Wednesday, September 12, 2012

ಅರೆಬೆಂದ ಮಾತುಗಳು.

ಉರ್ದು ಕವಿ ಸಾಹಿರ್ ಒಮ್ಮೆ ಎಲ್ಲೋ ಉಸುರುತ್ತಾನೆ ." ಹರ್ ಯುಗ್ ಮೇ ಬದಲ್ತೆ ರಹೇ ಧರಮ್ ಕೋ ಕೈಸೆ ಆದರ್ಶ್  ಬನಾವೋಗಿ".

ಎರಡೆರೆಡು ಭಾರಿ ಭಾಗವಾದ ಹೃದಯವನ್ನ ಒಂದು ಕೈಲೂ , ಮದಿರೆ ಬಾಟಲಿಯ ಕಂಠವನ್ನ ಮತ್ತೊಂದು ಕೈಲಿ ಹಿಡಿದುಕೊಂಡು ಚಿನ್ನದಂತ ಕವನಗಳನ್ನ ಕೊಟ್ಟ ಸಾಹಿರ್ನ ಮಾತುಗಳನ್ನ ಕೇಳಿದಾಗಲೆಲ್ಲ  ಒಂದು ಜೀವನ ಶೈಲಿಯ ಚಲನಶೀಲತೆ ಕಣ್ಣ ಮುಂದಿನ ಚಲನಚಿತ್ರವಗುತ್ತದೆ .ಹುಡುಗಿಯರ ಪಕ್ಕ ಕೂರಿಸುವುದೊಂದು ಶಿಕ್ಷೆಯಾಗಿದ್ದ ಕಾಲದಿಂದ ಅದೊಂದು ತಹತಹಿಕೆಯಾಗುವ ಕಾಲದವರೆಗೂ , ತಂಬಾಕು ಕ್ಯಾನ್ಸರ್ಗೆ ಕಾರಣ ಎಂದು ಓದೋದುತ್ತಲೇ ಸಿಗರೇಟ್ ತುದಿಗೆ ಕಿಚ್ಚಿಟ್ಟು ಅಪ್ಪನ  ಹಿಡಿತದಿಂದಾಚೆ ಬಂದೆ ಎಂದು ಸ್ವಾತಂತ್ರ್ಯೋತ್ಸವ ಆಚರಿಸುವ ಹದಿ ಹುಡುಗನವರೆಗೂ, ಎಲ್ಲವೂ ಚಲನಶೀಲತೆಯೇ.

ಬಹುಶಃ ಈ ತರದ್ದೊಂದು ಚಲನಶೀಲತೆಯೇ  ಧರ್ಮ , ಮತ್ತು ಮನುಜ  ನಾಗರೀಕವಾಗುವ ಪ್ರಕ್ರಿಯೆ. ಸಾಂಸ್ಕೃತಿಕ ಅನನ್ಯತೆಯನ್ನ ಕಾಪಾಡಿಕೊಳ್ಳುವ ಚೌಕಟ್ಟಿನಲ್ಲಿ ಚಲನೆಯನ್ನ ಒಪ್ಪಿಕೊಳ್ಳದ ಮತ್ತು ಸಾಮಾಜಿಕ  ವೇಗವನ್ನು ಒಡಲೊಳಗೆ ಇಟ್ಟುಕೊಂಡ ಎರೆಡು ಮನಸ್ತಿತಿಗಳು ಎದಿರುಬದರಾಗಿ ನಿಂತುಕೊಂಡಾಗಲೆಲ್ಲ  ಧರ್ಮ ಮತ್ತು ಸಂಸ್ಕೃತಿಯ ಅರ್ಥವ್ಯಾಪ್ತಿಯನ್ನ ಪರಿಷ್ಕರಿಸುತ್ತವೆ.ತಮ್ಮ ಜಾತಿಯ ಹುಡುಗಿ ನಮಗೆ ಬೀಳುವುದಿಲ್ಲ ಎಂಬ ಹುಡುಗನ ಅಸಹನೆ , ವೈಯುಕ್ತಿಕ ಅಭೀಪ್ಸೆಗಳಿಗೆ ಸಾಂಸ್ಕೃತಿಕ ಚೌಕಟ್ಟನ್ನ ನೀಡಿ ಚಲನೆಯನ್ನ ನಿಯಂತ್ರಿಸುವ  ಕ್ರಿಯೆಯಾದರೆ , ನಮ್ಮ ಜಾತಿಯ ಹುಡುಗರು ಸಂಕುಚಿತ ಮನಸ್ತಿತಿಯವರು ಎಂಬ ಹುಡುಗಿಯ ಆರೋಪ , ಸಾಮಾಜಿಕ ವೇಗದ ಕದಲಿಕೆಯಿಂದುಂಟಾದ ಕನಲಿಕೆ.

ಹತ್ತು ವರ್ಷಗಳ ಹಿಂದಿನ ನಮ್ಮದೇ ಸಾಂಸ್ಕೃತಿಕ ಚಿಂತನೆಗೂ ಇವತ್ತಿನ ನಮ್ಮ ಸಾಂಸ್ಕೃತಿಕ ಚಿಂತನೆಗೂ ಹತ್ತು ಹಲವು ವ್ಯತ್ಯಾಸಗಳಿರುವಾಗ , ಯಾವ ಕಾಲಘಟ್ಟದ ಆದರ್ಶವನ್ನ ಪಾಲಿಸಬೇಕೆಂಬ ಪ್ರಶ್ನೆಗೆ , ಹಿರಿಯ ತಲೆಮಾರು ಉತ್ತರ ಕೊಟ್ಟಿದ್ದಿಲ್ಲ, ಯುವ ತಲೆಮಾರು ಹುಡುಕುವ ಪ್ರಯತ್ನ ಮಾಡಿದ್ದಿಲ್ಲ.ಪಂಚೆಯಿಂದ ಪ್ಯಾಂಟಿಗೆ ಬದಲಾದಾಗ ಆಗದ ಸಂಘರ್ಷ , ಸೀರೆಯಿಂದ ಜೀನ್ಸಿಗೆ  ಬದಲಾದಾಗ ಕಾಣುತ್ತದೆ. ನಮ್ಮದೇ ಸಮಾಜ ಒಂದೇ ಪ್ರಕ್ರಿಯೆಗೆ ಎರಡು ವಿಭಿನ್ನ ಪ್ರತಿಕ್ರಿಯೆಗಳನ್ನ ನೀಡುತ್ತದೆ.

ಯಾವ ಬದಲಾವಣೆ ಅಗತ್ಯ ಎನ್ನುವ ಸಂದೇಹ ಸಾಮಾನ್ಯ ಮತ್ತು ಅದನ್ನ ಸಮರ್ಥಿಸಿಕೊಳ್ಳುವ ತಳಹದಿ ಕೂಡ ಸಾಪೇಕ್ಷ.  ಹುಡುಗ ಹುಡುಗಿ ಬಂಧನಗಳಿಲ್ಲದ ಸಂಬಂಧದೊಳಗಿರುವುದು ಒಂದಿಷ್ಟು ಜನಕ್ಕೆ ಕೌಟುಂಬಿಕ ವ್ಯವಸ್ತೆ ಹದಗೆಡಿಸುವ ಪದ್ದತಿಯಾದರೆ ಇನ್ನೊಂದಿಷ್ಟು ಮಂದಿಗೆ ವೈಯುಕ್ತಿಕ ಸ್ವಾತಂತ್ರ್ಯ ಒದಗಿಸಿಕೊಡುವ ಹೊಸ ಮಿನುಗು.

ಒಂದು ನಿರ್ದಿಷ್ಟ ಗಡಿಗಳಿಲ್ಲದೆ ಚಲಾವಣೆಯಾಗುವ ಸಂಪ್ರದಾಯ ಒಂದಿಷ್ಟು ಬದಲಾವಣೆಯನ್ನ ಒಳಗೆಳೆದುಕೊಂಡು , ಇನ್ನೊಂದಿಷ್ಟನ್ನ ವರ್ಜಿಸುವ ಅತಾರ್ಕಿಕ ನಿರ್ಧಾರಗಳೂ ಕೂಡ , ಒಂದು ತಲೆಮಾರು ಮತ್ತು ಒಂದಿಷ್ಟು ಜನರ ಹಿತ ಆಸಕ್ತಿಗೆ ಅನುಗುಣವಾಗಿ ವರ್ತಿಸುತ್ತಿದೆ ಅನಿಸಿದ ಕ್ಷಣವೇ ಅದು ಸೂಚಿಸುವ ಆದರ್ಶಗಳಿಗೆ ಮತ್ತೊಂದು ತಲೆಮಾರು ಅಸಮ್ಮತಿಯನ್ನ ತನಗೆ ತೋಚಿದ ರೀತಿಯಲ್ಲಿ ಹೊರಹಾಕುತ್ತದೆ.  ಬೇಕಂತಲೇ  ತನ್ನ ಸಂಸ್ಕೃತಿ ಒಪ್ಪದ   ಹುಡುಗರೊಟ್ಟಿಗೆ ಗಂಡುಬೀರಿಯಂತೆ ತಿರುಗುವ ಹುಡುಗಿ ಅಥವಾ  ಎಣ್ಣೆ ಕಮಟಿನಲ್ಲಿ ಜಾತಿ ಬಿಟ್ಟವಳೆನ್ದು  ಆ ಹುಡುಗಿಯರನ್ನು ಬೈಯುವ ಹುಡುಗ - ಇಬ್ಬರೂ ಇದರದ್ದೇ ಉತ್ಪನ್ನ.

ಬಹುಶಃ ಧರ್ಮವೂ ಕೂಡ ಶಂಕರಾಚಾರ್ಯರ ಒಂದು ಮಾತಿನಂತೆ " ಆ ಕ್ಷಣದ ಸತ್ಯ" ಅಷ್ಟೇ. ಕವಿ ಸಾಹಿರ್ನಂತೆ ಅದನ್ನ ಸಾರ್ವಕಾಲಿಕ ಮತ್ತು ಸಾರ್ವತ್ರಿಕ  ಆದರ್ಶ ಮಾಡಿಕೊಳ್ಳುವದು ಮೂರ್ಖತನ. ಅಷ್ಟಕ್ಕೂ ಹರ್ ಯುಗ್ ಮೇ ಬದಲ್ತೆ ರಹೇ
ಧರಮ್ ಕೋ ಕೈಸೆ ಆದರ್ಶ್  ಬನಾವೋಗಿ??!!

4 comments:

 1. ಚೊಲೋ ಬರದ್ದೆ ಶ್ರೀಪಾದು....." ಹರ್ ಯುಗ್ ಮೆ ಬದಲ್ತೆ ರಹೋ ಅಲ್ಲ ರಹೇ " ಆಗಿರವು ಅದು.....:-)

  ReplyDelete
  Replies
  1. ಧವಾ ಗಣೇಶಣ್ಣ.. ತಿದ್ದಿದ್ದಿ

   Delete
 2. ಚಲನಶೀಲತೆಯೇ ಧರ್ಮ , ಮತ್ತು ಮನುಜ ನಾಗರೀಕನಾಗುವ ಪ್ರಕ್ರಿಯೆ.. ನಿಜ ಈ ಮಾತು, ಆದರೆ ಚಲನಶೀಲತೆ ಎನ್ನುವುದು ಯಾವ ದಿಕ್ಕಿನಲ್ಲಾಗುತ್ತದೆ ಎನ್ನುವುದರ ಮೇಲೆ ಧರ್ಮದ ಉಳಿವು ನಾಗರೀಕತೆಯ ಗೆಲುವು ಎರಡು ಇದೆ ಎನಿಸುತ್ತದೆ.

  ReplyDelete
  Replies
  1. ಚಲನೆ ಯಾವ ದಿಕ್ಕಲ್ಲಾದರೂ ಚಲನೆಯ ಒಳಗಿರುವವರಿಗೆ ಅದು ಉತ್ತಮ ಎಂಬ ಭಾವನೆಯೇ ಸೈ. ಹೊರಗಿರುವವರಿಗೆ ಮಾತ್ರ ಅದು ಅನಗತ್ಯ ಪಲ್ಲಟ

   Delete