Tuesday, July 3, 2012

ಅದು ಎದೆಯೊಳಗಿನ ದನಿ ..

ಎರಡೂ ತೋಳುಗಳಲ್ಲಿ ನನ್ನೆರೆಡು ಸೊಸೆಯಂದಿರನ್ನ ಎತ್ತಿಕೊಂಡು ನಗುತ್ತಿದ ಅಮ್ಮ , ಅದೊಂದೇ ಶಾಶ್ವತ ಎನ್ನುವ ಸಂದೇಶ ಕೊಡುತ್ತಿದ್ದಾಳ ??. ಆ ಭಾವಚಿತ್ರ ನೋಡಿದಾಗಲೆಲ್ಲ ಮೂಡುವ ಚಿತ್ರಭಾವಗಳ ಮೆರವಣಿಗೆ ಯಾಕೋ ಕುಶಿಯದ್ದಲ್ಲ ಅನಿಸುತ್ತಿದೆ.
"ಅಪೀ ಯಾವಾಗ ಮನೆಗ್ ಬತ್ಯ " ಎಂಬ ಸದ್ದು ನಿಂತು ಎರಡುವರ್ಷಗಳ ಮೇಲಾದುವಲ್ಲ??!!. ಸದ್ದೇ ಇಲ್ಲದೆ ಎದೆಗೂಡಿನೊಳಗೆ ಹೊಕ್ಕುನಿಂತಿದ್ದ ಯಮರಾಕ್ಷಸ , ಕಲ್ಪಿಸಿಕೊಂಡೆ ಇಲ್ಲದಿದ್ದ ಅಮ್ಮನಿರದ ಜಗತ್ತನ್ನ ನಲವತ್ತೈದೆ ದಿವಸದಲ್ಲಿ ಕೊಟ್ಟಿದ್ದಷ್ಟೇ ಉಡುಗೊರೆ.

"ಎಂಟ್ ಗಂಟೆಯಾತು ಏಳಾ ಶ್ರೀಪಾದೂ"  ಎಂದು ಅಂದೆಬ್ಬಿಸುತ್ತಿದ್ದ ಅಮ್ಮನ ದ್ವನಿ ಇವತ್ತಿನ ನಿದ್ದೆ ಬರದ ರಾತ್ರಿಗಳಲ್ಲಿ ಯಾಕೋ ಅನುರಣಿಸುತ್ತಿದೆ.ನಿಂಗೆ ಚನಾಗಿ ಸಂಬಳ ಬಪ್ಪಲೆ ಹಿಡಿದ ಮೇಲೆ ನಾನೊಂದ್ ಸರ್ತಿ ನಾರ್ತ್ ಇಂಡಿಯ ಟೂರ್ ಹೊಗಿಬರಲಾ ಅಂತ ಕೇಳಿದ್ದ ಅಮ್ಮನ  ಅಪೇಕ್ಷೆ , ಎಂದಿದಿಗೂ ಅಪೇಕ್ಷೆಯಾಗೆ ಉಳಿಸಿದ್ದು ಮತ್ತೆಂದಿಗೂ ಪೂರೈಸಲಾಗದ ಅಪ್ಪಿಯಾಗೆ ನಾನುಳಿದು ಬಿಟ್ಟದ್ದು. ಎಲ್ಲವೂ ಆ ನಗುವಿನಲ್ಲೇ ಲೀನ.

ಅಮ್ಮನ ಅತೀ ಪ್ರೀತಿಯ ಗಡ್ಬಡ್., ಇಷ್ಟಪಟ್ಟು ತಂದು ತಿನ್ನುತ್ತಿದ್ದ ಕಲ್ಲಂಗಡಿ ಹಣ್ಣು , ಅಮಾ ನೋಡು ನಿನ್ನ ಮಗನ ಸಂಬಳದಿಂದ ತಂದದ್ದೆಂದು ಎದುರಿಗೆ ಕುಳಿತು ತಿನ್ನಿಸಲಾರದೆ ಹೋಗದ್ದು ಇವತ್ತು ನಗು ನೋಡಿದೊಡನೆ ದಿಗ್ಗನೆದ್ದು ಕಾಡಿಸುತ್ತಿದೆ. ಎಲ್ಲರ ಮಕ್ಕಳನ್ನ ಬರಗಿ ಮುದ್ದಾಡುತ್ತಿದ್ದ ಪ್ರೀತಿಯ ಅಜ್ಜಿ ಸ್ವಂತ ಮಗಳ-ಮಗಳನ್ನ ಸಂತೃಪ್ತಿಯಾಗುವಷ್ಟು ಮುದ್ದಾಡಲಾಗದಷ್ಟು ಕಮ್ಮಿ ಸಮಯ ಕೊಟ್ಟ ದೇವರ ಮೇಲೆ ಜಗಳ ಕಾದುಬಿಡುವ ಮನಸು.

ನನ್ನೆಲ್ಲ ಪ್ರೀತಿ ಸಿಟ್ಟು ಸ್ವಾಮ್ಯಭಾವ ಎಲ್ಲವನ್ನೂ ಧರಿಸಬಲ್ಲ ಆಕೆ ಮತ್ತೆಂದೂ ಬರಲಾರಳು.ಬ್ರೇಕ್ ಅಪ್ಪೇ ಆಗದ ಆ ಲವ್ವು  ಮತ್ತೊಂದಿರಲಾರದು .  ಮತ್ತಾರೂ ಕರೆಯದ ಆ ದ್ವನಿ ಇನ್ದೇಕೂ ನಿರಂತರ
"ಅಪೀ "

7 comments:

  1. ಎತ್ತರವನು ಅಳೆಯೆ ಹೋದವರು ಯಾರು?
    ಉತ್ತರಿಸದಿಹ ಪ್ರಶ್ನೆ ಇನ್ನು ನೂರಾರು?

    ReplyDelete
  2. ಅನುರಾಧ.July 3, 2012 at 9:10 AM

    ಎದುಗಿರುವ ಅಮ್ಮನ ಬೆಲೆ ತಿಳಿಯದವರು ಹಲವಾರು...ಅವರ ನಡುವೆ ಎದ್ದು ಕಾಣುವ ಅಪ್ಪಿ.. ಅತೀ ಆಪ್ತವೆನಿಸುವ ಪದ..

    ReplyDelete