಾನು  ಆಯ್ಕೆ ಮಾಡಿಕೊಂಡದ್ದು ಅಲ್ಲ ಅಂತ. ಒದಗಿ ಬಂದದ್ದು ಅಂತ.

ಹೇಳಿಕೊಳ್ಳದಿದ್ದರೆ ವಿಷವಾಗಿಬಿಡುವ ಭಯ., ಹೇಳಿಕೊಂಡರೆ ಖಾಸಗಿತನವೆಲ್ಲ ಕಳೆದುಕೊಂಡು ಕಾಲಿ ಕಾಲಿ ಅದಂತೆ.

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲುಹುವನು ಇದಕೆ ಸಂಶಯವಿಲ್ಲ.........


ಯಾಕೋ ಎಲ್ಲ ಜಾಳು ಜಾಳು ಪದಗಳೆನ್ನಿಸುತ್ತಿದೆ.ನಿನ್ನ ನೆನಪೊಂದು ಬಿಟ್ಟು .ಪ್ರೀತಿಯಿಂದ

Sunday, May 29, 2011

ಹೀಗೊಂದು ಕನ್ನಡಿ ಕಥಾನಕ

ಅದೊಂದು ಚಂದದ ಕನ್ನಡಿ.ಮೂಲೆಗಳೇ ಇಲ್ಲದ ನವಿಲಿನ ಗರಿಯ ರೂಪುಗಳುಳ್ಳ ಮೇಲ್ಪದರದಲ್ಲಿ ಅನ್ಕುಡೊಂಕಿಲ್ಲದ ಎಲ್ಲರೂ ಇಷ್ಟ ಪಡುತ್ತಿದ್ದ ಕನ್ನಡಿ.ಕನ್ನಡಿಗೆಲ್ಲ ಇರುವ ಮತ್ತೊಂದು ವಿಶೇಷತೆ ಅಂದ್ರೆ ಅದು ಹಿಂದೆ ಮರೆಸಿ ಮುಂದೆ ತೋರಿಸುತ್ತದೆ.ಎಲ್ಲ ಜನರು ಬಯಸುವಂತೆ.ಒಳಗೇನು ಹೇಳುವದರಕ್ಕಿಂತ ಹೊರಗೆ ಏನು ಹೇಳುವಂತೆ.ಮುಖವಾಡದ ಅಂತ್ಯಂತ ಸುಂದರ ಮೂರ್ತರೂಪ ,ವಿಶೇಷ ಸೃಷ್ಟಿ ಕನ್ನಡಿ. ಒಳಗೆ ಏನೂ ಹೊರಗೆ ಮತ್ತೊಂದೇನೂ.

ಪಾಪ ನಮ್ಮ ಈ ಕಥೆಯ ಕನ್ನಡಿಗೆ ಅವೆಲ್ಲದರ ಜೊತೆ ಮತ್ತೊಂದು ಶಕ್ತಿ  ಇತ್ತು., ಎದುರಿಗೆ ಇದ್ದಿದ್ದರ ಬಿಂಬ ಚನ್ನಾಗಿತ್ತೋ ಇಲ್ಲವೂ ಪ್ರತಿಬಿಂಬ ಸುಂದರವಾಗಿರುತ್ತಿತ್ತು.ಚಂದಾಮಮನ ಕತೆಯಲ್ಲಿ ಬರುವ ಮಾಯಾ ದರ್ಪಣದ ತರಹ.ಗಜಾಗಮಿನಿಯನ್ನು ಹಂಸಗಮನೆಯನ್ನಾಗಿಯೂ .,ಅಷ್ಟಾವಕ್ರನನ್ನು ಸ್ಪುರದ್ರೂಪಿಯನ್ನಾಗಿಯೂ ತೋರಿಸಬಲ್ಲ ಅದ್ಬುತ ಕಲೆ ಇತ್ತು.ಸಹಜವಾಗಿ ಎಲ್ಲರಿಗೂ ಪ್ರಿಯವಾಗಬಲ್ಲ ಗುಣ.ಎಲ್ಲರು ಬಂದು ಪ್ರತಿಬಿಂಬವ ನೋಡಿ ಖುಷಿ ಪಡುವವರೆ.

ಕನ್ನಡಿಯ ಮನಸಿನ ಒಳಗಿನ ತಲ್ಲಣವ ಅರ್ತ ಮಾಡಿಕೊಳ್ಳುವ ಗೂಜಿಗ್ಯಾರೂ ಹೋಗುತ್ತಿರಲಿಲ್ಲ.ಕನ್ನಡಿಗ್ಯಾರು ಕನ್ನಡಿ ಹಿಡಿದಿರಲಿಲ್ಲ.ಅದೊಂದು ಕಾಳ ರಾತ್ರಿ.ಕಾಕೋಳು ರಾಮಯ್ಯನ ಕಾದಂಬರಿಯಲ್ಲಿ ಬರುವಂತಹದ್ದು.ಕನ್ನಡಿ ತನ್ನೊಳಗಿನ ಬವಣೆಗಳ ಭಾವನೆಗಳ  ಎಲ್ಲ  ಹೊರಹಾಕುವ ನಿರ್ಧಾರದೊಂದಿಗೆ ರೂಪ., ಗುಣಗಳ ಬದಲು ಮಾಡಿಕೊಂಡು ಬೆತ್ತಲಾಗಿತ್ತು.ಜಗತ್ತನ್ನ ಬೆತ್ತಲು ಮಾಡುವ ಹಂಬಲದೊಂದಿಗೆ.

ಮರುದಿನ ಗಜಗಮನೆ  ಗಜಗಮನೆಯಾಗೆ ಇದ್ದಳು.ಮತ್ತೆ ಅಷ್ಟಾವಕ್ರಾ ಅಷ್ಟವಕ್ರನಾಗೆ .ನಿಜವ ಅರಗಿಸಿಕೊಳ್ಳುವ ., ಹೊಟ್ಟೆಗಿಳಿಸಿ ಭುಜಿಸಿಕೊಳ್ಳುವ ಮನವಾಗಲಿಲ್ಲ.ಕಲ್ಲು ಹೊಡೆದರು .ಕನ್ನಡಿಯ ರೂಪ ಕಳಚಿಕೊಳ್ಳುವ ಹಂಬಲಕ್ಕೂ ಸೇರಿಸಿ . ಚೂರಾಯಿತು.ಕನ್ನಡಿಯ ಅಳುವ ಕಾಣುವ ಕನ್ನಡಕ ಯಾರಲ್ಲೂ ಇರಲಿಲ್ಲ.

"ನಮ್ಮ ಕನ್ನಡಿ ಹೀಗೆ ಅಂತ ಗೊತ್ತಿರಲಿಲ್ಲ"
"ಕನ್ನಡಿಯ ಒಳಗೆ ಇನ್ನೆಷ್ಟು ಬಣ್ಣವೋ"
"ಈ ಕನ್ನಡಿ ಸರಿ ಇಲ್ಲವೆಂದು ಕಾಣಲೇ ಇಲ್ಲ . ಛೆ"

ಆಳಿಗೊಂದು ಕಲ್ಲು .,.,ಅವಕಾಶ ಬಿಟ್ಟಾರೆಯೇ??.ಕನ್ನಡಿಯ ಕಲ್ಲೆದೆ ಒಡೆಯಿತು.ಬಿಂಬಗಳು ಮುಸುಕಾಗತೊಡಗಿದವು.ಕನ್ನಡಿಯಿಂದ ಕುಶಿ ಪಡೆದವರ ಕವಾಟಗಳು ಬದಲಾಗಲಿಲ್ಲ.ಒಬ್ಬ ಸಹೃದಯಿ ಬಂದ ಎಲ್ಲಿನ್ದಾನೋ.ಮರುಭೂಮಿಯಲ್ಲಿ ಅಪರೂಪಕ್ಕೆ ಸಿಗುವ ಓಯಸಿಸ್ ತರಹ. ನೋಡಲಾಗಲಿಲ್ಲ ಕನ್ನಡಿಯ ಕಣ್ಣಿರ.ತೇಪೆ ಹಚ್ಚಿದ.ಅಂಟಿಸಿದ.ಒಂದಿಷ್ಟು ಮೂಲೆಗಳೊಂದಿಗೆ ಮತ್ತೆ ಗಾಜು  ಕನ್ನಡಿಯಾಯಿತು.

ಇಂದು ಮನ್ಮಥನ ಪ್ರತಿಬಿಂಬ ಕೂಡ ಅಂಕುಡೊಂಕು.Thursday, May 26, 2011

ದೇವರು-೩

...ಬರ್ಜರಿ ಚಪ್ಪರ ಕಂಡಿತ್ತು ಕೊಪ್ಪಲು.,ಕೊಪ್ಪಲ ಊರವರ  ಮಾತಿನ ಸಂಬ್ರಮಕ್ಕೆ ಒಣಗಿದ ಸೋಗೆಯ ಗರಿಯ ಸದ್ದು ಕಳೆದು ಹೋಗಿತ್ತು.ಹರಿ ಬಟ್ಟರ  ಮಂತ್ರದೊಂದಿಗೆ ಸಂಗೂಪಾಂಗವಾಗಿ ನಡೆದ ಹೋಮ .,ಆ ಬ್ರಹ್ಮಗಣಪತಿಯ ಬರುವಿಕೆಗೆ ಹೆದ್ದಾರಿಯನ್ನೊದಗಿಸಿತ್ತು.ದೇವರ ಪ್ರಾಣಪ್ರತಿಷ್ಟೆಯೊಂದಿಗೆ ದೇವಸ್ಥಾನ ನೆಲೆ ಊರಿತ್ತು.

"ನಿನ್ನಿಂದಾಗಿ ಊರಿಗೊಂದು ಗುರುತು ಬಂತು ಗಪ್ಪಣ್ಣ....ದೇವರು ತಣ್ಣಗೆ ಇಟ್ಟಿರ್ಲಿ ನಿನ್ನ" ಎಂದು ಹರಸಿ ಹೋಗಿದ್ದಳು ಪುಟ್ಟಜ್ಜಿ.ಅಷ್ಟೆಲ್ಲ ಕಾರ್ಯ ಮಾಡಿದ ಗಪ್ಪಜ್ಜನಿಗೂ ಒಂದು ಶಾಲು ಹೊಡೆಸಿ ಮಾಡಿದ ಕಾರ್ಯಕ್ರಮದಲ್ಲಿ ಹೋಗಳದವರಿಲ್ಲ ಗಪ್ಪಜ್ಜನನ್ನ.
ದೇವರು ಸಂತುಷ್ಟನಾಗಿದ್ದನೂ ಇಲ್ಲವೂ ,.ಗಪ್ಪಜ್ಜನಾಗಿದ್ದ.

ವೆಂಕಣ್ಣ ಹೊಟ್ಟೆಯಲ್ಲೇ ಅವಲಕ್ಕಿ ಕುಟ್ಟಿದ್ದ.

                                         ------------------------------------------------------------------------------------------------------------------------------------------------

ಕಮಿಟಿಯ ಸಭೆಯಲ್ಲಿ ., ಕಾರ್ಯದರ್ಶಿ ವೆಂಕಣ್ಣನ ತಕರಾರು ಸರಿಯಿತ್ತೆಂದು ಎಲ್ಲರಿಗೂ ಅನಿಸಿತ್ತು.ಅಲ್ಲ ಬ್ಯಾಡ ಬ್ಯಾಡ ಅಂದ್ರೂ  ನಾಲ್ಕು ವರ್ಷದ ಹಿಂದೆ  ಕುಣ್ಕಂಡು ಕುಣ್ಕಂಡು ದೇವಸ್ಥಾನ ಕಟ್ಟಿದ..ಇಗ ಕಮಿಟಿ ನಿರ್ಧಾರ ಮಾಡಿರ ವರಾಡ ಕಟ್ಟದಿಲ್ಲೇ ಅಂದ್ರೆ ಹೆಂಗೆ??.,ಒಂದ್ ದೇವಸ್ಥಾನ ನೆಡ್ಸದು ಅಂದ್ರೆ ತಮಾಷೆ ವಿಷಯವಾ..??

ಗಪ್ಪಜ್ಜ ., ನಿದಾನದ ದನಿಯಲ್ಲಿ ನುಡಿದ."ವೆಂಕು, ನಮ್ಮುರಿಂದು ಹೊಳೆ ಆಚೆಗಿನ ಜಮೀನು .,ಸವಳು ನಿಂಗಳಷ್ಟು ಪಸಲು ಬತಲೇ.,ವರಾಡ ಕೊಡದಿಲ್ಲೆ ಅಂತ ಹೇಳದಿಲ್ಲೆ., ನ್ಯಾಯಯುತವಾದ ವರಾಡ  ಹಾಕು"

"ಸುಮ್ಮನ್ಗಿರಾ ., ನೀ ಕೃಷಿ ಮಾಡದೇ ಇದ್ದದ್ದಕ್ಕೆ ., ಇಲ್ದೆ ಇರ ಸಬೂಬು ಹೇಳಡ"

"ನೋಡು ., ಇದೆ ವರಾಡ ಆದ್ರೆ ನಂಗೆ ಕೊಡದು ಕಷ್ಟ., ಧರ್ಮ ಹೇಳಿ ಬನ್ನಿ ., ನೋಡಿ ಮಾಡಿ ಕೊಡ್ತಿ"

ಮೀಟಿಂಗ್ ಮುಗ್ದಿತ್ತು.ಹೆಜ್ಜೆಗಳು ಭಾರವಾಗಿತ್ತು.
                                                ------------------------------------------------------------------------------------------------------------------------------------

ಮರುದಿನ ಊರಿನ ಪಂಚಾಯ್ತೀಗೆ ನಿರ್ದಾರ ,ಗಪ್ಪಜ್ಜನ ಕಿವಿಗೆ ಬಿದ್ದಿತ್ತು., 'ವರಾಡದ ವಿಷಯವಾಗಿ ಗಪ್ಪಜ್ಜನ ಮನೆಯನ್ನ ಬಹಿಷ್ಕಾರ ಮಾಡಕ್ಕು'

ದೇವರು ಕೊಪ್ಪಲಿನಿಂದ ಹೆಜ್ಜೆ ಆಚೆ ಇಟ್ಟಿದ್ದ ಅವತ್ತು ಸಂಜೆ                             

Wednesday, May 18, 2011

ಒಂದಿಷ್ಟು ಅಸ್ಪಷ್ಟ ಪದಗಳು

ಮನಸ ಹಗೇವಿನಲಿ ಅಡ ಮಾಡಿ
ಕುದಿಯುತಿಹ ನೋವು
ಬೆಂದ ಅಡಕೆಯ ಕಣ್ಣು ಬಿಟ್ಟಂತೆ
ಕಳಚಿಟ್ಟು ಹೋದ ನೆನಪು

ಗಿಡ ಮಾಡಿ ನೆರಳಿತ್ತು,ಬಸಿರಂತೆ
ಕಾಪಿಟ್ಟು,ಸಿಂಗಾರ ಶೃಂಗಾರ ಮಾಡಿ
ನಿಂತಿಹ ಮರದ ಬೇರು ಸತ್ತಿಹ ವಾಸನೆ
ಬದುಕ ಬಲ್ಲದೆ ಜೀವ ಪಸಲ ಹೊತ್ತು

ನೇದಿಟ್ಟ ಹೂವು ತನಗಲ್ಲವೆಂದು
ಸ್ಪರ್ಶ ಪ್ರೀತಿಯ ಸಾಂದ್ರಕೆ
ಕ್ಷಯವಿತ್ತೆ ಹೂವಾಡಗಿತ್ತಿ
ಕೈ ಸೋತಿತೇಕೆ ನಿನಗೆ??

ಹಣ್ಣಾದ ಕಾಲಕೆ ಎಲೆ ಉದುರುವಾಗ
ಯಾರು ಹೊಣೆ ಅದಕೆ,ಹಿಡಿಯ
ರಿಯದ ತರುವೋ
ತೂರಿಬಿಟ್ಟ ಗಾಳಿಯೋ,ಕೈಬಿಟ್ಟ ಎಳೆಯೋ??

Tuesday, May 17, 2011

ಒಂದು ಹಾಳು ಯೋಚನೆ

ಈ ಹುಡುಗಿಯರು ಮುಟ್ಟಿದ್ದೆಲ್ಲ ಹಾಳು ಅಲ್ದಾ ?? ಒಂದು ಹುಡುಗಿ ಹಾರ್ಟ್ ಟಚ್ ಮಾಡಿದ ಅಂದ್ರೆ ಹಾರ್ಟ್ ಹಾಳಾಗ್ತು.ಕನಸಲ್ಲಿ ಬಂದ್ರೆ ನಿದ್ದೆ ಹಾಳು.ನೆನಪಿನ ತಡಿಕೆಯ ಪ್ರತಿ ಮಡಿಕೆಯನ್ನ ಮುಟ್ಟಿ ಹೋಗ್ತಾ ಹಾಳಾದ ನೆನಪುಗಳು ಮರೆತೇ ಹೋಗುವುದಿಲ್ಲ.ತಣ್ಣಗೆ ಕೊಟ್ಟ ಮುತ್ತು ಹಾಳಾದ್ದು ವರ್ಷಗಟ್ಟಲೆ ಸುಡುತ್ತದೆ.ಈ ತರದ್ದೊಂದು ಸೃಷ್ಟಿಯ ಬಗ್ಗೆ ಬ್ರಹ್ಮನಿಗೆ ಕಲ್ಪನೆ ಮೂಡಿದ್ದಾದರೂ ಹೇಗೆ?? 


ಮೊನ್ನೆ ಮೊನ್ನೆ ಗಾಡಿ ಮುಟ್ಟಲು ಕೊಟ್ಟೆ.ರಾತ್ರಿ TV ಲಿ ಸುದ್ದಿ..ಹಾಳಾದ್ದ ಪೆಟ್ರೋಲ್ ರೇಟು ೫ ರುಪಾಯೀ ಜಾಸ್ತಿ ಹೇಳಿ.

Sunday, May 15, 2011

ದೇವರು-೨

ಮೂರ್ ಮನೆ ಸುಬ್ಬುವಿನ ಮನೆಯ ಮೆತ್ತಿಯ ಮೇಲ್ಗಡೆ ಇಸ್ಪೀಟ್ ಆಡುತ್ತ ವೆಂಕಪ್ಪ ಮಾತಿಗೆ ಶುರುವಿಟ್ಟ."ಅಲ ಈ ದೇವಸ್ಥಾನ ಅಂದ್ರೆ ಸುಮ್ಮನೆಯಾ.,ಪೂಜೆ ಮಾಡಲೇ ಭಟ್ರು  ಬೇಕು ದೇವಸ್ತಾನಕ್ಕೆ ಅಂತ ಜಾಗ ಬೇಕು.,ನಡೆಸಿಕೊಂಡು ಹೊಪರೊಬ್ರು ಬೇಕು.,ಹರ ಹರ ಅನ್ನೋ ಮುದಕಂಗೆ ತಣ್ಣಗೆ ಇಪ್ಪಲೇ ಅಗದಿಲ್ಲವ, ತಗಳ ಆಟೀನ್ ರಾಣಿ" ರಪ್ಪನೆ ವಾಲೆಯ ವಗದು ಹೇಳಿದ. ರಾಮಾನಂದ  ಕಣ್ಣು ಕಿರಿದು ಮಾಡಿ " ನಂಗ ಬ್ರಾಹ್ಮಣರು.,ದೇವರು ನಮಗೆ ತಾತ್ವಿಕವಾಗಿಯೂ ವ್ಯಾವಹಾರಿಕವಾಗಿಯೂ ಒಂದು ನೆಲೆ ಒದಗಿಸಿ ಕೊಟ್ಟಿದ್ದ.ಜನ ಮರ್ಯಾದೆ ನಮಗೆ ಏನಕ್ಕೆ ಕೊಡ್ತಾ ಇದ್ದ ದುಡ್ಡಿದ್ದು ಹೇಳ ?? .ಇತರ ಜನಾಂಗದ ಮುಂದೆ ಊರಿಗೊಂದು ಮರ್ಯಾದೆ ಇರ್ಲಿ ವೆಂಕ.ದೇವಸ್ಥಾನ ಸಯ್ಯಲ ಕಟ್ಟಿರಾತು.ಒಂಚೂರು ಹೆಚ್ಚುಕಮ್ಮಿ ಆದರೆ ದೇವರೇನು ತಕರಾರು ಮಾಡದಿಲ್ಲೆ".ಸಿದ್ದಜ್ಜನಿಗೆ ಗಿರಿಗೆ ಯಾಕೋ ಮಾತು ಸರಿ ಎನಿಸಿತು.ಅಷ್ಟಕ್ಕೂ ದೀಪಾವಳಿಯಂದು ಇತರ ಜನಾಂಗದವರು ಚೌಡಿಕಟ್ಟೆಯಾ ಮುಂದೆ ತೋರುವ ಭಕ್ತಿಯ ರುದ್ರನರ್ತನ ಎಲ್ಲರ ಕಣ್ಣಿಗೆ ಕಟ್ಟಿದ್ದೆ ಅಲ್ಲವೇ.

ವೆಂಕಪ್ಪನಿಗೆ ಯಾಕೋ ಇರಿಸಿನ್ನು ಹೋದ ಹಾಗೆ ಕಾಣಲಿಲ್ಲ."ಬ್ಯಾಡದೋ ರಾಮಾನಂದ.,ನಿಂಗೆ ಗೊತಾಗ್ತಲ್ಲೇ ಮಾರಾಯ.ಆ ವರಾಡ ದೀಪಕಾಣಿಕೆ ಕಾರ್ತಿಕ ಹೇಳಿ ಸುಮ್ನೆ ದುಡ್ಡು ದಂಡ ಮಾರಾಯ".ಒಳಮನಸ್ಸಿನ ನಿಜ ಬೇಗುದಿಯನ್ನ ತೆರೆದಿಟ್ಟ.ಮರುಕ್ಷಣವೇ ತಾನೆಕೋ ತುಚ್ಛವಾಗಿ ಮಾತನಾಡಿದೆ ಎಂದೆನಿಸಿ ಮಾತು ಕಮಚಿ " ನಿಂಗ ಎಲ್ಲ ಹೆಂಗೆ ಹೇಳ್ತ್ರೋ ಹಂಗೆ" ಎಂದ.ಇಸ್ಪೀಟು ಅಷ್ಟು ಹೊತ್ತಿಗಾಗಲೇ ತನ್ನ ಬಣ್ಣ ಕಳೆದು ಕೊಂಡಿತ್ತೆನಿಸಿತು.ತಣ್ಣಗೆ ಗುಡುಗಿದ ಶಬ್ದ ಕೇಳಿ "ಅರ್ಜುನ ಪಲ್ಗುಣ ಪಾರ್ಥಾ....." ಎಂದೇನೂ ಗುನುಗುತ್ತ ವೆಂಕಪ್ಪ ಎದ್ದು ಹೊರಟ.

                                                                       --------------------------------------------------------------------------------------------------------------------------------

ಪಂಚೆ ನೆಲದವರೆಗೆ ಮುಟ್ಟಿದ್ದರಿಂದ ಕಾಲು ನೆಲದ ಮೇಲೆ ಇತ್ತೋ ಇಲ್ಲವೋ ಗಪ್ಪಜ್ಜನದು ಗೊತ್ತಾಗುತ್ತಿರಲಿಲ್ಲ .ಕೊಟ್ಟಿಗೆಯಲ್ಲಿದ್ದ ಗೌರಿ ಕೂಡ ಪ್ರಸನ್ನವದನಳಾದಂತೆ ಕಾಣುತ್ತಿತ್ತು.ಊರಮನೆ ಮನೆ ಜನರೆಲ್ಲಾ  ಸೇರಿ ದೇವಸ್ಥಾನ ಒಂದು ಆಗಿಬಿಡಲಿ ಹೇಳ ತೀರ್ಮಾನವೂ .,  ರಸ್ತೆ ಮೇಲಿನ .,ದತ್ತುವಿಗೆ ಸೇರಿದ್ದ ಒಂದಿಷ್ಟು ಜಾಗದ ದಾನವೂ ಎಲ್ಲ ಸೇರಿ.ಇನ್ದೆಕೂ ಊರು ನಂದನ ವನದಂತೆ ಕಾಣುತ್ತಿತ್ತು ಗಪ್ಪಜ್ಜನಿಗೆ.ಬೆಂಗಳೂರಿನಲ್ಲಿದ್ದ ರಾಮುವಿನ ಮಗ ಕಾಂತ್ರಾಟುದಾರ ಪ್ರಕಾಶ ತಾ ಕಟ್ಟಿಸಿ ಕೊಡ್ತೆ ದೆವ್ಸ್ತಾನವ ಅಂತೆಲ್ಲ ಹೇಳಿದ್ದು ಕೇಳಿ ಅಬ್ಬ ., ದೇವರು ಬರುವ ಕಾಲಕ್ಕೆ ತಾನೆ ದಾರಿ ಮಾಡಿ ಕೊಳ್ಳುವ  ಅನ್ನುವ ಮಾತು ನಿಜವೆನಿಸಿತ್ತು ಗಪ್ಪಜ್ಜನಿಗೆ.ಇದೊಂದು ಆಗಿಬಿಟ್ಟರೆ ತಣ್ಣಗೆ ಕಣ್ಣುಮುಚ್ಚಲಕ್ಕು ಅಂತ ಹೇಳಿ ಹೆಂಡತಿ ಜಾನಕಿಯ ಹತ್ತಿರ ಬೈಸಿಕೊಂಡೂ  ಆಗಿತ್ತು.೭೦ ರ ಇಳಿವಯಸ್ಸಿನ ಗಪ್ಪಜ್ಜ ಒಂದೇ ದಿನದಲ್ಲಿ ೭೦ ರ ಹರೆಯದ ಗಪ್ಪಜ್ಜನಾಗಿದ್ದ.

ಅಂದಿನಿಂದ ಗಪ್ಪಜ್ಜನಿಗೆ ದೇವಸ್ತಾದ ಕಾಯಕವೇ ಮನೆ ಆಯಿತು.ಏರು ಜವ್ವನದ ಹುಡುಗರು ನಾಚುವಂತೆ ಜಾಗ ಸರಿ ಮಾಡುವ, ದೇವಸ್ತಾನದ ಕಟ್ಟಡ ಕೆಲಸ.ಮೇಲ್ವಿಚಾರಣೆ., ಸರಿಯಾದ ಲೆಕ್ಕ ಪತ್ರ ವಿಚಾರಣೆ ಬಣ್ಣ .,ರೇತಿ ಅಂತ ಹೇಳುತ್ತಲೇ ವರ್ಷವಾಗಿತ್ತು.ಗಪ್ಪಜ್ಜನ ಬೆವರ ಹನಿಯ ಮೂರ್ತ ರೂಪ ಬ್ರಹ್ಮ ಗಣಪತಿ ದೇವಸ್ತಾನ ಊರ ಮದ್ಯದ ಜಾಗದಲ್ಲಿ ನಿಂತಿತ್ತು.

ದೇವರು ಕೊಪ್ಪಲಿಗೆ ಬರಲು ಮಡಿಯುಟ್ಟು ನಿಂತಿದ್ದ.

ದೇವರು - ೧


ಗಣಪತಿಯಜ್ಜ ಮತ್ತೊಮ್ಮೆ ಗಟ್ಟಿಯಾಗಿ ಹೇಳಿದ."ಇಲ್ಲ ನಮಗೊಂದು ದೇವಸ್ತಾನ ಬೇಕು.ದೇವರಿಲ್ಲದ ಊರು ಗಂಡು ದಿಕ್ಕಿಲ್ಲದ ಮನೆ ಎರೆಡು ಒಳ್ಳೆಯದಕ್ಕಲ್ಲ".ಕಾನು ಮನೆಯ ವೆಂಕಪ್ಪ .,ಆಚೆ ದಿಂಬದ ಸಿದ್ದಜ್ಜ .,ಮೊದಲಮನೆ ಗಿರಿಯವರಿಗೆ ಯಾಕೋ ಇದೆಲ್ಲ ಹಿಡಿಸಲಿಲ್ಲ.ಯಾಕೆ ಈ ಮುದುಕನಿಗೆ ಇಲ್ಲದ ಉಸಾಬರಿ ಅನ್ನುವ ಭಾವ ಒಡೆದು ತೋರುತ್ತಿತ್ತು.ನೂರೆಕೆರೆ ತೋಟದ ಒಡೆಯ ದತ್ತುವಿಗೂ ಇದರ ಪರ ಒಲವಿದ್ದುದರಿಂದ ಎದುರಾಡುವ ಧೈರ್ಯ ಯಾರೂ ಮಾಡಲಿಲ್ಲ.ಉಸಿರು ಮಗಚುವ ಮೌನ ಕಂಡು ದತ್ತುವೆ ನಿರ್ಧರಿಸಿದ."ಗಪ್ಪಜ್ಜಾ ಸದ್ಯಕ್ಕೆ ಇಷ್ಟಿರ್ಲಿ.,ಎಲ್ಲರಿಗೂ ನಾಲ್ಕ್ ದಿನ ಯೋಚನೆ ಮಾಡಕ್ಕೆ ಟೈಮ್ ಬೇಡದಾ...".ಮೀಟಿಂಗ್ ಮುಗಿಸಿದ ಹಾಗೆ ಅನಿಸಿದ್ದರಿಂದ ಗಪ್ಪಜ್ಜ ಮನೆ ಕಡೆ ಹೊರಟ.
                                                          ------------------------------------------------------------------
..ಊರು ಅಂದಕೂಡಲೇ ಮನಸ್ಸಿಗೆ ಬರುವಂತಹದ್ದೆ ಊರು ಅದೂ ಕೂಡ.ಮಲೆನಾಡಿನದು.ಬರಾಬ್ಬರಿ ಮಳೆ ಬರುವ ಊರು ನಮ್ದು ಅಂತೆಲ್ಲ ನಾವು   ಬಯಲುಸೀಮೆಗೆ ಹೋದಾಗ ಕತೆ ಕೊಚ್ಚಿ ಮನೆಗೆ ಬಂದದ್ದು ಉಂಟು. ಈಗೀಗ ಆಚೆ ಮನೆಯ  ಗಣಪತಿಯಜ್ಜ ಇವೆಲ್ಲ  ಎಂತ ಮಳೆ .,ಕಲಿ ಎರೆಡನೆ ಕಾಲು ಇಟ್ಟಾ ಅಂತ ಹಲುಬುವುದನ್ನ ಕೇಳಿ ನಕ್ಕಿದ್ದ ನೆನಪು.ಎಂದೂ ನಗೆ ಮಾಸದ ಕವಳದ ಬಾಯಿಗಳ ಕಲರವ .,ಕೆಂಪು ಅಡಕೆಯ ತೊಗರಿನದೆ ಬಣ್ಣದ ಕೆನ್ನೆಯ ಹೆಂಗಳೆಯರ ನಗು.ಎಲ್ಲ ಮೀರುವ ಅವಕಾಶವಿದ್ದೋ ಹಲಸಿನಕಾಯಿಯ ಹಪ್ಪಳ ತಟ್ಟುತ್ತಲೇ ಸಂತೃಪ್ತವಾಗುವ ಕೈಗಳು    .ಇವನ್ನೆಲ್ಲ ಒಡಲೊಳಗೆ ಇಟ್ಟುಕೊಂಡಿದ್ದಷ್ಟೇ ವ್ಯತ್ಯಾಸ.

ದಾಸವಾಳ ,ಸಂಪಿಗೆ .,ಕೌಳಿ ನೇರಳೆ ಮಾವು ಹಲಗೆ ಮುಳ್ಳಣ್ಣು ಲೆಕ್ಕವಿಲ್ಲದ ಹೆಸರಿಟ್ಟುಕೊಂಡ ಊರಿಗೆ ತಾನೊಬ್ಬನಿಲ್ಲವೆಂದರೆ ಹೇಗೆಂದು ದೇವರಿಗೂ ಅನಿಸಿತ್ತೇನೋ.ಊರ ಹಿರಿಯ ಗಣಪತಿಯಜ್ಜ ದೇವರಿಗೆ ಸ್ವಾಗತ ಕೋರಲು ತಯಾರಾಗಿದ್ದ ಒಟ್ಟಿನಲ್ಲಿ.

Saturday, May 14, 2011

....ಮತ್ತು ಪ್ರೀತಿ

ಎನಗೆ ಸಾವಿಲ್ಲವೇ ,ಬರಿ ರೂಪಾಂತರವಷ್ಟೇ.......!!!
ಕಣ್ಣೀರ ಹನಿಯಾಗ್ತೇನೆ ,ಇಲ್ಲಾ ಚರಿತ್ರೆಯ ಪುಟಗಳಾಗುತ್ತೇನೆ,
ಯಾರದ್ದೋ ನಗುವಿನ ಕಾರಣವಗ್ತೇನೆ...,,,,
ಇಲ್ಲಾ ಎಲ್ಲಾದರೂ ರಕ್ತದ ಕಲೆಯಾಗ್ತೇನೆ..,,

ಎನಗೆ ಸಾವಿಲ್ಲವೂ ..,,

ರಕ್ತವಾಗಿ ,ಜೀವವಾಗಿ ,ಹನಿ ಹನಿ
ಮಳೆಯ ನಡುವೆ ತಣ್ಣೀರ ಭಾವವಾಗಿ ,
ಅನಾಮಿಕ ಹುಡುಗಿಯ ಕನಸಿನ ಚಿತ್ರವಾಗಿ ,
ತುಂಟ ತುಟಿಗಳ ನಡುವೆ ಸ್ಪರ್ಶವಾಗಿ ..,,!!

ಬರಿ ರೂಪಾಂತರವಷ್ಟೇ...!!!

ಲೇಖನಿಯ ತುದಿಯ ಮೌನವಾಗಿ ,.
ಮಿಲನ ಸುಖದ ಮೂಲವಾಗಿ .,
ಹಲವು ಭಾವಗಳಿಗೆ ವ್ಯಕ್ತಪ್ರಜ್ಞೆಯಾಗಿ ,
ಗೆಜ್ಜೆಯಾಗಿ .,ಹೆಜ್ಜೆಯಾಗಿ ..,ಕಣ್ಣರೆಪ್ಪೆಯ ಸದ್ದಾಗಿ
ತರುಣ ಮನಸಿನ ಪಿಸುಮಾತಾಗಿ .

ನಾನು ಪ್ರಿತಿಯಾಗ್ತೇನೆ ....

ತೋಳಹಾರವಾಗಿ,ಕೆನ್ನೆಯಾ ಕೆಂಪಾಗಿ .
ನಾಚುವ ಮನಸಿನ ,ಕಾಣುವ ಕನಸಿನ
ಕನಚಿನ ನೋಟದ .,ಪ್ರತಿಮುತ್ತಿನ ಹಂಬಲಕೆ ಕಾರಣವಾಗಿ

ಪ್ರೀತಿಯೇ ನಾನಾಗ್ತೇನೆ............

ಅವಳು ಮತ್ತು ನೆನಪು

ಆರ್ದ್ರ ಮಳೆಯ ಜೋರ ನಡುವೆ .,ಒಂಟಿ ಕೊಡೆಯ ಕೆಳಗೆ ನಿಂತು ತುಂಟ ನೀರನಿಡಿವ ಆಟ .,
ಒದ್ದೆ ಒದ್ದೆ ಕೈಯನಿಡಿದು,ಬೆಚ್ಚಗಾಗೋ ನಿನ್ನ ನೋಟ
ಮುದ್ದೆಯಾಗೋ ಲತೆಯನಿಡಿದು,ಮುದ್ದು ಮನಸ ಬೊಗಸೆಲಿಡಿದು
ಮೆದ್ದು ಬರುವ ಕಳ್ಳನಾಟ
ಮಾಸ ಕಳೆದರೂ ಮಾಸದ ನೆನಪುಗಳಿಗೆ,ಮೊಸವೇತಕೆ ಗೆಳತಿ.....

ನಿನ್ನ ತುಟಿಯ ನಗುವಿನಂಚು
ನನ್ನ ಮನದ ಭಾವಚುಂಚ ಬರೆವ ಕುಂಚವಾದ ಸಮಯ
ಖಾಲಿ ಕೊರಳು ಮುತ್ತ ಸರದಿ .,ಬಳ್ಳಿ ನಡುವ ಬಳಸಿ ಹಿಡಿದು
ಹೃದಯವಿತ್ತ ಗಳಿಗೆ.................
ಮರೆಯಲಾಗದ ನೆನಪುಗಳಿಗೆ ಮೊಸವೇತಕೆ ಹುಡುಗಿ

ಕೈಯ ಬಳೆಯ ಶಬ್ದಗಳಲಿ,ಹಂಸಗಮನ ಹೆಜ್ಜೆಗಳಲಿ
ಹರಿದ ಸರದ ದಾರದಲಿ , ನಿನ್ನ ತನುವು ನನ್ನೆದೆಂದು
ಮಾತು ಕೊಟ್ಟ ಹೊತ್ತುಗಳಲಿ ...
ನೆನಪುಗಳೇ ನೆನಪಾಗಿಬಿಡುವ ನೆನಪಿಗೇತಕೆ ಮೋಸ ಗೆಳತಿ

ಪ್ರೀತಿಸದ ಗೆಳತಿಗೆ ಪ್ರೀತಿಸಿದ ಹುಡುಗ
ಪ್ರೀತಿಯ ನೆನಪಿಗೇ ಮೊಸವೇತಕೆ ಬೆಡಗಿ:)

ಅವಳು ಮತ್ತು ಕನಸು

ನಿನ ಮುಂಗುರುಳ ಕೊಂಕಲ್ಲಿ .,ಆ ತುಟಿಯ ಅಂಚಲ್ಲಿ
ಆ ಮುತ್ತ ಮತ್ತಲ್ಲಿ .,ಬಿಸಿ ಉಸಿರ ಅಪ್ಪುಗೆಯಲ್ಲಿ
ಆ ಸ್ಪರ್ಶದ ಕನಸಲ್ಲಿ.,ಕನಸ ಕನವರಿಕೆಯಲ್ಲಿ  ನಾ ಕರಗಿ ಹೋಗುವ ಮುನ್ನ
ಅಕ್ಷರೂವನಿತೆಯಾಗೆ ಪ್ರಿಯೆ ., ನನ ರಕ್ತದ ಹನಿ ಹನಿಯಲ್ಲಿ

ಮಿಲನ ಸುಖದ ಮೂಲದಲಿ ., ಮನಸ ಹುಚ್ಚುಕೋಡಿಯಲಿ
ಪ್ರೇಮಪತ್ರದ ಅಕ್ಷರದಲಿ..ಆ ಅಕ್ಷರದ ಭಾವದಲಿ
ನಿನ ಕಾಲ ಕಿರುಬೆರಳಿಗೆ ನಾ ಮುತ್ತಿಟ್ಟ ಅನುಭಾವದಿ
ನೀ ಕರುಗುವ ಮುನ್ನ ., ಹುಡುಗಿ ಕಾಡಿಬಿಡು ಒಮ್ಮೆ
ನನ ಎದೆಯ ಪ್ರತಿಮಿಡಿತದಲಿ

ಕಣ್ಣಿರ ಸ್ಪರ್ಶದಲಿ ..,ಮಳೆಯ ಪ್ರತಿ ಹನಿಯಲ್ಲಿ
ಕೆನ್ನೆಯ ಕೆಂಪಲ್ಲಿ.., ಕಾಲ್ಗೆಜ್ಜೆಯ ಸದ್ದಲ್ಲಿ
ಭಾವ ಭಾವಗಳ ವ್ಯಕ್ತ ಪ್ರಜ್ಞೆಯಲಿ
ನಾ ಕಾಣುವ ಸ್ವಪ್ನದ ಮೂರ್ತ ರೂಪದಲಿ
ಒಮ್ಮೆ ನನ್ನವಳಾಗಿಬಿಡು ಬಿಡು ಗೆಳತಿ .. ಈ ಪ್ರೀತಿ ಸಾಯುವ ಮುನ್ನ

ಪ್ರಿತಿಸಿಯೂ ಪ್ರಿತಿಸದ ಮನಸಿಗೆ.,ಮತ್ತೆ ಪ್ರೀತಿಸುವೆ ಎಂಬ ಭ್ರಮೆಗೆ  
ಪ್ರಾಣಕಾಂತನ  ಮನಸಿನ ಪುಟದಲಿ ಹಸ್ತಾಕ್ಷರವನ್ನಿತ್ತ ತಪ್ಪಿಗೆ
ಬಂದುಬಿಡು ಮತ್ತೊಮ್ಮೆ ..ಕಾಡಿಬಿಡೆ ಮನದನ್ನೆ