Friday, March 8, 2013

ಪೂರ್ಣಮೇವಾವಶಿಷ್ಯತೆ ......


ನಾವು ಸಣ್ಣವರಿದ್ದಾಗ ಚೌತಿಗೋ ದೀಪಾವಳಿಗೋ ಒಂದು ವಾರ ಮುಂಚೆ ಪಟಾಕಿ ತಂದಿಡುತ್ತಿದರು.ಒಂದು ವಾರ ಪಟಾಕಿ ಹೊಡೆಯುವ ಹಾಗಿರಲಿಲ್ಲ.ದಿನವೂ ಶಾಲೆಯಿಂದ ಬಂದ  ತಕ್ಷಣ ಓಡಿ ಪಟಾಕಿ ಡಬ್ಬವನ್ನ ಮುತ್ತಿ ,ಮುಟ್ಟಿ ದಿನ ದಿನವೂ ಕೆಂಡದ ಬಿಸಿ ಕಾಸಿ ವಾಪಸ್ಸು  ಕಪಾಟಿನಲ್ಲಿ ಇಡುವ ಸಂಭ್ರಮ , ಹಬ್ಬದ  ದಿನ  ಟುಸ್ಸೆಂದು ಬಿಡುವ  ಪಟಾಕಿ ಶಬ್ದದಲ್ಲಿರಲಿಲ್ಲ.

ಮದುವೆಯ ನಂತರ ಮೊದಲ ರಾತ್ರಿಗೂ ಮುಂಚೆ ಇಷ್ಟೇ ಇಷ್ಟು ಶಾರ್ಟ್ ಟೈಮ್ ಅಲ್ಲಿ  ಉಬ್ಬರಿಸಿಬಿಡುವ ಕೌತುಕತೆ ತಾಳಿ ಕಟ್ಟುವ ಶುಭವೇಳೆಯಲ್ಲೂ  ಮದುಮಕ್ಕಳಿಗೆ ಹುಟ್ಟಿರುವುದು ಸುಳ್ಳು.ಅಲ್ವೇ?

ಮಳೆ ಬರುವುದಕ್ಕೂ ಮುಂಚೆ ಮೋಡ ಕವಿದು ಇಷ್ಟಿಷ್ಟು ಭಾವ ಮಳೆ ಸುರಿಸಿಬಿಡುವ ಪ್ರಕೃತಿ , ಅರ್ಧ ಬೆಳೆದು ನಿಂತ ಭತ್ತದ ಗದ್ದೆಯ ಸೊಬಗು , ಅರ್ಧ ಮಾತು ಕಲಿತ ಮಕ್ಕಳ ಮುದ್ದು ಶಬ್ದಗಳು  , ಎಲ್ಲವೂ ಇಡಿ ಇಡಿಯಾಗಿ ಹಿಡಿಸಿಬಿಡುತ್ತದೆ,ಪೂರ್ಣತೆಯ ಹಂಬಲಕ್ಕಾ ?.

ಕಯ್ಯಿಂದ್ಲೆ ಕಾಯಿಯ ಕಹಿಯಂತೆಯೋ  ಹನಿ  ಮಳೆಯ ನಂತರದ ಘಮದಂತೆಯೋ ಒಳಗಡೆ ಅಡಗಿ ಕುಳಿತುಬಿಡುವ ಈ ಖುಷಿ(!) ವರ್ಣಿಸಲಸದಳ.

ಇನ್ನೂ ಸಿಗದ ಹುಡುಗಿಗಾಗಿ ಕಾಯುವ , ಕಾದು ಕಾತರಿಸುವ , ಕಾತರಿಸಿ ಕನವರಿಸುವ , ಕನವರಿಸಿ ಕನಸು ಕಾಣುವ , ಕಂಡ ಹುಡುಗಿಯರ ಕಣ್ಣಲ್ಲೆಲ್ಲ ನಮ್ಮದೇ ಪ್ರತಿಬಿಂಬವ ಹುಡುಕುವ ಸಂಭ್ರಮ ಕಾದಿರಿಸುವ ಪಟಾಕಿಯಂತೆ. ಟುಸ್ಸೆಂದು ಬಿಡುವ ಶಬ್ದಕ್ಕಿಂತ ,ಕಾತರಿಸುವ ಅರ್ಧ ಮಾತ್ರ ನನಸಾಗುವ ಕನಸು ಬಂಗಾರ.

ಅಪೂರ್ಣಕ್ಕಿಂತ ದೊಡ್ಡ ಕೌತುಕವಿಲ್ಲ ,ಕಾತುರತೆಗಿಂತ ದೊಡ್ಡ ಸಂಭ್ರಮವಿಲ್ಲ ,ನನಸಿಗಿಂತ ಕನಸೇ ಚಂದ.

ಅಷ್ಟಕ್ಕೂ  ಅರ್ಧ ಮಾತ್ರ  ಬಟ್ಟೆ ತೊಟ್ಟ ಮಲ್ಲಿಕಾಳೆ ನಮ್ಮದೆಯರಸಿಯಲ್ಲವೇ ;)