Tuesday, October 22, 2013

ಬೆಳಕು ಬದಲಿಸದು ಬಣ್ಣ .....

ಇರುಳು ಕಾನನದೊಳಗೆ ಪ್ರೀತಿ ತಿಮಿರದ ಕೂಪ 
ಉಸುಕು ಮುಸುಕಿನ ಒಳಗೆ ಹೊಗೆಯುತಿದೆ ಕನಸ ಧೂಪ 
ಕಣ್ಣ ಕಪ್ಪಿನದೋ ಬೆಳ್ಳಂ ಬೆಳಕಿನದೋ ಕಾಯುತಿಹ ಭಾವಿ 
ಬಣ್ಣ ಬಣ್ಣದ ಕುದುರೆ ಹಾರುತಿಹುದು ರಾತ್ರಿ ಕಂಡ ಬಾವಿ.


ಭಾಮೆಯೋ ರಾಧೆಯೋ ಕೃಷ್ಣ ಪ್ರೀತಿಯಣ್ಣೆಯ ಕಿಣ್ಣ 
ಬತ್ತಿ ಬದಲಿದರೇನು ಬೆಳಕು ಬದಲಿಸದು ಬಣ್ಣ 
ಒಲವ ಕಡಲಿನ ಒಳಗೆ ಸುಖ ದುಃಖ ಶೀತೋಷ್ಣ 
ಮಿಂಚು ಗುಡುಗಿನ ನಡುವೆ ಪ್ರೇಮ ಅಪ್ಪಟ ಕೃಷ್ಣ

Tuesday, June 25, 2013

ಮರಳಿ ಬಾ ಶಾಲೆಗೆ ....

ಗೆಳೆಯ ಈಶ್ವರಪ್ಪಚ್ಚಿ ಆವಾಗ 'ಮನುಷ್ಯರಿಂದ ಹೇಗೆ ಮನುಷ್ಯರು ಹುಟ್ಟುತ್ತಾರೋ  ಹಾಗೆ ಪುಸ್ತಕಗಳಿಂದ ಪುಸ್ತಕಗಳು ಹುಟ್ಟುತ್ತವೆ' ಅಂತ  ಒಂದು ಮಾತು ಹೇಳಿದ್ದ..  ಭಣಗುಡುವ  ನನ್ನ ಈ ಅಕ್ಷರಮನೆಯ ಕಂಡಾಗಲೆಲ್ಲ ಅಪ್ಪಚ್ಚಿಯ ಈ ಮಾತು ಅನುರಣಿಸುತ್ತದೆ. ಅಕ್ಷರವ ಉಣದೆ ಅಕ್ಷರವ ಕಕ್ಕುವುದು ಕಷ್ಟ. 

ಅಷ್ಟಕ್ಕೂ ಓದುವ ಅಭ್ಯಾಸ ಬಿಟ್ಟದ್ಯಾಕೆ ?!  ಟಿವಿಯೋ , ವಯಸ್ಸೋ ,ಬೆಂಗಳೂರು, ಕೆಲಸ ಏನೆಲ್ಲಾ ಕಾರಣಗಳ ಹೊರತಾಗಿಯೂ ಅದು ಬದಲಾದ ಕಾಲಗತಿಯಲ್ಲಿ ಬದಲಾಗಿರುವ ಆಗುತ್ತಿರುವ  ಆದ್ಯತೆಗಳ ಪಟ್ಟಿ ಅಷ್ಟೇ. ನಾಯಕರ ಮಾತಿನಂತೆ ,'ಮಳೆಗಾಲದಲ್ಲಿ ಕಾದು ಕಾದು ಅನುಭವಿಸುವ ಬಿಸಿಲು ಬೇಸಿಗೆಯಲ್ಲಿ ಯಾರಿಗೂ ಬೇಡವಾಗುವ ಪರಿಯಲ್ಲಿ ' ನಮ್ಮ ಆದ್ಯತೆಗಳೂ ಹಾಗೂ ಮತ್ತೊಬ್ಬರ ಆದ್ಯತೆಗಳ ಪಟ್ಟಿಯಲ್ಲಿ ನಮ್ಮ ಸ್ಥಾನವೂ ಬದಲಾದಂತೆ ಅಕ್ಷರಭೋಜನ ಕಮ್ಮಿಯಾಗಿದೆ. 


ಬದುಕ ದಾರಿಯಲ್ಲಿ ಮನಸ್ಸಿಗಿಂತ ಜಾಸ್ತಿ ದೇಹದ ಮೇಲೆ ಒಲವು ಮೂಡುವಾಗ ಈ ಉಬ್ಬುತಗ್ಗುಗಳು ಸಹಜ. ಯಾವ ಅನುಭೂತಿಯನ್ನೂ ತಪ್ಪಿಸಿಕೊಳ್ಳಲಿಚ್ಚಿಸದ ಮನಸಿನೊಂದಿಗೆ ಬದುಕ ಮೇಲಿನ ಪ್ರೀತಿ ಬರಹದಂತಾಗದಿರಲಿ ಎಂಬ ಹಾರೈಕೆ ನನ್ನದು . ನನ್ನಂತೆ ಬರಹ ಬಿಟ್ಟ ಎಲ್ಲರಿಗೂ . :)

Friday, March 8, 2013

ಪೂರ್ಣಮೇವಾವಶಿಷ್ಯತೆ ......


ನಾವು ಸಣ್ಣವರಿದ್ದಾಗ ಚೌತಿಗೋ ದೀಪಾವಳಿಗೋ ಒಂದು ವಾರ ಮುಂಚೆ ಪಟಾಕಿ ತಂದಿಡುತ್ತಿದರು.ಒಂದು ವಾರ ಪಟಾಕಿ ಹೊಡೆಯುವ ಹಾಗಿರಲಿಲ್ಲ.ದಿನವೂ ಶಾಲೆಯಿಂದ ಬಂದ  ತಕ್ಷಣ ಓಡಿ ಪಟಾಕಿ ಡಬ್ಬವನ್ನ ಮುತ್ತಿ ,ಮುಟ್ಟಿ ದಿನ ದಿನವೂ ಕೆಂಡದ ಬಿಸಿ ಕಾಸಿ ವಾಪಸ್ಸು  ಕಪಾಟಿನಲ್ಲಿ ಇಡುವ ಸಂಭ್ರಮ , ಹಬ್ಬದ  ದಿನ  ಟುಸ್ಸೆಂದು ಬಿಡುವ  ಪಟಾಕಿ ಶಬ್ದದಲ್ಲಿರಲಿಲ್ಲ.

ಮದುವೆಯ ನಂತರ ಮೊದಲ ರಾತ್ರಿಗೂ ಮುಂಚೆ ಇಷ್ಟೇ ಇಷ್ಟು ಶಾರ್ಟ್ ಟೈಮ್ ಅಲ್ಲಿ  ಉಬ್ಬರಿಸಿಬಿಡುವ ಕೌತುಕತೆ ತಾಳಿ ಕಟ್ಟುವ ಶುಭವೇಳೆಯಲ್ಲೂ  ಮದುಮಕ್ಕಳಿಗೆ ಹುಟ್ಟಿರುವುದು ಸುಳ್ಳು.ಅಲ್ವೇ?

ಮಳೆ ಬರುವುದಕ್ಕೂ ಮುಂಚೆ ಮೋಡ ಕವಿದು ಇಷ್ಟಿಷ್ಟು ಭಾವ ಮಳೆ ಸುರಿಸಿಬಿಡುವ ಪ್ರಕೃತಿ , ಅರ್ಧ ಬೆಳೆದು ನಿಂತ ಭತ್ತದ ಗದ್ದೆಯ ಸೊಬಗು , ಅರ್ಧ ಮಾತು ಕಲಿತ ಮಕ್ಕಳ ಮುದ್ದು ಶಬ್ದಗಳು  , ಎಲ್ಲವೂ ಇಡಿ ಇಡಿಯಾಗಿ ಹಿಡಿಸಿಬಿಡುತ್ತದೆ,ಪೂರ್ಣತೆಯ ಹಂಬಲಕ್ಕಾ ?.

ಕಯ್ಯಿಂದ್ಲೆ ಕಾಯಿಯ ಕಹಿಯಂತೆಯೋ  ಹನಿ  ಮಳೆಯ ನಂತರದ ಘಮದಂತೆಯೋ ಒಳಗಡೆ ಅಡಗಿ ಕುಳಿತುಬಿಡುವ ಈ ಖುಷಿ(!) ವರ್ಣಿಸಲಸದಳ.

ಇನ್ನೂ ಸಿಗದ ಹುಡುಗಿಗಾಗಿ ಕಾಯುವ , ಕಾದು ಕಾತರಿಸುವ , ಕಾತರಿಸಿ ಕನವರಿಸುವ , ಕನವರಿಸಿ ಕನಸು ಕಾಣುವ , ಕಂಡ ಹುಡುಗಿಯರ ಕಣ್ಣಲ್ಲೆಲ್ಲ ನಮ್ಮದೇ ಪ್ರತಿಬಿಂಬವ ಹುಡುಕುವ ಸಂಭ್ರಮ ಕಾದಿರಿಸುವ ಪಟಾಕಿಯಂತೆ. ಟುಸ್ಸೆಂದು ಬಿಡುವ ಶಬ್ದಕ್ಕಿಂತ ,ಕಾತರಿಸುವ ಅರ್ಧ ಮಾತ್ರ ನನಸಾಗುವ ಕನಸು ಬಂಗಾರ.

ಅಪೂರ್ಣಕ್ಕಿಂತ ದೊಡ್ಡ ಕೌತುಕವಿಲ್ಲ ,ಕಾತುರತೆಗಿಂತ ದೊಡ್ಡ ಸಂಭ್ರಮವಿಲ್ಲ ,ನನಸಿಗಿಂತ ಕನಸೇ ಚಂದ.

ಅಷ್ಟಕ್ಕೂ  ಅರ್ಧ ಮಾತ್ರ  ಬಟ್ಟೆ ತೊಟ್ಟ ಮಲ್ಲಿಕಾಳೆ ನಮ್ಮದೆಯರಸಿಯಲ್ಲವೇ ;)

Sunday, February 24, 2013

ಪರತಂತ್ರದೊಳು ಸ್ವಾತಂತ್ರ್ಯ !


ನಮಗೆ ಸ್ವಾತಂತ್ರ್ಯ ಬಂತು .ಸ್ವಾತಂತ್ರ್ಯದ "ಮಹಾಸೇನಾನಿ" ಪುಣ್ಯಾತ್ಮ ನೆಹರು ಅಖಂಡ ೧೬ ವರ್ಷಗಳ ದೇಶವನ್ನ "ಉದ್ದಾರ" ಮಾಡುವ ಪ್ರಯತ್ನ ಮಾಡಿದರು.ನಾವಿವತ್ತು ಬಹಳ ಖುಷಿಯಿಂದ ಆಗಸ್ಟ್ ೧೫ ರಂದು ದ್ವಜ ಹಾರಿಸಿ ದೇಶಪ್ರೇಮದ ಬುಗ್ಗೆ ಹರಿಸಿ ಸಂತಸ ಪಡುತ್ತೇವೆ.ಆದರೆ ನಮಗೆ ಯಾಕೆ ಆಗಸ್ಟ್ ೧೫ ರಂದೇ ಸ್ವತಂತ್ರ ಬಂತು ಗೊತ್ತ.(ಯಾವತ್ತಾರು ಒಂದು ದಿನ ಬರಲೇ ಬೇಕದು ಬಿಡಿ).
ನಮಗೆ ಜುಲೈ ೪ ರಂದೇ   ರಂದೇ ಸ್ವಾಂತಂತ್ರ್ಯ ಕೊಡಲು ೨೦೦ ವರ್ಷ ಶೋಷಣೆ ಮಾಡಿದ ಬ್ರಿಟಿಷರು ತಯಾರಾಗಿದ್ದರು.ಇಂಗ್ಲಂಡ್'ನ ಅರ್ಥಿಕ ಪರಿಸ್ತಿತಿ ದಿವಾಳಿಯಾಗುವ ಹಂತದಲ್ಲಿ ಇದ್ದದರಿಂದ ಅವರು ವಸಾಹತು ಒಂದನ್ನ ಬಿಡಲೇ  ಬೇಕಾಗಿತ್ತು. ಅಧಿಕಾರ ಹಸ್ತಾಂತರ ಮಾಡುವುದಕ್ಕೆ ಮೌಂಟ್ ಬ್ಯಾಟನ್ ಅವರಿಗೆ ಸೂಚನೆಯೂ ಬಂದಿತ್ತು  ,   ಆದರೆ ಆಗಸ್ಟ್ ೧೫ ರ ದಿನವನ್ನ ಮೌಂಟ್ ಬ್ಯಾಟನ್ ಅದೃಷ್ಟದ ದಿನವೆಂದು ಪರಿಗಣಿಸುತ್ತಿದ್ದ . ಯಾಕೆಂದರೆ ಆತ ಎರಡನೇ ಮಹಾ ಯುದ್ದದಲ್ಲಿ ಕಮಾಂಡರ್ ಆಗಿದ್ದಾಗ  ಅಗಸ್ಟ್ ೧೫ರಂದೇ ಜಪಾನ್ ಸೇನೆ ಶರಣಾಗತಿ ಒಪ್ಪಿಕೊಂಡಿತ್ತು.ಅದನ್ನು ಸ್ಮರಣೀಯ ಮಾಡಿಕೊಳ್ಳುವಾಸೆ ಆತನ ಹೆಂಡತಿಗೆ.ಹೆಣ್ಣುಮಕ್ಕಳ ಆಸೆಗೆ ಕರುಣಾಮಯಿ ನೆಹರು ಯಾವಾಗ ತಾನೇ ಬೇಡ ಅಂದ್ರು ಹೇಳಿ.ಅದಕ್ಕೆ ನಮ್ಮ ಸ್ವಾತಂತ್ರ್ಯ ಮುಂದಕ್ಕೆ ಹೋಯ್ತು.

ಸ್ವಂತದ ಕಾಮನೆಗಳಿಗೆ ದೇಶವನ್ನು ಮಾರುವ ಬುದ್ದಿ ನಿನ್ನೆ ಮೊನ್ನೆಯದಲ್ಲ.ಕರ್ನಾಟಕದ ರಾಜಕಾರಣಿಗಳ ಬಗ್ಗೆ ಸಣ್ಣದೊಂದು ಕರುಣೆ ತೋರಿಸಬಹುದೆನ್ನಿಸುತ್ತದೆ ಅಲ್ಲವ :p