Sunday, November 18, 2018

ಪತ್ನಿಶೇಷ

ಹೊಸ ಪೀಳಿಗೆಯ ಚಿನ್ನು ಮುನ್ನುವಿನ ಕಲರವವೆನ್ನಲ್ಲ ಕೇಳಿದಾಗೆಲ್ಲ ಮೂಡುವದು ಪ್ರೀತಿ ಪಡೆಯುವ ಹೊಸ ಅವತಾರಗಳ ಬಗ್ಗೆ ನಗುವಷ್ಟೇ. ತಂತ್ರಜ್ಞಾನದ ಬೆಳೆವಣಿಗೆಯ ಅಚ್ಚರಿಯ ಕೊಡುಗೆಗಳಲ್ಲಿ ಪ್ರೀತಿಯ ದೊರೆಯುವಿಕೆ ಕೂಡ ಒಂದು. ಪ್ರೀತಿಸುವುದು ಸುಲಭ ಈಗ.

ನಮ್ಮ ಮುತ್ತಜ್ಜನ ಅಜ್ಜನ ಕಾಲದಲ್ಲಿ ಹೀಗಲ್ಲವಲ್ಲ ! ಮದುವೆಯಾಗದೆ ಹೆಣ್ಣಿನ ಸ್ಪರ್ಶ ಸಲಿಗೆಗಳ ಅನುಭವವದೆಲ್ಲಿಯ ಮಾತು ?! ಕೂಡು ಕುಟುಂಬದ ಜನಜಂಗುಳಿಯ ಮಧ್ಯೆ, ಕಾಡುವ ಬಡತನವೋ ಮತ್ತೊಂದರದ್ದೋ ತಲೆಬಿಸಿಯ ನಡುವೆ "ಚಿನ್ನಾ , ಬಿಡಲಾರೆ ನಿನ್ನಾ" ಅನ್ನಲು ಪುರುಸೊತ್ತೆಲ್ಲಿ  :)

ದುಡಿದು ಬಂದ ಗಂಡ ಹಸಿಯದೇ ಮಲಗಲಿ ಎಂದು ಇದ್ದ ಅಕ್ಕಿಯನ್ನೆಲ್ಲ ಹಾಕಿ ಮಡಿದ ಅನ್ನವ ಬಡಿಸುತ್ತಿದ್ದಳಂತೆ. ಆಗಿನ ಬಡ ಬ್ರಾಹ್ಮಣರ ಕತೆ ಗೊತ್ತಲ್ಲ, ಯಾರಾದರು ದಾನವ ಮಾಡಿದರೆ  ಅಂದಿನಂದಿನ ಊಟದ ಕತೆ. ಇಲ್ಲದದಿದ್ದರೆ ಇಲ್ಲ. ಗಂಡನೂ ಹುಷಾರು, ಪತ್ನಿ ಮಾಡಿದಡುಗೆಯನೆಲ್ಲ ತನಗೇ ಬಡಿಸುತ್ತಾಳೆ ಎಂದು ತಿಳಿಯದ್ದಿದ್ದೀತೇ !? ಅವ ಹಾಕಿದ ಅನ್ನದಲ್ಲಿ ಒಂದು ಪಾಲು -" ಅಯ್ಯೋ , ಹೊಟ್ಟೆ ತುಂಬಿತು. ಸೇರುವುದೇ ಇಲ್ಲ " - ಎಂದೆನ್ನುತ  ಬಿಟ್ಟು ಕೈತೊಳೆಯುತ್ತಿದ್ದ ಮಾರಾಯ. ತರುವಾಯ ಹೆಂಡತಿ ಅದನ್ನು ಉಂಡು ಮಲಗತ್ತಿದ್ದಳು. ಮುಂದೆ ಅದೇ ಶಾಸ್ತ್ರವಾಯಿತು - ಹಳೆ ಅಜ್ಜಂದಿರ ಬಾಳೆ  ನೋಡಿದರೆ ಗೊತ್ತಾದೀತು

ನಮ್ಮ ಸಂಸ್ಕೃತಿ ಸಂಸ್ಕಾರದದ ಮೈಯ ತುಂಬೆಲ್ಲ ಇಂತಹ ಪ್ರೀತಿಯ ಅನುಭೂತಿಯದೇ ಚಿತ್ತಾರ. ಈಗಲೋ, ಲವ್ ಯು ಮಿಸ್ ಯು ಗಳ ಮಧ್ಯೆ ಪ್ರೀತಿಯೊಂದೇ ಮಿಸ್ಸಿಂಗ್.