Tuesday, June 25, 2013

ಮರಳಿ ಬಾ ಶಾಲೆಗೆ ....

ಗೆಳೆಯ ಈಶ್ವರಪ್ಪಚ್ಚಿ ಆವಾಗ 'ಮನುಷ್ಯರಿಂದ ಹೇಗೆ ಮನುಷ್ಯರು ಹುಟ್ಟುತ್ತಾರೋ  ಹಾಗೆ ಪುಸ್ತಕಗಳಿಂದ ಪುಸ್ತಕಗಳು ಹುಟ್ಟುತ್ತವೆ' ಅಂತ  ಒಂದು ಮಾತು ಹೇಳಿದ್ದ..  ಭಣಗುಡುವ  ನನ್ನ ಈ ಅಕ್ಷರಮನೆಯ ಕಂಡಾಗಲೆಲ್ಲ ಅಪ್ಪಚ್ಚಿಯ ಈ ಮಾತು ಅನುರಣಿಸುತ್ತದೆ. ಅಕ್ಷರವ ಉಣದೆ ಅಕ್ಷರವ ಕಕ್ಕುವುದು ಕಷ್ಟ. 

ಅಷ್ಟಕ್ಕೂ ಓದುವ ಅಭ್ಯಾಸ ಬಿಟ್ಟದ್ಯಾಕೆ ?!  ಟಿವಿಯೋ , ವಯಸ್ಸೋ ,ಬೆಂಗಳೂರು, ಕೆಲಸ ಏನೆಲ್ಲಾ ಕಾರಣಗಳ ಹೊರತಾಗಿಯೂ ಅದು ಬದಲಾದ ಕಾಲಗತಿಯಲ್ಲಿ ಬದಲಾಗಿರುವ ಆಗುತ್ತಿರುವ  ಆದ್ಯತೆಗಳ ಪಟ್ಟಿ ಅಷ್ಟೇ. ನಾಯಕರ ಮಾತಿನಂತೆ ,'ಮಳೆಗಾಲದಲ್ಲಿ ಕಾದು ಕಾದು ಅನುಭವಿಸುವ ಬಿಸಿಲು ಬೇಸಿಗೆಯಲ್ಲಿ ಯಾರಿಗೂ ಬೇಡವಾಗುವ ಪರಿಯಲ್ಲಿ ' ನಮ್ಮ ಆದ್ಯತೆಗಳೂ ಹಾಗೂ ಮತ್ತೊಬ್ಬರ ಆದ್ಯತೆಗಳ ಪಟ್ಟಿಯಲ್ಲಿ ನಮ್ಮ ಸ್ಥಾನವೂ ಬದಲಾದಂತೆ ಅಕ್ಷರಭೋಜನ ಕಮ್ಮಿಯಾಗಿದೆ. 


ಬದುಕ ದಾರಿಯಲ್ಲಿ ಮನಸ್ಸಿಗಿಂತ ಜಾಸ್ತಿ ದೇಹದ ಮೇಲೆ ಒಲವು ಮೂಡುವಾಗ ಈ ಉಬ್ಬುತಗ್ಗುಗಳು ಸಹಜ. ಯಾವ ಅನುಭೂತಿಯನ್ನೂ ತಪ್ಪಿಸಿಕೊಳ್ಳಲಿಚ್ಚಿಸದ ಮನಸಿನೊಂದಿಗೆ ಬದುಕ ಮೇಲಿನ ಪ್ರೀತಿ ಬರಹದಂತಾಗದಿರಲಿ ಎಂಬ ಹಾರೈಕೆ ನನ್ನದು . ನನ್ನಂತೆ ಬರಹ ಬಿಟ್ಟ ಎಲ್ಲರಿಗೂ . :)