Sunday, February 21, 2021

ಪಯಣ

ಹೆಸರೇ ಇಲ್ಲದ ಊರಿಗೆ ಒಂಟಿ ಕಂಬಿಯ ರೈಲು 

ಬೋಗಿಯ ಒಳಗೆ ಬಿಕರಿಗೆ ಉಂಟೇ ಕೈಗೆ ಸಿಕ್ಕದ 

ಬೆಂಕಿಯ ಹೂವು ?


ಮುಚ್ಚದ ಕಿಟಕಿಯ ಕಣ್ಣೊಳಗೆ ಉದ್ದಾನುದ್ದ ಬಯಲು 

ಹಾರುವ ಈಪ್ಸೆಗೆ ಕಾಲು ಕಟ್ಟಿದೆಯೇ ಎರಡು ಮಂಡೆಯಾ 

ಕೆಂಪನೆ ಹಾವು ?


ನಿಲ್ಲದ ಗಾಡಿಗೆ ಹತ್ತುವರ್ಯಾರೋ , ಇಳಿಯುವರ್ಯಾರೋ 

ಕೊಲ್ಲುವರ್ಯಾರೋ , ಕೂರುವರ್ಯಾರೋ ಗೊತ್ತೇ ಇಲ್ಲ

ಕತ್ತಲ ರಾತ್ರಿ ಮಗ್ಗುಲು ಬದಲಿಸೆ ಚುಚ್ಚಿದ್ಯಾವದು 

ಹೂವ ! ಮುಳ್ಳ  ?

 

ಕೋರಿ ಸೆಟ್ಟಿಯಾ ಬುಟ್ಟಿಯ ಒಳಗೆ ಕಟ್ಟುಗಟ್ಟಲೆ ಹಳವಂಡ 

ಕೊಟ್ಟು ಕಸಿಯುವ ಯಾಪಾರಕ್ಕೆ ಎಲ್ಲಾ ತುಟ್ಟಿ ,ನೆಂಟೇ  ಅಗ್ಗ 

ಎನ್ನೆಯ ತಾವು ಮೀಸಲಿಗುಂಟು  ಮುಂದಿನ ತಾಣದಿಯಾದರೂ 

ಹತ್ತುವೆಯೇನೋ ನನ್ನಯನಲ್ಲ ?




Sunday, November 18, 2018

ಪತ್ನಿಶೇಷ

ಹೊಸ ಪೀಳಿಗೆಯ ಚಿನ್ನು ಮುನ್ನುವಿನ ಕಲರವವೆನ್ನಲ್ಲ ಕೇಳಿದಾಗೆಲ್ಲ ಮೂಡುವದು ಪ್ರೀತಿ ಪಡೆಯುವ ಹೊಸ ಅವತಾರಗಳ ಬಗ್ಗೆ ನಗುವಷ್ಟೇ. ತಂತ್ರಜ್ಞಾನದ ಬೆಳೆವಣಿಗೆಯ ಅಚ್ಚರಿಯ ಕೊಡುಗೆಗಳಲ್ಲಿ ಪ್ರೀತಿಯ ದೊರೆಯುವಿಕೆ ಕೂಡ ಒಂದು. ಪ್ರೀತಿಸುವುದು ಸುಲಭ ಈಗ.

ನಮ್ಮ ಮುತ್ತಜ್ಜನ ಅಜ್ಜನ ಕಾಲದಲ್ಲಿ ಹೀಗಲ್ಲವಲ್ಲ ! ಮದುವೆಯಾಗದೆ ಹೆಣ್ಣಿನ ಸ್ಪರ್ಶ ಸಲಿಗೆಗಳ ಅನುಭವವದೆಲ್ಲಿಯ ಮಾತು ?! ಕೂಡು ಕುಟುಂಬದ ಜನಜಂಗುಳಿಯ ಮಧ್ಯೆ, ಕಾಡುವ ಬಡತನವೋ ಮತ್ತೊಂದರದ್ದೋ ತಲೆಬಿಸಿಯ ನಡುವೆ "ಚಿನ್ನಾ , ಬಿಡಲಾರೆ ನಿನ್ನಾ" ಅನ್ನಲು ಪುರುಸೊತ್ತೆಲ್ಲಿ  :)

ದುಡಿದು ಬಂದ ಗಂಡ ಹಸಿಯದೇ ಮಲಗಲಿ ಎಂದು ಇದ್ದ ಅಕ್ಕಿಯನ್ನೆಲ್ಲ ಹಾಕಿ ಮಡಿದ ಅನ್ನವ ಬಡಿಸುತ್ತಿದ್ದಳಂತೆ. ಆಗಿನ ಬಡ ಬ್ರಾಹ್ಮಣರ ಕತೆ ಗೊತ್ತಲ್ಲ, ಯಾರಾದರು ದಾನವ ಮಾಡಿದರೆ  ಅಂದಿನಂದಿನ ಊಟದ ಕತೆ. ಇಲ್ಲದದಿದ್ದರೆ ಇಲ್ಲ. ಗಂಡನೂ ಹುಷಾರು, ಪತ್ನಿ ಮಾಡಿದಡುಗೆಯನೆಲ್ಲ ತನಗೇ ಬಡಿಸುತ್ತಾಳೆ ಎಂದು ತಿಳಿಯದ್ದಿದ್ದೀತೇ !? ಅವ ಹಾಕಿದ ಅನ್ನದಲ್ಲಿ ಒಂದು ಪಾಲು -" ಅಯ್ಯೋ , ಹೊಟ್ಟೆ ತುಂಬಿತು. ಸೇರುವುದೇ ಇಲ್ಲ " - ಎಂದೆನ್ನುತ  ಬಿಟ್ಟು ಕೈತೊಳೆಯುತ್ತಿದ್ದ ಮಾರಾಯ. ತರುವಾಯ ಹೆಂಡತಿ ಅದನ್ನು ಉಂಡು ಮಲಗತ್ತಿದ್ದಳು. ಮುಂದೆ ಅದೇ ಶಾಸ್ತ್ರವಾಯಿತು - ಹಳೆ ಅಜ್ಜಂದಿರ ಬಾಳೆ  ನೋಡಿದರೆ ಗೊತ್ತಾದೀತು

ನಮ್ಮ ಸಂಸ್ಕೃತಿ ಸಂಸ್ಕಾರದದ ಮೈಯ ತುಂಬೆಲ್ಲ ಇಂತಹ ಪ್ರೀತಿಯ ಅನುಭೂತಿಯದೇ ಚಿತ್ತಾರ. ಈಗಲೋ, ಲವ್ ಯು ಮಿಸ್ ಯು ಗಳ ಮಧ್ಯೆ ಪ್ರೀತಿಯೊಂದೇ ಮಿಸ್ಸಿಂಗ್.

Monday, March 28, 2016

ಗುಡಾಕು

ಎಲ್ಲರಿಗೂ ಮನಸಿಹುದು
ಬೆಲ್ಲ ಸವಿಯಲು ,ಗೆಳತಿ ,
ನಿನ್ನ ಲಲ್ಲೆಗೆರೆಯಲು .

ಗಟ್ಟಿಗರು ಎಷ್ಟಿಹರು
ಆಲೆ ಕಟ್ಟಲು ,ಗೆಳತೀ  ;
ಒಲವು ಜೋಡಿ ತೊಟ್ಟಿಲು

ಬಿಸಿಬೆಲ್ಲ ,ಜೋನಿಯನು
ಬಯಸುವುದು ಪ್ರತಿರಸನೆ
ಗೆಳತೀ  , ಕಾವಿಳಿದ ಮೇಲೆ
ತಾನೇ ಬಣ್ಣ ಕರಿಯು

ಬಾಣಸಿಗರೆಷ್ಟಿಹರು ಹಳೆ-
ಬೆಲ್ಲವ ಗುಳ ಮಾಡಲು
ಗೆಳತೀ  , ಒಲವು
ಸಾವಿರದ ಮೆಟ್ಟಿಲು

Tuesday, October 22, 2013

ಬೆಳಕು ಬದಲಿಸದು ಬಣ್ಣ .....

ಇರುಳು ಕಾನನದೊಳಗೆ ಪ್ರೀತಿ ತಿಮಿರದ ಕೂಪ 
ಉಸುಕು ಮುಸುಕಿನ ಒಳಗೆ ಹೊಗೆಯುತಿದೆ ಕನಸ ಧೂಪ 
ಕಣ್ಣ ಕಪ್ಪಿನದೋ ಬೆಳ್ಳಂ ಬೆಳಕಿನದೋ ಕಾಯುತಿಹ ಭಾವಿ 
ಬಣ್ಣ ಬಣ್ಣದ ಕುದುರೆ ಹಾರುತಿಹುದು ರಾತ್ರಿ ಕಂಡ ಬಾವಿ.


ಭಾಮೆಯೋ ರಾಧೆಯೋ ಕೃಷ್ಣ ಪ್ರೀತಿಯಣ್ಣೆಯ ಕಿಣ್ಣ 
ಬತ್ತಿ ಬದಲಿದರೇನು ಬೆಳಕು ಬದಲಿಸದು ಬಣ್ಣ 
ಒಲವ ಕಡಲಿನ ಒಳಗೆ ಸುಖ ದುಃಖ ಶೀತೋಷ್ಣ 
ಮಿಂಚು ಗುಡುಗಿನ ನಡುವೆ ಪ್ರೇಮ ಅಪ್ಪಟ ಕೃಷ್ಣ

Tuesday, June 25, 2013

ಮರಳಿ ಬಾ ಶಾಲೆಗೆ ....

ಗೆಳೆಯ ಈಶ್ವರಪ್ಪಚ್ಚಿ ಆವಾಗ 'ಮನುಷ್ಯರಿಂದ ಹೇಗೆ ಮನುಷ್ಯರು ಹುಟ್ಟುತ್ತಾರೋ  ಹಾಗೆ ಪುಸ್ತಕಗಳಿಂದ ಪುಸ್ತಕಗಳು ಹುಟ್ಟುತ್ತವೆ' ಅಂತ  ಒಂದು ಮಾತು ಹೇಳಿದ್ದ..  ಭಣಗುಡುವ  ನನ್ನ ಈ ಅಕ್ಷರಮನೆಯ ಕಂಡಾಗಲೆಲ್ಲ ಅಪ್ಪಚ್ಚಿಯ ಈ ಮಾತು ಅನುರಣಿಸುತ್ತದೆ. ಅಕ್ಷರವ ಉಣದೆ ಅಕ್ಷರವ ಕಕ್ಕುವುದು ಕಷ್ಟ. 

ಅಷ್ಟಕ್ಕೂ ಓದುವ ಅಭ್ಯಾಸ ಬಿಟ್ಟದ್ಯಾಕೆ ?!  ಟಿವಿಯೋ , ವಯಸ್ಸೋ ,ಬೆಂಗಳೂರು, ಕೆಲಸ ಏನೆಲ್ಲಾ ಕಾರಣಗಳ ಹೊರತಾಗಿಯೂ ಅದು ಬದಲಾದ ಕಾಲಗತಿಯಲ್ಲಿ ಬದಲಾಗಿರುವ ಆಗುತ್ತಿರುವ  ಆದ್ಯತೆಗಳ ಪಟ್ಟಿ ಅಷ್ಟೇ. ನಾಯಕರ ಮಾತಿನಂತೆ ,'ಮಳೆಗಾಲದಲ್ಲಿ ಕಾದು ಕಾದು ಅನುಭವಿಸುವ ಬಿಸಿಲು ಬೇಸಿಗೆಯಲ್ಲಿ ಯಾರಿಗೂ ಬೇಡವಾಗುವ ಪರಿಯಲ್ಲಿ ' ನಮ್ಮ ಆದ್ಯತೆಗಳೂ ಹಾಗೂ ಮತ್ತೊಬ್ಬರ ಆದ್ಯತೆಗಳ ಪಟ್ಟಿಯಲ್ಲಿ ನಮ್ಮ ಸ್ಥಾನವೂ ಬದಲಾದಂತೆ ಅಕ್ಷರಭೋಜನ ಕಮ್ಮಿಯಾಗಿದೆ. 


ಬದುಕ ದಾರಿಯಲ್ಲಿ ಮನಸ್ಸಿಗಿಂತ ಜಾಸ್ತಿ ದೇಹದ ಮೇಲೆ ಒಲವು ಮೂಡುವಾಗ ಈ ಉಬ್ಬುತಗ್ಗುಗಳು ಸಹಜ. ಯಾವ ಅನುಭೂತಿಯನ್ನೂ ತಪ್ಪಿಸಿಕೊಳ್ಳಲಿಚ್ಚಿಸದ ಮನಸಿನೊಂದಿಗೆ ಬದುಕ ಮೇಲಿನ ಪ್ರೀತಿ ಬರಹದಂತಾಗದಿರಲಿ ಎಂಬ ಹಾರೈಕೆ ನನ್ನದು . ನನ್ನಂತೆ ಬರಹ ಬಿಟ್ಟ ಎಲ್ಲರಿಗೂ . :)

Friday, March 8, 2013

ಪೂರ್ಣಮೇವಾವಶಿಷ್ಯತೆ ......


ನಾವು ಸಣ್ಣವರಿದ್ದಾಗ ಚೌತಿಗೋ ದೀಪಾವಳಿಗೋ ಒಂದು ವಾರ ಮುಂಚೆ ಪಟಾಕಿ ತಂದಿಡುತ್ತಿದರು.ಒಂದು ವಾರ ಪಟಾಕಿ ಹೊಡೆಯುವ ಹಾಗಿರಲಿಲ್ಲ.ದಿನವೂ ಶಾಲೆಯಿಂದ ಬಂದ  ತಕ್ಷಣ ಓಡಿ ಪಟಾಕಿ ಡಬ್ಬವನ್ನ ಮುತ್ತಿ ,ಮುಟ್ಟಿ ದಿನ ದಿನವೂ ಕೆಂಡದ ಬಿಸಿ ಕಾಸಿ ವಾಪಸ್ಸು  ಕಪಾಟಿನಲ್ಲಿ ಇಡುವ ಸಂಭ್ರಮ , ಹಬ್ಬದ  ದಿನ  ಟುಸ್ಸೆಂದು ಬಿಡುವ  ಪಟಾಕಿ ಶಬ್ದದಲ್ಲಿರಲಿಲ್ಲ.

ಮದುವೆಯ ನಂತರ ಮೊದಲ ರಾತ್ರಿಗೂ ಮುಂಚೆ ಇಷ್ಟೇ ಇಷ್ಟು ಶಾರ್ಟ್ ಟೈಮ್ ಅಲ್ಲಿ  ಉಬ್ಬರಿಸಿಬಿಡುವ ಕೌತುಕತೆ ತಾಳಿ ಕಟ್ಟುವ ಶುಭವೇಳೆಯಲ್ಲೂ  ಮದುಮಕ್ಕಳಿಗೆ ಹುಟ್ಟಿರುವುದು ಸುಳ್ಳು.ಅಲ್ವೇ?

ಮಳೆ ಬರುವುದಕ್ಕೂ ಮುಂಚೆ ಮೋಡ ಕವಿದು ಇಷ್ಟಿಷ್ಟು ಭಾವ ಮಳೆ ಸುರಿಸಿಬಿಡುವ ಪ್ರಕೃತಿ , ಅರ್ಧ ಬೆಳೆದು ನಿಂತ ಭತ್ತದ ಗದ್ದೆಯ ಸೊಬಗು , ಅರ್ಧ ಮಾತು ಕಲಿತ ಮಕ್ಕಳ ಮುದ್ದು ಶಬ್ದಗಳು  , ಎಲ್ಲವೂ ಇಡಿ ಇಡಿಯಾಗಿ ಹಿಡಿಸಿಬಿಡುತ್ತದೆ,ಪೂರ್ಣತೆಯ ಹಂಬಲಕ್ಕಾ ?.

ಕಯ್ಯಿಂದ್ಲೆ ಕಾಯಿಯ ಕಹಿಯಂತೆಯೋ  ಹನಿ  ಮಳೆಯ ನಂತರದ ಘಮದಂತೆಯೋ ಒಳಗಡೆ ಅಡಗಿ ಕುಳಿತುಬಿಡುವ ಈ ಖುಷಿ(!) ವರ್ಣಿಸಲಸದಳ.

ಇನ್ನೂ ಸಿಗದ ಹುಡುಗಿಗಾಗಿ ಕಾಯುವ , ಕಾದು ಕಾತರಿಸುವ , ಕಾತರಿಸಿ ಕನವರಿಸುವ , ಕನವರಿಸಿ ಕನಸು ಕಾಣುವ , ಕಂಡ ಹುಡುಗಿಯರ ಕಣ್ಣಲ್ಲೆಲ್ಲ ನಮ್ಮದೇ ಪ್ರತಿಬಿಂಬವ ಹುಡುಕುವ ಸಂಭ್ರಮ ಕಾದಿರಿಸುವ ಪಟಾಕಿಯಂತೆ. ಟುಸ್ಸೆಂದು ಬಿಡುವ ಶಬ್ದಕ್ಕಿಂತ ,ಕಾತರಿಸುವ ಅರ್ಧ ಮಾತ್ರ ನನಸಾಗುವ ಕನಸು ಬಂಗಾರ.

ಅಪೂರ್ಣಕ್ಕಿಂತ ದೊಡ್ಡ ಕೌತುಕವಿಲ್ಲ ,ಕಾತುರತೆಗಿಂತ ದೊಡ್ಡ ಸಂಭ್ರಮವಿಲ್ಲ ,ನನಸಿಗಿಂತ ಕನಸೇ ಚಂದ.

ಅಷ್ಟಕ್ಕೂ  ಅರ್ಧ ಮಾತ್ರ  ಬಟ್ಟೆ ತೊಟ್ಟ ಮಲ್ಲಿಕಾಳೆ ನಮ್ಮದೆಯರಸಿಯಲ್ಲವೇ ;)

Sunday, February 24, 2013

ಪರತಂತ್ರದೊಳು ಸ್ವಾತಂತ್ರ್ಯ !


ನಮಗೆ ಸ್ವಾತಂತ್ರ್ಯ ಬಂತು .ಸ್ವಾತಂತ್ರ್ಯದ "ಮಹಾಸೇನಾನಿ" ಪುಣ್ಯಾತ್ಮ ನೆಹರು ಅಖಂಡ ೧೬ ವರ್ಷಗಳ ದೇಶವನ್ನ "ಉದ್ದಾರ" ಮಾಡುವ ಪ್ರಯತ್ನ ಮಾಡಿದರು.ನಾವಿವತ್ತು ಬಹಳ ಖುಷಿಯಿಂದ ಆಗಸ್ಟ್ ೧೫ ರಂದು ದ್ವಜ ಹಾರಿಸಿ ದೇಶಪ್ರೇಮದ ಬುಗ್ಗೆ ಹರಿಸಿ ಸಂತಸ ಪಡುತ್ತೇವೆ.ಆದರೆ ನಮಗೆ ಯಾಕೆ ಆಗಸ್ಟ್ ೧೫ ರಂದೇ ಸ್ವತಂತ್ರ ಬಂತು ಗೊತ್ತ.(ಯಾವತ್ತಾರು ಒಂದು ದಿನ ಬರಲೇ ಬೇಕದು ಬಿಡಿ).
ನಮಗೆ ಜುಲೈ ೪ ರಂದೇ   ರಂದೇ ಸ್ವಾಂತಂತ್ರ್ಯ ಕೊಡಲು ೨೦೦ ವರ್ಷ ಶೋಷಣೆ ಮಾಡಿದ ಬ್ರಿಟಿಷರು ತಯಾರಾಗಿದ್ದರು.ಇಂಗ್ಲಂಡ್'ನ ಅರ್ಥಿಕ ಪರಿಸ್ತಿತಿ ದಿವಾಳಿಯಾಗುವ ಹಂತದಲ್ಲಿ ಇದ್ದದರಿಂದ ಅವರು ವಸಾಹತು ಒಂದನ್ನ ಬಿಡಲೇ  ಬೇಕಾಗಿತ್ತು. ಅಧಿಕಾರ ಹಸ್ತಾಂತರ ಮಾಡುವುದಕ್ಕೆ ಮೌಂಟ್ ಬ್ಯಾಟನ್ ಅವರಿಗೆ ಸೂಚನೆಯೂ ಬಂದಿತ್ತು  ,   ಆದರೆ ಆಗಸ್ಟ್ ೧೫ ರ ದಿನವನ್ನ ಮೌಂಟ್ ಬ್ಯಾಟನ್ ಅದೃಷ್ಟದ ದಿನವೆಂದು ಪರಿಗಣಿಸುತ್ತಿದ್ದ . ಯಾಕೆಂದರೆ ಆತ ಎರಡನೇ ಮಹಾ ಯುದ್ದದಲ್ಲಿ ಕಮಾಂಡರ್ ಆಗಿದ್ದಾಗ  ಅಗಸ್ಟ್ ೧೫ರಂದೇ ಜಪಾನ್ ಸೇನೆ ಶರಣಾಗತಿ ಒಪ್ಪಿಕೊಂಡಿತ್ತು.ಅದನ್ನು ಸ್ಮರಣೀಯ ಮಾಡಿಕೊಳ್ಳುವಾಸೆ ಆತನ ಹೆಂಡತಿಗೆ.ಹೆಣ್ಣುಮಕ್ಕಳ ಆಸೆಗೆ ಕರುಣಾಮಯಿ ನೆಹರು ಯಾವಾಗ ತಾನೇ ಬೇಡ ಅಂದ್ರು ಹೇಳಿ.ಅದಕ್ಕೆ ನಮ್ಮ ಸ್ವಾತಂತ್ರ್ಯ ಮುಂದಕ್ಕೆ ಹೋಯ್ತು.

ಸ್ವಂತದ ಕಾಮನೆಗಳಿಗೆ ದೇಶವನ್ನು ಮಾರುವ ಬುದ್ದಿ ನಿನ್ನೆ ಮೊನ್ನೆಯದಲ್ಲ.ಕರ್ನಾಟಕದ ರಾಜಕಾರಣಿಗಳ ಬಗ್ಗೆ ಸಣ್ಣದೊಂದು ಕರುಣೆ ತೋರಿಸಬಹುದೆನ್ನಿಸುತ್ತದೆ ಅಲ್ಲವ :p




Wednesday, December 12, 2012

ಇರಕ್ಕಾಗದಿಲ್ಲೆ ಹೋಗಕ್ ಹರಿಯದಿಲ್ಲೆ

" "

 ಕಂಡಾಪಟ್ಟೆ  ಅನ್ನುವಂತ ಸಂಬಳ ಏನ್ ಬರೋದಿಲ್ಲ. ಅಷ್ಟಕ್ಕೂ ನಾವ್  ಕಾಲೇಜ್ ಅಲ್ಲಿದ್ದಾಗ ಕನಸು ಕಂಡ ಐದಂಕಿ ಸಂಬಳವೇ ಬಂದ್ರು ಬೆಂಗಳೂರು ಲೆವೆಲ್ಲಿಗೆ ಇವೆಲ್ಲ ಬುರ್ನಾಸು ಅಂತ ಅಂದಾಜಾಗಿ ಹೋಗಿದೆ .ಸಾಗರದಲ್ಲಿ ಬರುವ ನಾಕೆ ಅಂಕಿಯ ಸಂಬಳದಲ್ಲಿ ಇದಕ್ಕಿಂತ ಸುಖವಾಗಿ ಬದುಕಬಹುದು ಹೇಳೆಲ್ಲ ಗೊತ್ತಿದ್ರು ಕೂಡ "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ  ".!!

ಒಂದು ರುಪಾಯಿ ಬಾಡಿಗೆ ಕೊಡದೆ ಸಿಗುವ (ಇರುವ ) ದೈದಾಳ ಮನೆಯಲ್ಲಿ  ಮದ್ಯಾನ ಸೈತ  ಮನ್ಕ್ಯಂಡು  , ಮನಸು ಕಂಡಾಗ ಕವಳ  ಹಾಕಿ  ದಿನ ಎರಡೆರಡು  ತಾಸ್  ಕ್ರಿಕೆಟ್  ಆಡಿ , ಈ ಶರ್ಟ್  ಹಾಕಿರೆ ಹೊಟ್ಟೆ  ಕಾಣ್ತನ  ,ಈ ಶರ್ಟ್  ಹಾಕಿರೆ ಹೊಟ್ಟೆ  ಕಾಣ್ತನ  ಹೇಳುವ ಕೇಳುವ ಪ್ರಶ್ನೆಯೇ  ಇಲ್ಲದ ದಿಲ್ದಾರ್ ಬದುಕು ಅದರೂ  "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ  ".!!

ಬೆಳಗೆ ನಿದ್ದೆ ಮುಗದ್ ಮೇಲೇ  ಎದ್ದು  ಜೀವವಿರುವ  ದನದ  ಜೊತಿಗೆ ಕೆಲಸ ಮಾಡಿ  ದೋಸೆ ತಿಂದು ಪೇಪರ್ ಓದಿ , ನಮ್ಮನೆ ತೋಟ ನಮ್ಮನೆ ಗದ್ದೆ ಹೇಳಿ ಓಡಾಡಿ , "ಹೊತ್ತಾತು  ಸ್ನಾನ ಮಾಡ ಹಂಗಾರೆ" ಹೇಳುವ ಅಪ್ಯಾಯಮಾನ ಗದರುವಿಕೆ  ಕೇಳಿ , ಕರೆಂಟು  ಬಿಲ್ಲಿನ , ನೀರ ಕೊರತೆಯ ಚಿಂತೆ ಇಲ್ಲದೆ  ಒಂದು ಹಂಡೆ ನೀರಿನ ಸ್ನಾನ ಮಾಡಿ ಗಡದ್ದಾಗಿ  ಹೊಡೆಯುವ ಊಟದ ನೆನಪು ಕಾಡಿರೂವ   "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ .!!

ದುಡ್ಡು ಸುಖದ ಅರ್ಥವನ್ನೇ ಬದಲಿಸಿ ಕುಂತಿದ್ದು !!

Tuesday, November 13, 2012

ಬೈಕು ಮತ್ತು ದೀಪಾವಳಿ

ಪೂಜೆ ಹೇಳೋದೇ ಆತ್ಮಸಾಕ್ಷಿಯ ಆರಾಧನೆಯ ಪ್ರತೀಕ. ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿಗೂ ತಿರುಗಿ  ಗೌರವ ಸೂಚಿಸುವ ಸಂಕೇತ. ಪೂಜೆ ಯಾವತ್ತು ಯಾವ್ದಕ್ಕೆ ಮಾಡಿದರೂ ಒಂದೇ. ಒಳ್ಳೆಯದೇ. ಅದರೂ ಡೆಡ್ಲೈನ್ ಕೊಡದಿದ್ದರೆ ಸಂಬಳ ಕೊಟ್ಟು ಮಾಡಿಸುವ ಕೆಲಸವೇ ಆಗುವುದಿಲ್ಲ. ಇನ್ನು ಪೂಜೆ ಮಾಡು ಅಂದ್ರೆ ಮಾಡಿದ ಹಂಗೇನೆ.

ಅದು  ಹಾಗಿರಲಿ .ನವರಾತ್ರಿಯಂದು   ಆಯುಧ ಪೂಜೆ ಅಂತ ಬೆಂಗಳೂರಿಗರೆಲ್ಲ ಸಾಲು ಸಾಲು ಗಾಡಿಗಳಿಗೆಲ್ಲ  ಬಾಳೆ ತೋಟ ಸಿಕ್ಕಿಸಿಕೊಂಡು ಓಡಾಡುತ್ತಾರೆ. ನಾವು ಸಾಗರಿಗರು ಮಾತ್ರ ಯಾಕೆ  ದೀಪಾವಳಿಯಂದು  ಮಾಡುತ್ತೇವೆ??. ನನ್ನ ಗೆಳೆಯರ ಭಾಷೆಯಲ್ಲಿ ,"ನಿಮ್ದೆನ್ ಸ್ಪೆಷಲ್ಲು "??

actually , ಬೈಕು ಕಾರು , ಗುದ್ದಲಿ ಹೆಡಿಗೆ ಇವೆಲ್ಲ "ಆಯುಧಗಳಲ್ಲ"(Not weapons) . ಅದು "ಆಸ್ತಿ"(Asset). ಲಕ್ಷ್ಮಿ. ಬೆಂಗಳೂರಿಗರು ಅದನ್ನೆಲ್ಲ ಆಯುಧದ ತರಹ ಉಪಯೋಗಿಸಬಹುದು. ನಾವು ಅದನ್ನ ನೀಟಾಗಿ ಉಪಯೋಗಿಸುತ್ತೇವೆ. ಹಾಗಾಗೆ ಆಯುಧಪೂಜೆ ಮಾಡುತ್ತೀರಿ . ನಾವು ಲಕ್ಷ್ಮಿಪೂಜೆ.

ಬೆಂಗಳೂರೇ ಹಾಗೆ . ದಿಕ್ಕು ತಪ್ಪಿ ಬಿಟ್ಟಿದೆ.!!!

Saturday, September 15, 2012

ಒಂದು ಪ್ರೇಮಪತ್ರ

ಗೆಳತಿ.,,
ನಿನ್ನ ಸೌಂದರ್ಯ ಅನೂಪವಾದುದು .,ಅನೂರವಾದುದು.ನಿನ್ನ ರೂಪ ನನ್ನಂತರಗದ ಹೃದಯ ವೀಣೆಯ ಮೀಟಿ .,ನನ್ನ ರೋಮಾಂಚನದ ತಂತುವಾಗಿ ಮಾಡಿದೆ.ನಿನ್ನ ಮುಂಗುರುಳು ನಿನ್ನ ಕೆನ್ನೆ ತಾಕುವ ಪ್ರತಿ ಹೊತ್ತು ನನ್ನೆದೆಯ ನಗಾರಿಯ ಜೀವ ಹುಚ್ಚೆದ್ದು ಕುಣಿ ಕುಣಿದು ಕುಶಿ ಪಡುತ್ತಿದೆ.ಆ ಹುಬ್ಬ ಒಂದು ಕೊಂಕು ಈ ಪಾಮರನ ಮನಸಿನ ಅಂಚಂಚಲ್ಲು ಅಳಿಸಲಾಗದ ಭಾವಗಳ ಚಿತ್ರಗೀತೆ ಬರೆಯುತ್ತಿವೆ.ಕಣ್ಣಂಚಿನ ಆ ನೋಟದ ಒಂದು ಕ್ಷಣಕ್ಕಾಗಿ ನಾ ನನ್ನ ಕಣ್ಣ ಕೂಪದಲಿ ಕನಸುಗಳ ಬಣ್ಣ ತುಂಬಿ ಕನಸ ನೋಟದ ಅನುಭಾವಕೆ ಕನಲಿ ಕಾತರಿಸಿಹೆನು.ತುಂಟ ತುಟಿಯ ಆ ಕಿರು ನಗು ನನ್ನ ಮನದೊಳಗಿನ ಬಹುಕಾಲದ ಮುತ್ತಾಗಿ ಎಂದು ರೂಪಾಂತರ ಆಗುತ್ತದೆಂದು .., ಜೀವನದ ಆ ಪುಟದ ಆ ಕ್ಷಣಕ್ಕಾಗಿ ಈ ಜೀವ ಪ್ರತಿನಿಮಿಷ ಕಾಯುತ್ತಿದೆ.ನಿನ್ನ ಗಲ್ಲ ಹಿಡಿದು ಬೆಲ್ಲಕ್ಕಿಂತ ಸಿಹಿ ಮತ್ತೊಂದಿದೆ ಅಂತ ಕೂಗಿ ಕೂಗಿ ಹೇಳಬೇಕುಂದು ಮನಸು ಮನಸ ಮಾಡಿಯಾಗಿದೆ ಹುಡುಗಿ.
ನಿನ್ನ ಮುತ್ತಿನಂತ ಪಾದಗಳ ಮೇಲೆ ನಾನು  ತುಟಿಯ ಪ್ರೆಮದುಂಗುರವಿತ್ತು.,ನಿನ ಕಾಲ್ಗಳಿಗೆ ಗೆಜ್ಜೆ ಕಟ್ಟಿ .., ಆ ಗೆಜ್ಜೆಯ ಸದ್ದಿಗೆ ನಾ ಕುಣಿದು ಅದ ನೋಡಿ ಈ ಮರ .. ಆ ಧರೆ .., ಅಲ್ಲಿರುವ ರವಿಚಂದ್ರ ಎಲ್ಲ ಕನ್ಮುಚ್ಚಿಕೊಂಡಾಗ ನಿನ್ನ ಗಲ್ಲ ಹಿಡಿದೆತ್ತಿ ನನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ಆಸೆಗೆ ನೀ ನಕ್ಕು ಬಿಡುತ್ತಿಯೇನೋ.
ಬಾಳೆ ಹಣ್ಣು ಬಾಯಿಗೆ ರುಚಿ ..,ಬಾಳೂ ಹೆಣ್ಣು ಮನಸ್ಸಿಗೆ ಶುಚಿ ಅಂತ ನಿನ್ನ ಪ್ರಿತಿಸಿದ್ದೇನೆ. ಪ್ರೆಮಿಸಿದ್ದೇನೆ.ಬಾಳಲ್ಲಿ ಬೆಳಕಾಗಲಾರೆಯ ಹುಡುಗಿ..ಒಮ್ಮೆ ಒಂದೇ ಒಂದು ಬಾರಿ ನಿನ್ನ ಮನಸಿನ ಶಾಶ್ವತ ಹುಡುಗನನ್ನಾಗಿ ನನಗೆ ಜಾಗ ಕೊಡಲಾರೆಯಾ.ಇಷ್ಟೆಲ್ಲಾ ಆಗಿ ..ಈ ಬರುವ ಪ್ರೇಮಿಗಳ ದಿನ .,ನನಗೂ ಅಗಲಿ ಎಂಬ ಹೊನ್ನಾಸೆಯೊಂದಿಗೆ ನನ್ನೆದೆಯರಸಿಯಾಗು ನೀ ಎಂದು ಆಹ್ವಾನವಿತ್ತಿದೇನೆ ಹುಡುಗಿ.ಒಪ್ಪಿಕೊಳ್ಳೆ ದೊರೆಸಾನಿ



(ತುಂಬಾ ಹಿಂದೆ ಬರೆದದ್ದು .ನೆನಪಿಗೆ )

Wednesday, September 12, 2012

ಅರೆಬೆಂದ ಮಾತುಗಳು.

ಉರ್ದು ಕವಿ ಸಾಹಿರ್ ಒಮ್ಮೆ ಎಲ್ಲೋ ಉಸುರುತ್ತಾನೆ ." ಹರ್ ಯುಗ್ ಮೇ ಬದಲ್ತೆ ರಹೇ ಧರಮ್ ಕೋ ಕೈಸೆ ಆದರ್ಶ್  ಬನಾವೋಗಿ".

ಎರಡೆರೆಡು ಭಾರಿ ಭಾಗವಾದ ಹೃದಯವನ್ನ ಒಂದು ಕೈಲೂ , ಮದಿರೆ ಬಾಟಲಿಯ ಕಂಠವನ್ನ ಮತ್ತೊಂದು ಕೈಲಿ ಹಿಡಿದುಕೊಂಡು ಚಿನ್ನದಂತ ಕವನಗಳನ್ನ ಕೊಟ್ಟ ಸಾಹಿರ್ನ ಮಾತುಗಳನ್ನ ಕೇಳಿದಾಗಲೆಲ್ಲ  ಒಂದು ಜೀವನ ಶೈಲಿಯ ಚಲನಶೀಲತೆ ಕಣ್ಣ ಮುಂದಿನ ಚಲನಚಿತ್ರವಗುತ್ತದೆ .ಹುಡುಗಿಯರ ಪಕ್ಕ ಕೂರಿಸುವುದೊಂದು ಶಿಕ್ಷೆಯಾಗಿದ್ದ ಕಾಲದಿಂದ ಅದೊಂದು ತಹತಹಿಕೆಯಾಗುವ ಕಾಲದವರೆಗೂ , ತಂಬಾಕು ಕ್ಯಾನ್ಸರ್ಗೆ ಕಾರಣ ಎಂದು ಓದೋದುತ್ತಲೇ ಸಿಗರೇಟ್ ತುದಿಗೆ ಕಿಚ್ಚಿಟ್ಟು ಅಪ್ಪನ  ಹಿಡಿತದಿಂದಾಚೆ ಬಂದೆ ಎಂದು ಸ್ವಾತಂತ್ರ್ಯೋತ್ಸವ ಆಚರಿಸುವ ಹದಿ ಹುಡುಗನವರೆಗೂ, ಎಲ್ಲವೂ ಚಲನಶೀಲತೆಯೇ.

ಬಹುಶಃ ಈ ತರದ್ದೊಂದು ಚಲನಶೀಲತೆಯೇ  ಧರ್ಮ , ಮತ್ತು ಮನುಜ  ನಾಗರೀಕವಾಗುವ ಪ್ರಕ್ರಿಯೆ. ಸಾಂಸ್ಕೃತಿಕ ಅನನ್ಯತೆಯನ್ನ ಕಾಪಾಡಿಕೊಳ್ಳುವ ಚೌಕಟ್ಟಿನಲ್ಲಿ ಚಲನೆಯನ್ನ ಒಪ್ಪಿಕೊಳ್ಳದ ಮತ್ತು ಸಾಮಾಜಿಕ  ವೇಗವನ್ನು ಒಡಲೊಳಗೆ ಇಟ್ಟುಕೊಂಡ ಎರೆಡು ಮನಸ್ತಿತಿಗಳು ಎದಿರುಬದರಾಗಿ ನಿಂತುಕೊಂಡಾಗಲೆಲ್ಲ  ಧರ್ಮ ಮತ್ತು ಸಂಸ್ಕೃತಿಯ ಅರ್ಥವ್ಯಾಪ್ತಿಯನ್ನ ಪರಿಷ್ಕರಿಸುತ್ತವೆ.ತಮ್ಮ ಜಾತಿಯ ಹುಡುಗಿ ನಮಗೆ ಬೀಳುವುದಿಲ್ಲ ಎಂಬ ಹುಡುಗನ ಅಸಹನೆ , ವೈಯುಕ್ತಿಕ ಅಭೀಪ್ಸೆಗಳಿಗೆ ಸಾಂಸ್ಕೃತಿಕ ಚೌಕಟ್ಟನ್ನ ನೀಡಿ ಚಲನೆಯನ್ನ ನಿಯಂತ್ರಿಸುವ  ಕ್ರಿಯೆಯಾದರೆ , ನಮ್ಮ ಜಾತಿಯ ಹುಡುಗರು ಸಂಕುಚಿತ ಮನಸ್ತಿತಿಯವರು ಎಂಬ ಹುಡುಗಿಯ ಆರೋಪ , ಸಾಮಾಜಿಕ ವೇಗದ ಕದಲಿಕೆಯಿಂದುಂಟಾದ ಕನಲಿಕೆ.

ಹತ್ತು ವರ್ಷಗಳ ಹಿಂದಿನ ನಮ್ಮದೇ ಸಾಂಸ್ಕೃತಿಕ ಚಿಂತನೆಗೂ ಇವತ್ತಿನ ನಮ್ಮ ಸಾಂಸ್ಕೃತಿಕ ಚಿಂತನೆಗೂ ಹತ್ತು ಹಲವು ವ್ಯತ್ಯಾಸಗಳಿರುವಾಗ , ಯಾವ ಕಾಲಘಟ್ಟದ ಆದರ್ಶವನ್ನ ಪಾಲಿಸಬೇಕೆಂಬ ಪ್ರಶ್ನೆಗೆ , ಹಿರಿಯ ತಲೆಮಾರು ಉತ್ತರ ಕೊಟ್ಟಿದ್ದಿಲ್ಲ, ಯುವ ತಲೆಮಾರು ಹುಡುಕುವ ಪ್ರಯತ್ನ ಮಾಡಿದ್ದಿಲ್ಲ.ಪಂಚೆಯಿಂದ ಪ್ಯಾಂಟಿಗೆ ಬದಲಾದಾಗ ಆಗದ ಸಂಘರ್ಷ , ಸೀರೆಯಿಂದ ಜೀನ್ಸಿಗೆ  ಬದಲಾದಾಗ ಕಾಣುತ್ತದೆ. ನಮ್ಮದೇ ಸಮಾಜ ಒಂದೇ ಪ್ರಕ್ರಿಯೆಗೆ ಎರಡು ವಿಭಿನ್ನ ಪ್ರತಿಕ್ರಿಯೆಗಳನ್ನ ನೀಡುತ್ತದೆ.

ಯಾವ ಬದಲಾವಣೆ ಅಗತ್ಯ ಎನ್ನುವ ಸಂದೇಹ ಸಾಮಾನ್ಯ ಮತ್ತು ಅದನ್ನ ಸಮರ್ಥಿಸಿಕೊಳ್ಳುವ ತಳಹದಿ ಕೂಡ ಸಾಪೇಕ್ಷ.  ಹುಡುಗ ಹುಡುಗಿ ಬಂಧನಗಳಿಲ್ಲದ ಸಂಬಂಧದೊಳಗಿರುವುದು ಒಂದಿಷ್ಟು ಜನಕ್ಕೆ ಕೌಟುಂಬಿಕ ವ್ಯವಸ್ತೆ ಹದಗೆಡಿಸುವ ಪದ್ದತಿಯಾದರೆ ಇನ್ನೊಂದಿಷ್ಟು ಮಂದಿಗೆ ವೈಯುಕ್ತಿಕ ಸ್ವಾತಂತ್ರ್ಯ ಒದಗಿಸಿಕೊಡುವ ಹೊಸ ಮಿನುಗು.

ಒಂದು ನಿರ್ದಿಷ್ಟ ಗಡಿಗಳಿಲ್ಲದೆ ಚಲಾವಣೆಯಾಗುವ ಸಂಪ್ರದಾಯ ಒಂದಿಷ್ಟು ಬದಲಾವಣೆಯನ್ನ ಒಳಗೆಳೆದುಕೊಂಡು , ಇನ್ನೊಂದಿಷ್ಟನ್ನ ವರ್ಜಿಸುವ ಅತಾರ್ಕಿಕ ನಿರ್ಧಾರಗಳೂ ಕೂಡ , ಒಂದು ತಲೆಮಾರು ಮತ್ತು ಒಂದಿಷ್ಟು ಜನರ ಹಿತ ಆಸಕ್ತಿಗೆ ಅನುಗುಣವಾಗಿ ವರ್ತಿಸುತ್ತಿದೆ ಅನಿಸಿದ ಕ್ಷಣವೇ ಅದು ಸೂಚಿಸುವ ಆದರ್ಶಗಳಿಗೆ ಮತ್ತೊಂದು ತಲೆಮಾರು ಅಸಮ್ಮತಿಯನ್ನ ತನಗೆ ತೋಚಿದ ರೀತಿಯಲ್ಲಿ ಹೊರಹಾಕುತ್ತದೆ.  ಬೇಕಂತಲೇ  ತನ್ನ ಸಂಸ್ಕೃತಿ ಒಪ್ಪದ   ಹುಡುಗರೊಟ್ಟಿಗೆ ಗಂಡುಬೀರಿಯಂತೆ ತಿರುಗುವ ಹುಡುಗಿ ಅಥವಾ  ಎಣ್ಣೆ ಕಮಟಿನಲ್ಲಿ ಜಾತಿ ಬಿಟ್ಟವಳೆನ್ದು  ಆ ಹುಡುಗಿಯರನ್ನು ಬೈಯುವ ಹುಡುಗ - ಇಬ್ಬರೂ ಇದರದ್ದೇ ಉತ್ಪನ್ನ.

ಬಹುಶಃ ಧರ್ಮವೂ ಕೂಡ ಶಂಕರಾಚಾರ್ಯರ ಒಂದು ಮಾತಿನಂತೆ " ಆ ಕ್ಷಣದ ಸತ್ಯ" ಅಷ್ಟೇ. ಕವಿ ಸಾಹಿರ್ನಂತೆ ಅದನ್ನ ಸಾರ್ವಕಾಲಿಕ ಮತ್ತು ಸಾರ್ವತ್ರಿಕ  ಆದರ್ಶ ಮಾಡಿಕೊಳ್ಳುವದು ಮೂರ್ಖತನ. ಅಷ್ಟಕ್ಕೂ ಹರ್ ಯುಗ್ ಮೇ ಬದಲ್ತೆ ರಹೇ
ಧರಮ್ ಕೋ ಕೈಸೆ ಆದರ್ಶ್  ಬನಾವೋಗಿ??!!

Wednesday, August 8, 2012

ಸಿಡಿಲು !!

ಸಿಡಿಲು !!...ಅದೊಂದು ಅದ್ಬುತ ಕೌತುಕಗಳ ಸಂಗಮ.ಶಕ್ತಿಯ ಸಂಕೇತ.ಪ್ರಕೃತಿಯ ರುದ್ರರಮಣೀಯತೆಯ ಚುಂಚು.ಅದು ಇಂದ್ರನ ವಜ್ರಾಯುಧ ಎಂದೂ ,...ಅಥವಾ ಅರ್ಜುನನಿಗೆ ಹೆದರುತ್ತದೆಂದೂ ಕೇಳಿದ್ದೇವೆ.
ಆದರೆ ಸಿಡಿಲಿನ ಉತ್ಪತ್ತಿ ಹೇಗೆ.ಸ್ವಲ್ಪ ವಿಜ್ಞಾನಿಕ ಪ್ರಶ್ನೆ.ಸಣ್ಣವನಿದ್ದಾಗ ಮೋಡ ಮೋಡಕ್ಕೆ ಡಿಕ್ಕಿ ಹೊಡೆದು ಸಿಡಿಲು ಬರುತ್ತದೆಂದು ನಂಬಿದ್ದೆ.ಆದರೆ ಮೋಡ ಕಲ್ಲಿನ ಹಾಗೆ ಗಟ್ಟಿ ಇರುವುದೇ ಇಲ್ಲವಲ್ಲ.ಇನ್ನೆಲ್ಲಿ ಡಿಕ್ಕಿಯ ಪ್ರಶ್ನೆ.ಸರಿ ಹಾಗಾದರೆ ಇನ್ನು ಹೇಗೆ?.ಮೋಡ ಅಂದರೆ ಅದು ತುಂಬಾ ಸಾಂದ್ರವಗಿರುವ ನೀರಿನ ಕಣಗಳು.ಆ ಸಾಂದ್ರತೆಯಲ್ಲಿ ಧನಾತ್ಮಕ ಅಣುಗಳು ಮೋಡದ ಮೆಲ್ಪದರದಲ್ಲೂ ಹಾಗೆ ಋಣಾತ್ಮಕ ಅಣುಗಳು (protons and electrons respectively) ಶೇಖರವಾಗುತ್ತದೆ.ಮೇಲೆ ಹಾಗುಗುತ್ತಿದ್ದ ಹಾಗೇ ಇತ್ತ ಭೂಮಿಯ ಮೇಲ್ಪದರಲ್ಲಿರುವ ಎಲ್ಲಾ ಧನಾತ್ಮಕ ಅಣುಗಳು ಒಂದೆಡೆ ಕೂಡಿಕೊಳ್ಳುತ್ತವೆ.(ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತಗೊಳೋದು ಪ್ರಕೃತಿಯ ಅಂತ್ಯಂತ ಸಹಜಾತಿಸಹಜ ಗುಣ).ಯಾವಾಗ ಧನಾತ್ಮಕ ಅಣುಗಳ ಸಾಂದ್ರತೆ ಮತ್ತು ಋಣಾತ್ಮಕ ಅಣುಗಳ ಆಕರ್ಷಣೆ ಭೂಮಿಯ ಗುರುತ್ವಾಕರ್ಷಣ ಬಲವನ್ನ ಮೀರುತ್ತದೋ ಆಗ ಒಂದು ಸುಲಭವೆನ್ನಿಸುವ ವಾಹಕದ ಮೂಲಕ ವಿದ್ಯುತ್ನ ರೂಪದಲ್ಲಿ ಆಕಾಶದೆಡೆಗೆ ಹರಿಯುತ್ತದೆ.(ಆಕಾಶದಿಂದ ಭೂಮಿಗೆ ಸಿಡಿಲು ಹೊಡೆಯುವುದಿಲ್ಲ).ಅದೇ ಸಿಡಿಲು.THUNDER

ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತವಾದಗೆಲ್ಲಾ thunderstorm ಗಳು ಇರೋದೆ ಅಲ್ವ

Sunday, August 5, 2012

ಮೊಟ್ಟೆಯಂತೆ ನಾವು

ಈ ಮೊಟ್ಟೆ ಇದಿಯಲ್ಲ.ಅದರ ಹೊರಕವಚ ಸುಣ್ಣದಿಂದ ಮಾಡಿದ್ದು. ಸುಣ್ಣ ಅಂದ್ರೆ ನಾವೆಲ್ಲ ಏನ್ ಅನ್ಕೊತಿವಿ?? ಗೋಡೆಗೆ ಹೊಡೆಯೋ ಸುಣ್ಣ ಅಥವಾ ಅದೇ ತರದ್ದು ಇನ್ನೆಷ್ಟು ಗಟ್ಟಿ ಇದ್ದೀತು ಅಂತ ಆಲ್ವಾ?
ಅದನ್ನ ನಾವು ಓಡಿಬೇಕಾದ್ರೆ ಅಡ್ಡ ಹಿಡ್ಕೊಂಡು ಓಡಿತಿವಿ.next ಟೈಮ್ ಅದನ್ನ ಉದ್ದ ಹಿಡ್ಕೊಂಡು ಮೊಟ್ಟೆಯ exact ನೆತ್ತಿಯ ಮೇಲೆ ಹೊಡೆದು ನೋಡಿ.ಮನುಷ್ಯನಿಗೇನು., ಆನೆಗೂ ಅದನ್ನ ಒಡೆಯಕ್ಕೆ ಆಗಲ್ವಂತೆ.

ಅಣ್ಣ ಹಜಾರೆ ಕುತ್ಕೊಂಡು ಜಪ್ಪಿದರೂ ಅಲ್ಲಾಡದ ನಮ್ಮ ಕೇಂದ್ರ ಸರ್ಕಾರದ ತಲೆ ಮುಂದೆ ಇದೆಲ್ಲ ಏನು ಅಲ್ವ ?? ಇರಲಿ.

ನಾವು ನಮ್ಮ ಜೀವನದ ಒಂದಲ್ಲ ಒಂದು ಭಾಗದಲ್ಲಿ , ನಂಗೆ ಅಷ್ಟೊಂದು ಸಾಮರ್ಥ್ಯ ಇಲ್ಲ ಅಂತ ಕೈ ಚೆಲ್ಲಿ ಕುತ್ಕೊಬಿಡ್ತೀವಿ ಅಲ್ವ. ನಾನು  ಅಷ್ಟು ದೊಡ್ಡ ಕಂಪನಿಯ ಸಂದರ್ಶನ ಎದುರಿಸಲಾರೆ ಅಂತಾನೋ , ಇಲ್ಲ ಆ ಪ್ರೇಮ ವೈಫಲ್ಯದಿಂದ ಹೊರಬರಲಾರೆ ಅಂತಾನೋ , ಒಟ್ಟಾರೆ ನಮ್ಮ ಆತ್ಮ ವಿಶ್ವಾಸದ ಪಿಲ್ಲರ್ಗಳು ಅಲ್ಲಾಡಿಬಿಟ್ಟಿರುತ್ತವೆ.ನಾವು ಕೂಡ ಮೊಟ್ಟೆಯ ಹೊರಕವಚದಂತೆ. ಸರಿಯಾದ ತರದಲ್ಲಿ ಸಮಸ್ಯೆಗಳನ್ನ ಎದುರಿಸಿದರೆ , ಎದ್ದು ನಿಂತರೆ ಆ ಎಲ್ಲ ಸೋಲಿಂದ ಹೊರಬರಬಹುದು.ಮಲಗಿದರೆ ಜಗತ್ತು ನಮ್ಮನ್ನ ಅಮ್ಲೆಟ್ ಮಾಡಿ ಬಿಡುತ್ತದೆ. ನಿಮ್ಮ ತಾಕತ್ತಿನ ಪರಿಚಯ ನಿಮಗಿರಲಿ.


ವಿಷಕನ್ಯೆ

ವಿಷಕನ್ಯೆ ಅಂತ ಬರತ್ತಲ ಭಾರತದ ಪುರಾಣ ಪುಣ್ಯ ಕಥೆಗಳಲ್ಲಿ .ಆ ವಿಷಕನ್ಯೆ ನೋಡೋದಿಕ್ಕೆ ಅದ್ಭುತವಾಗಿರ್ತಿದ್ಳಂತೆ ಅಥವಾ ಅದ್ಭುತವಗಿರೋರನ್ನೇ ವಿಷಕನ್ಯೆ ಮಾಡ್ತಿದ್ರು.ಏನು ಅಂತಂದ್ರೆ ರಾಜ ಮಹಾರಾಜರು ತಮ್ಮ ಎದುರಾಳಿಗಳನ್ನ ಕೊಲ್ಲೋಕೆ ಇವರನ್ನ ಕಳಿಸ್ತಿದ್ರು.ಇವರ ಜೊತೆಗೆ ಏನಾದರೂ ವಿರೋಧಿ ದೇಶದ ರಾಜ ಮಲಗಿದ ಅಂತಂದ್ರೆ ಆತ ಕತೆ ಮುಗಿಯಿತು.ಪ್ರಣಯದಾಟ ಮುಗಿಯುವ ಮುಂಚೆಯೇ ಈತನ ಇಹಲೋಕದಾಟ ಕೊನೆಗೊಂಡಿರುತ್ತಿತ್ತು.

ಸರಿ ಇವರು ವಿಷಕನ್ಯೆ ಹೇಗಾಗ್ತಿದ್ರು ಹಾಗಾದ್ರೆ. ಒಂದು ಸುಂದರವಾದ ಹೆಣ್ಣು ಹಸುಗೂಸನ್ನ ರಾಜರು ದತ್ತು ತೆಗೆದುಕೊಂಡು ಅವರಿಗೆ ನಿಯಮಿತ ಪ್ರಮಾಣದ ಪಾದಸರಸವನ್ನ ದೇಹಕ್ಕೆ ಕೊಡ್ತಿದ್ರಂತೆ(ಯಾವ ತರ ಅಂತ ಗೊತ್ತಿಲ್ಲ)( taken on recommendation of medical practitioner).ಅವರ ದೇಹ ಹಾಗಾಗಿ ವಿಷಪೂರಿತವಾಗುತ್ತಿತ್ತು.

ಕೊಲ್ಲೋಕೆ ಮನುಷ್ಯ ಎಂಥೆಂಥಾ ವಿಧಾನಗಳನ್ನ ಹುಡುಕ್ತಿದ್ದ ನೋಡಿ

Friday, August 3, 2012

ವೈದ್ಯೋ: ನಾರಾಯಣೋ ಹರಿ:

ಸಿಡುಬು ಗೊತ್ತಿರಬಹುದಲ್ಲ.ಇವಾಗೇನೂ ಔಷದಿ ಇದೆ ಅದಕ್ಕೆ ಸರಿ.ಆದರೆ ಬಹಳ ಹಿಂದೆ ಅದಕ್ಕೆ ಈ ತರಹದ ಔಷದಿ ಇರಲಿಲ್ಲ.ಅಮ್ಮ ..,,ದೇವಿ ಅಂತೆಲ್ಲ ಹರಕೆ ಹೊತ್ಕೊಂಡೆ ಹರ ಹರ ಅಂದು ಬಿಡೋರು.ಆದರೆ ನಮ್ಮ ವೈದ್ಯಪದ್ದತಿ ನಿಜಕ್ಕೂ ಅದೊಕ್ಕೊಂದು ಔಷದಿ ಹುಡುಕಲು ಒದ್ದಾಡಿತ್ತು.ಎಲ್ಲೂ ಅದರ ಬಗ್ಗೆ ಹೇಳುವುದಿಲ್ಲ ನಮ್ಮ ಪೂರ್ವಗ್ರಹಪೀಡಿತ ಶಿಕ್ಷಣ ವ್ಯವಸ್ಥೆ ಅಷ್ಟೇ.

ಸಿಡುಬು ಬಂದಿರತ್ತಲ್ಲ ಆ ಮನುಷ್ಯನ ಮೇಲೆ ಎದ್ದಿರತ್ತಲ್ಲ ಕೀವು ತುಂಬಿದ ಗುಳ್ಳೆಗಳು.., ಅದರಿಂದ ಕೀವು ತೆಗೆದು ಅದನ್ನ ಒಣಗಿಸಿ ಪುಡಿ ಮಾಡಿ ಅದನ್ನ ವೈದ್ಯರು ಸಂರಕ್ಷಿಸಿ ಇಟ್ಟುಕೊಂಡು ಹೊಸದಾಗಿ ಸಿಡುಬು ಬಂದ ವ್ಯಕ್ತಿಗೆ ಮೂಗಿನ ಮೂಲಕ ಊದುತ್ತಿದ್ದರಂತೆ.ಅದು ಪರಿಣಾಮಕಾರಿಯೂ ಆಗಿತ್ತೆಂದು ಉಲ್ಲೇಖವಿದೆ.

ವೈದ್ಯೋ: ನಾರಾಯಣೋ ಹರಿ: ಅಂತ ಯಾಕಂತಾರೆ ಅಂತ ಇವಾಗ ಗೂತ್ತಾಗ್ತಿದೆ ಅಲ್ವ ???

ಪಾರ್ಲಿಮೆಂಟ್!!

ಸಿಂಹಗಳಿರತ್ತಲ್ವ ಅವಕ್ಕೆ ಇಂಗ್ಲಿಷ್ನಲ್ಲಿ lions ಅಂತಾರೆ ಗೊತ್ತಲ್ಲ.ಅದೇ ಸಿಂಹಗಳ ಗುಂಪಿಗೆ ಏನಂತಾರೆ ಗೊತ್ತ "pride" ಅಂತಾರೆ.(pride of lions)

ಅದೇ ರೀತಿ ಗೂಬೆಗಳಿಗೆ ಇಂಗ್ಲಿಷ್ನಲ್ಲಿ owl ಅಂತಾರೆ ಅಲ್ವ. ಈ group of owl ಗೆ ಏನಂತಾರೆ ಗೊತ್ತ ಇಂಗ್ಲಿಷ್ನಲ್ಲಿ?????
.
.
.
.
.
.
.
.
"parliment"
doubt ಇದ್ರೆ google ಮಾಡಿ ನೋಡಿ
ಬ್ರಿಟಿಷರು ಕೊಟ್ಟು ಹೋದ ಉಡುಗೊರೆಗಳಲ್ಲಿ ಇದೂ ಒಂದು.

Tuesday, July 3, 2012

ಅದು ಎದೆಯೊಳಗಿನ ದನಿ ..

ಎರಡೂ ತೋಳುಗಳಲ್ಲಿ ನನ್ನೆರೆಡು ಸೊಸೆಯಂದಿರನ್ನ ಎತ್ತಿಕೊಂಡು ನಗುತ್ತಿದ ಅಮ್ಮ , ಅದೊಂದೇ ಶಾಶ್ವತ ಎನ್ನುವ ಸಂದೇಶ ಕೊಡುತ್ತಿದ್ದಾಳ ??. ಆ ಭಾವಚಿತ್ರ ನೋಡಿದಾಗಲೆಲ್ಲ ಮೂಡುವ ಚಿತ್ರಭಾವಗಳ ಮೆರವಣಿಗೆ ಯಾಕೋ ಕುಶಿಯದ್ದಲ್ಲ ಅನಿಸುತ್ತಿದೆ.
"ಅಪೀ ಯಾವಾಗ ಮನೆಗ್ ಬತ್ಯ " ಎಂಬ ಸದ್ದು ನಿಂತು ಎರಡುವರ್ಷಗಳ ಮೇಲಾದುವಲ್ಲ??!!. ಸದ್ದೇ ಇಲ್ಲದೆ ಎದೆಗೂಡಿನೊಳಗೆ ಹೊಕ್ಕುನಿಂತಿದ್ದ ಯಮರಾಕ್ಷಸ , ಕಲ್ಪಿಸಿಕೊಂಡೆ ಇಲ್ಲದಿದ್ದ ಅಮ್ಮನಿರದ ಜಗತ್ತನ್ನ ನಲವತ್ತೈದೆ ದಿವಸದಲ್ಲಿ ಕೊಟ್ಟಿದ್ದಷ್ಟೇ ಉಡುಗೊರೆ.

"ಎಂಟ್ ಗಂಟೆಯಾತು ಏಳಾ ಶ್ರೀಪಾದೂ"  ಎಂದು ಅಂದೆಬ್ಬಿಸುತ್ತಿದ್ದ ಅಮ್ಮನ ದ್ವನಿ ಇವತ್ತಿನ ನಿದ್ದೆ ಬರದ ರಾತ್ರಿಗಳಲ್ಲಿ ಯಾಕೋ ಅನುರಣಿಸುತ್ತಿದೆ.ನಿಂಗೆ ಚನಾಗಿ ಸಂಬಳ ಬಪ್ಪಲೆ ಹಿಡಿದ ಮೇಲೆ ನಾನೊಂದ್ ಸರ್ತಿ ನಾರ್ತ್ ಇಂಡಿಯ ಟೂರ್ ಹೊಗಿಬರಲಾ ಅಂತ ಕೇಳಿದ್ದ ಅಮ್ಮನ  ಅಪೇಕ್ಷೆ , ಎಂದಿದಿಗೂ ಅಪೇಕ್ಷೆಯಾಗೆ ಉಳಿಸಿದ್ದು ಮತ್ತೆಂದಿಗೂ ಪೂರೈಸಲಾಗದ ಅಪ್ಪಿಯಾಗೆ ನಾನುಳಿದು ಬಿಟ್ಟದ್ದು. ಎಲ್ಲವೂ ಆ ನಗುವಿನಲ್ಲೇ ಲೀನ.

ಅಮ್ಮನ ಅತೀ ಪ್ರೀತಿಯ ಗಡ್ಬಡ್., ಇಷ್ಟಪಟ್ಟು ತಂದು ತಿನ್ನುತ್ತಿದ್ದ ಕಲ್ಲಂಗಡಿ ಹಣ್ಣು , ಅಮಾ ನೋಡು ನಿನ್ನ ಮಗನ ಸಂಬಳದಿಂದ ತಂದದ್ದೆಂದು ಎದುರಿಗೆ ಕುಳಿತು ತಿನ್ನಿಸಲಾರದೆ ಹೋಗದ್ದು ಇವತ್ತು ನಗು ನೋಡಿದೊಡನೆ ದಿಗ್ಗನೆದ್ದು ಕಾಡಿಸುತ್ತಿದೆ. ಎಲ್ಲರ ಮಕ್ಕಳನ್ನ ಬರಗಿ ಮುದ್ದಾಡುತ್ತಿದ್ದ ಪ್ರೀತಿಯ ಅಜ್ಜಿ ಸ್ವಂತ ಮಗಳ-ಮಗಳನ್ನ ಸಂತೃಪ್ತಿಯಾಗುವಷ್ಟು ಮುದ್ದಾಡಲಾಗದಷ್ಟು ಕಮ್ಮಿ ಸಮಯ ಕೊಟ್ಟ ದೇವರ ಮೇಲೆ ಜಗಳ ಕಾದುಬಿಡುವ ಮನಸು.

ನನ್ನೆಲ್ಲ ಪ್ರೀತಿ ಸಿಟ್ಟು ಸ್ವಾಮ್ಯಭಾವ ಎಲ್ಲವನ್ನೂ ಧರಿಸಬಲ್ಲ ಆಕೆ ಮತ್ತೆಂದೂ ಬರಲಾರಳು.ಬ್ರೇಕ್ ಅಪ್ಪೇ ಆಗದ ಆ ಲವ್ವು  ಮತ್ತೊಂದಿರಲಾರದು .  ಮತ್ತಾರೂ ಕರೆಯದ ಆ ದ್ವನಿ ಇನ್ದೇಕೂ ನಿರಂತರ
"ಅಪೀ "

Monday, July 2, 2012

., . ಮಳೆ -ಕಾಲ

ಅರ್ಧಂಬರ್ದ ಮಳೆ ಬಂದು ನಿಂತ ನಮ್ಮೊರಿನ ಬಸ್ ಸ್ಟ್ಯಾಂಡ್ ಇಳಿದು  ನೋಡಿದಕೂಡಲೇ ಹಸಿರೆಲ್ಲ ಮೈಯಲ್ಲಿ  ಎಂತದೋ ರೋಮಾಂಚನ.ಬೆಂಗಳೂರಿನ  ಮಣ್ಣಿಗೆ ಅದರ ವಾಸನೆಗೆ ಅಲ್ಲಿನ ಪಿರಿ ಪಿರಿ ಮಳೆಗೆ  ಇಲ್ಲದ ಎಂತದೋ ಅದೃಶ್ಯ ಸೆಳೆತ ಈ ಬೆಳಗಿನ ಮಳೆಗೆ.ಮಳೆಯ ಹನಿ ಎದೆಯೊಳಗೆ ಇಳಿದು ತೊಯ್ದಂತ ಭಾವ.ಹಸಿ ಹಸಿರು ಮರಗಳ ಮಧ್ಯ ಕೊನೆಯೇ ಇಲ್ಲದೆ ಚಳಿಗೆ ಹೊದೆದು ಮಲಗಿಬಿಟ್ಟಿರುವ ನೀಲಿ ನೀಲಿ ರೋಡು.

ಅಖಂಡ ಇಪ್ಪತ್ತು ವರ್ಷಗಳ ಕಾಲ ಇದೆ ಮಳೆಯ , ಇದೆ ಕೆಸರಿನ ತೊಯ್ದೂ ತೊಯ್ಯದ ಕೊಡೆಯ ಸೂಡಿನ ನಡುವೆಯೂ ನೆಡೆದು ಬದುಕ ಕಂಡಿದ್ದರೂ ಎಂದೂ ಆಗದ ಅನುಭವ ಖಾಲಿ ಕೇವಲ ೨ ವರ್ಷಗಳ ಬೆಂಗಳೂರಿನ ಬದುಕು ನಮ್ಮ ದೃಷ್ಟಿಕೋನದ ದಿಕ್ಕನ್ನೇ ಬದಲಿಸಿಬಿಡುವ ವಿಸ್ಮಯದ ಬಗ್ಗೆ ಸಣ್ಣ ನಗು

ಇಷ್ಟಿಷ್ಟು ದುಡ್ಡು ಕೊಟ್ಟು ಬದುಕ ಕಟ್ಟುವ ಬೆಂಗಳೂರಿನ ಬಗೆಗೆ ಅನಿವಾರ್ಯ ಮೆಚ್ಚಿಗೆ ಜೊತೆ ಜೊತೆಗೆ ., ಮೈ ಮನವ ತಂಪು ಮಾಡುವುದು ಕೇವಲ ಹುಡುಗಿಯರ  ಅರ್ಧ ಮುಕ್ಕಾಲು ಮಿಡಿಗಳಷ್ಟೇ ಎಂಬಷ್ಟರ ಮಟ್ಟಿಗೆ ಸಂವೇದನೆ ಹಳ್ಳ ಹತ್ತಿಸಿದ ಊರಿನ ಮೇಲೆ ತಾತ್ಸಾರ ಬೇರೆ.

ಮನೆ ಬಂತು. ಇನ್ನೊಂದಿಷ್ಟು  ನೆನಪಿನೊಂದಿಗೆ .ಚಂದನಳ ಶ್ರೀಪದಕಕ್ಕ ಬಂದಾ ಎಂಬ ಕೂಗಿನೊಂದಿಗೆ.


Monday, May 14, 2012

ಚಿಲ್ಲರೆ ಕವನಗಳು

ಕಳೆದುಹೊಗಲೊಮ್ಮೆ ನಾನು ಅವಳ ಕಣ್ಣ ಕಾಡಿಗೆ !!
ರಕ್ತ ಚಿಮ್ಮಲೆಂದು ಕುಳಿತ ಆ ಕಪೋಲವೆನ್ನ ದಂತಕೆ??

ಹುಬ್ಬಿಗುಬ್ಬ ಸೇರಿಸಿಟ್ಟು ಹಣಾಹಣಿಗೆ ಸಿದ್ದವೇ ??
ಚಳಿಗಾಲ ಬೆಚ್ಚಗೆಂದು ಸಮ್ಮತಿಸಲು ಪಂದ್ಯವೇ !!

ನಾಲಿಗೆಗಳ  ಯುದ್ದಕೆ ನಾಸಿಕವದು ಅಡ್ಡಿಯೇ??
ಅಧರ ಮಧುರ ಸ್ಪರ್ಶಪದರ  ಮುಂದಿನದಕೆ ಒಸಗೆಯೇ !!

ಮುರಿದ ಕುರುಳು ಅಡ್ಡ ಬರಲು ಕುತ್ತಿಗೆಗೆ ಶಿಕ್ಷೆಯೇ
ಕತ್ತೆತ್ತಿ ನೋಡಿದೊಡನೆ ಬಿತ್ತೆ ದಂತ ಮುದ್ರಿಕೆ ??

ಕಾಡಿನೊಳಗೆ ಹೋದ ಮುಗುದ ಹಣೆಯಚಂದ್ರನಳಿಸಿದ
ಕಾಮದೊಡಲ ಬುಟ್ಟಿಯಿಂದ ಪ್ರೇಮಚಂದ್ರ ಉದಿಸಿದ :)

Wednesday, May 2, 2012

ಎದೆಯ ಡೈರಿಯ ...........................೨

ಪೆನ್ನಿನ ಹೊಟ್ಟೆಯೊಳಗಿಂದ ರಕ್ತವನ್ನ ಬಸಿದು ಅಕ್ಷರಕ್ಕೆ ಬಲಿಕೊಡುವಾಗಲೇ ಅವನ ನೆನಪಾಗಬೇಕೆ.ಕಾಮವನ್ನ  ಪ್ರಜ್ಞೆ ಗೆದ್ದ ವಾಸ್ತವದ  ಬಸಿರನ್ನ ಒಪ್ಪಿಕೊಳ್ಳಲಾಗದೆ  ಹೋದನೆ.
"ರಂಗಮ್ಮಾ ., ಒಂದ್ ಟೀ" .
ಕೆಲಸದವರೂ ಎಲ್ ಹಾಳಾಗಿ ಹೋಗಿದಾರೋ.ತಲೆ ಸಿಡಿಯುತ್ತಿದೆ. ಬಾಂಬ್ ನಿರೋಧಕ ತಜ್ಞರನ್ನ ತಲೆ ಒಳಗೆ ಕಳಿಸಬೇಕು.ಜನುಮ ಜನಮಕ್ಕೂ ನೀನೆ ಬೇಕು ಎಂಬ ಆತ್ಮವಂಚನೆಯ ಮಾತನ್ನ ಆಡಲಾರದ್ದೆ  ಹೋಗಿದ್ದೆ ತಪ್ಪಾಗಿ ಹೋಯಿತೇ??.ಪ್ರೀತಿಯ ಪೋಷಾಕಿನಲ್ಲಿ ಅಹಂಕಾರಕ್ಕೊಂದಿಷ್ಟು ಆಹಾರವಾಗುವ, ಪತ್ನಿಶೇಷವೇ ಪ್ರೀತಿಯ ಸಂಕೇತವೆಂದುಕೊಳ್ಳುತ್ತ ಸಾಗುವ ಭಾವಹಾದರಕ್ಕೆ ಒಪ್ಪದ್ದು ನೈತಿಕತೆಯೇ.ಹಾಳು ಯೋಚನೆ.ಸಿಗರೇಟೆ ಉತ್ತಮ.ಬೇಕೆಂದಾಗ ದಕ್ಕುತ್ತದೆ.
ಆತ ಬಿಟ್ಟು ನಡೆದರೂ ಆತನ ನೆನಪುಗಳು ಅಂಟಿಕೊಂಡುಬಿಟ್ಟಿವೆ. ಸೀದು ಹೋದ ಸಿಹಿ ತಿಂಡಿಯ ಪಾತ್ರೆಯ ತಳದಂತೆ.
ಯಾವುದೂ ಅನಿವಾರ್ಯವಲ್ಲದಂತೆ ಬದುಕಿಬಿಡಬೇಕು.ಮನಸ್ಸಿನ ಲಗಾಮು ಹರಿದು ಹಾರುತ್ತಿದ್ದ ಕಾಮಕುದುರೆಗೆ ಜಾಕಿ ಅಷ್ಟೇ ಅವನು.ಇಷ್ಟೇಕೆ ತಲೆಬಿಸಿ ಅವನ ಬಗ್ಗೆ.ಬಟ್ಟೆ ತುಂಡುಗಳ  ಹಿಡಿದು ಹೊಲಿಗೆ ಯಂತ್ರದ ಮೇಲಿಟ್ಟು ತರರರ್ ಎಂದು ಹೊಲಿಗೆ ಹಾಕುವ ಪರಿಯೇ ಈ ಸಂಬಂಧ.ಅವನಿಗಿಷ್ಟವಿಲ್ಲವೆಂದು ಮಿನಿ ಹಾಕದ  ನಾನು , ನನಿಗಿಷ್ಟವಿಲ್ಲವೆಂದು ಮೀಸೆ ಬಿಡದ  ಅವನು. ಹಹ್,ವ್ಯಾಪಾರ.
ಟ್ರಿನ್ ಟ್ರಿನ್
"ಹಲೋ"
" ಹಾಯ್ , ನಾನು ನಿಮ್ಮ ಕೋ ಅರ್ಡಿನೆಟರ್"
"ಹಾ, ಹೇಳಿ"
"ಪ್ರಾಜೆಕ್ಟ್ ಬಗ್ಗೆ ಮಾತನಾಡಬೇಕಿತ್ತು., ನೀವಿವತ್ತು ಬಂದಿಲ್ಲವೆಂದು ಗೊತ್ತಾಯ್ತು"
"ಸರಿ ಮನೆಗೆ ಬನ್ನಿ , ಕಾಫಿ ಕುಡಿಯುತ್ತ ಮಾತನಾಡುವ"
"ಸರಿ, ಬೈ"  
ಬೀರು ಮುಂದೆ ನಿಂತು , ಇವನಿಗೆ ಲೈಟ್ ಬ್ಲೂ ಅಂದ್ರೆ ಇಷ್ಟವಲ್ಲವಾ ಅಂದುಕೊಂಡಳು.

Monday, April 30, 2012

ಎದೆಯ ಡೈರಿಗೆ ಪುಟಗಳುಂಟೆ

ಬದುಕನ್ನ  ಅಲ್ಲಿನ್ದಿಲ್ಲಿವರೆಗೂ ಮಗುಚಿ ಹಾಕುವುದು, ಖಾಲಿ ಒಂದು ತಿರುವು. ಹುಬ್ಬಿನದೋ ಸೊಂಟದ್ದೋ  ಅಥವಾ ಈ ದರಿದ್ರ ದಾರಿಯದ್ದೋ  ಆವುದೋ ಒಂದು ."ಎಲ್ಲಿಗ್ರೀ ಟಿಕೇಟು" , ಈ ಕಂಡಕ್ಟರನ  ಗೊಗ್ಗರು ದ್ವನಿಗೆ ಬಳ್ಳಾರಿ ಅದಿರು  ತುಮ್ಬಿಬಿಡಬೇಕು. "ಕೊಡಿ , ನಮ್ಮೂರಿಗೊಂದು". ನಮ್ಮೂರು ಯಾವುದೆಂದು ಈ ಪಾಪದ ಕಂಡಕ್ಟರಿಗೆ ಗೊತ್ತಿರಲು ನಾನಾವ ಗಿಡದ ತೊಪ್ಪಲು. " ಕೊಪ್ಪಲಿಗೆ ಕೊಡಿ".

ಓ ಅಲ್ಲಿ , ಕರಿ ಸೀರೆಯೊಂದಿಗೆ ನಿಂತಿರುವ ಹುಡುಗಿ ನನ್ನ ಪಕ್ಕದಲ್ಲಾದರೂ ಕೂರಬಹುದಿತ್ತು. ಈ ಮಳೆಯಲ್ಲದ ಮಳೆಯಲ್ಲಿ ಯಾವುದಾದರೂ ಮುರುವಿನಲ್ಲಿ  ಭುಜಕ್ಕೆ ಭುಜ ತಾಕಿ ನನ್ನ ಬದುಕೂ ಮಗುಚಿಕೊಳ್ಳುತ್ತಿತ್ತೇನೋ.ತತ್ ಭುಜದ ಮೇಲೆ ಕತ್ತು ಮುರಿದ ಕೋಳಿಯಂತೆ ಮಗುಚಿಕೊಳ್ಳುತ್ತಿರುವ ಈ ಮುದುಕನೋ ಆತನ ತಲೆಯೋ .,ಇಲ್ಲೂ ಅದೃಷ್ಟವಿಲ್ಲ.ಆಕೆ ಅಲ್ಲ್ಯಾರದ್ದೋ ಪಕ್ಕ ಕುಳಿತಾಯಿತು.ನೋಡು ಹುಡುಗನ ಪಕ್ಕ ಹೇಗೆ ಕೂರುತ್ತಾಳೆ .ಛೆ ಸಂಸ್ಕಾರವಿಲ್ಲ.ಆಕೆಯೂ ಹಾಗೆ ಅಲ್ಲವೇ ಭಿಡೆ ಇಲ್ಲದೆ ಒರಗಿಕೊಳ್ಳುತ್ತಿದ್ದಳು.ನನಗೂ ಮಹಾನ್ ಸುಬುಗನೆನ್ನಿಸಿಕೊಳ್ಳುವ ಚಟ.ಏನೂ ತಪ್ಪು ನೆಡಸದೆ ತಪ್ಪು ಮಾಡಿಬಿಟ್ಟೆ.ಆಆಆ , ಏನು ತಿರುವು .,ಕೊಂಚವೂ ನಿಧಾನಿಸದೇ ತಿರುಗಿಸುತ್ತಾನೆ.ಡ್ರೈವೆರ್ ತಲೆ ಕುಟ್ಟಿಬಿಡಬೇಕು.

ಅಲ್ಲ ,ಜೀವನದಲ್ಲಿ ಯಾವುದೂ ಅನಿವಾರ್ಯವಲ್ಲವಂತೆ, ಹಾಗೆಲ್ಲ ಬದುಕಲು ಸಾಧ್ಯವೇ.ನನ್ನ ಹತ್ತಿರ ತಿಂಡಿ ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂದಾಗ ಇಡೀ ಮನೆಗೆ ಮನೆ ಸೂರು ಹಾರುವಂತೆ ನಕ್ಕಿದ್ದಳಲ್ಲ.ಅವಾಗಲೂ ಸಿಗರೇಟಿನ ವಾಸನೆ,ತತ್.ನನ್ನ ಬಿಡುತ್ತಿಯ , ಅದು  ಹಾಗಿರಲಿ ಸಿಗರೇಟೆ ಬಿಡಲಾಗದು ನಿನ ಕೈಲಿ ಮಂಕು.ಸಿಗರೆಟಿದ್ದದ್ದು ಕೈಯಲ್ಲಿ , ಹೊಗೆ ಬಂದದ್ದು ಅವಳ ಕಣ್ಣಲ್ಲಿ.ಅವತ್ತು ಎದೆ ಮೇಲೆ ಸಿಗರೆಟಿಟ್ಟು ಆರಿಸಿದವಳು , ಮತ್ತೆ ಮುಟ್ಟಿಲ್ಲ.ಅಸ್ಪರ್ಷ್ಯ.ಪ್ಯಾಕ್ಕಲ್ಲಿ ಸಿಗರೇಟು ಉಂಟೆ, ಮುಂದಿನ ಸ್ಟಾಪ್ನಲ್ಲಾದರೂ ನೆನಪು ಮಾಡಿ ತೆಗೆದುಕೊಳ್ಳಬೇಕು."ಕೊಪ್ಪಲಿ ಕೊಪ್ಪಲಿ ಕೊಪ್ಪಲಿ" ಈ ಕ್ಲೀನರ್ ಗೆ ಕನ್ನಡ ಮಾಷ್ಟರು ಅರಿದ್ದಿರಬಹುದು.ಏನಾದರಾಗಲಿ ಬಲಗಾಲಿಟ್ಟು ಇಳಿದು ಬಿಡುವೆ.

ತಾರ್ಕಿಕವಾಗಿ , ಸುಟ್ಟು ಇಂಗ್ಲಿಷ್ ನಲ್ಲಿ ಆಕೆ ಹೇಳುವ ಹಾಗೆ , technically   ಮಾಡಿದ್ದು ಸರಿ ಅಂತೆ. ಅಲ ಈ ತರ್ಕಕ್ಕೂ  ಭಾವನೆಗೂ ಏನಾದರು ಲಿಂಕ್ ಉಂಟೆ.ತಾರ್ಕಿಕವಾಗಿ ಸರಿ ಎಂದು ಸಾಧಿಸಬಿಡಬಹುದಾಗಿದ್ದು ಭಾವನೆಗಳ ಲಂಗೋಟಿ ಬಿಚ್ಚಿ ನೆಡೆದುಬಿಡಬಹುದಲ್ಲವ.ಆಕೆಯ ಸಿಗರೆಟಿನಂತೆಯೇ ಆಕೆಯ ಯೋಚನೆಗಳು.ಸುಡುತ್ತವೆ.ಆರೋಗ್ಯಕ್ಕೆ ಹಾನಿಕರ.

ನಡೆದ ಹೆಜ್ಜೆ ಎಷ್ಟಾಗಿರಬಹುದು.ನನ್ನ ತಲೆ ನನಗೇ ಪ್ರಶ್ನೆ ಕೇಳುವಂತಾಯಿತು,ಆಕೆಯ ಜೊತೆಗೋ ಇಲ್ಲ ಈ ಹಾಳು ಬಸ್ ಇಳಿದ ನಂತರವೋ??.ಮೆದುಳಲ್ಲೂ ಎರಡು  ಭಾಗವಂತೆ!!.ಮನೆ ಹಂಚು ಒಡೆದು ಸೋರುತ್ತಿದೆ ಸರಿ ಮಾಡಿಬಿಡಬೇಕು.
ಅರೆ ಆ ಕರಿ ಸೀರೆ ಇಲ್ಲೇ ಇಳಿಯಿತೇ.ಗಮನಿಸಲೇ ಇಲ್ಲ.ಸ್ವಲ್ಪ ಹೆಜ್ಜೆ ಕಮ್ಮಿ ಮಾಡಬೇಕು.ಏನಾದರಾಗಲಿ ಕೇಳಿಬಿಡಬೇಕು.ಬ್ಲೌಸಿಗೆ ಪಿನ್ನು ಚುಚ್ಚಿದೆಯೋ  ಇಲ್ಲವೋ ಅಂತ. ಹಾಕಿದ ಕವಳದ  ಸಿಕ್ಕಿ ಕೊಂಡುಬಿಟ್ಟಿದೆ.ಬಹುಶಃ ಜೊತೆಗೆ ಕರೀ ಸೀರೆ ಕೂಡ.













Friday, April 27, 2012

ಉಪಾಂಶು

ಮುಚ್ಚಿಟ್ಟದ್ದು ಯಾಕೆಂದು ಗೆಳತಿ ಕೇಳಿದಾಗ
ನೆನಪಾಯಿತು ಅಡೆಹಾಕಿದ್ದು
ಹಣ್ಣಾಗಿದೆಯೆಂದು!!

ಹಣ್ಣು  ಅಷ್ಟೆಲ್ಲ ಸಿಹಿಹೇಗಾಯಿತು?!
ಗೋಣಿಚೀಲದಡಿಯಲ್ಲಿ ಅಡಗಿಸಿಟ್ಟು
ಮಾಗಿಸಿದ್ದಕ್ಕಿರಬೇಕು

ನನ್ನಮ್ಮನೂ ತುಂಬಾ ಸಿಹಿ ಸಿಹಿ
ಕನಸುಗಳ ಬಚ್ಚಿಟ್ಟು  ಕೊಂಡಿದ್ದಳೇ??

ಪೆದ್ದು ಮನಸು ಗೊತ್ತಾಗಲಾರದು
ಮಾಗಲು ಮಾವೇ ಬೇಕು ಬೇವಲ್ಲ!

Monday, April 9, 2012

ನನ್ನೊಡತಿ ನೀನು

ಮೃಗವಾಗಿ ಖಗವಾಗಿ , ಬಂದು ಎರಗುವ ಸುನಾಮಿಯಾಗಿ ,
ಭೋರ್ಗರೆಯುವ ಕಡಲಾಗಿ ನಿನ್ನೊಡನೆ ಕಾದಾಡಿದರೂ
ಎನ್ನ ಧರಿಸುವ ಅವನಿ ನೀನು.

ಎನ್ನೊಡಲ ಸ್ಖಲಿತ ಭಾವಗಳ ,ಫಲಿತ ಹಣ್ಣುಗಳ
ರುಚಿ ನೋಡುವ ಹೆಣ್ಣು ನೀನು :)

ಬರಡಾಗಿ , ಮಳೆಯಾಗಿ ನಾ ಭಾವದತಿವೃಷ್ಟಿ.
ಉಬ್ಬರಿಸಿ ಅಬ್ಬರಿಸಿ ನಿನ್ನದೆಯ ಗುದ್ದಿದರು
ಎನ್ನ ಧರಿಸುವ ಸಾಗರಿಕೆ ನೀನು

ನನ್ನದಿಯ ನಡುಮನೆಯ ತಡಿಮಡಕೆಯೊಡೆದು
ಕದ್ದು ಹೀರುವ ಅಳಿನಿ ನೀನು :)

ನನ್ನೊಡತಿ ನೀನು :)

Sunday, January 29, 2012

ಜೀವನದಿ!

ಗಂಗೆಯಾಗಿ ಬಿಡಬೇಕು !!

ನಿನ್ನೆದೆಯ  ಗೋಪುರದಿ ನನ್ನೆಲ್ಲ ಪ್ರಜ್ಞೆಗಳ ಕಳಚಿ
ತೊನೆದು ತೊಳೆದು ಭೋರ್ಗರೆಯುವ ಅಲಕನಂದೆಯಂತೆ.

ನಿರ್ಜೀವ ದೇಹ ದಾಹವಿಲ್ಲದೆ ಮುಳು ಮುಳುಮುಳುಗಿ ಏಳುವಾಗ
ಸಂಬಂಧಗಳ ನೆನಪು ಭಸ್ಮದ ಹೆಸರು ಹೊತ್ತು ತೊಳೆದಳಿದು ಹೋಗುವಂತೆ
ನಾ  ನಿನ್ನರಿವ ಅಸ್ಮಿತೆ ಕುಡಿದು ಗಮಿಸುವ ಮನ್ದಾಕಿನಿಯಾಗಿಬಿಡಬೇಕು.

ದಿಕ್ಕೆಡಿಸಿ ಸೇರುವ ಆ ಭಾವ ಗಂಡಕಿ , ಬಿಕ್ಕಳಿಸಿ ಬಿಕ್ಕಳಿಸಿ ನಾ ಲೋಚನವಾರಿ
ವಯ್ಯಾರಿಯಾಗಿ, ನಾ ಭಾಗಿಯಾಗಿ ,ಕುಡಿದು ತುಪ್ಪಿದ ಜಾನುವಿಗೆ ನಾನೆಂಜಲಾಗಿ
ನನ್ನರುವಿನೊಳಗೆ ನೀ ಸಹನವಾಗಿ  ,ಎಲ್ಲ ಮರೆತು ಹರಿಯುವ ಜಾಹ್ನವಿಯಂತೆ

ಪಾಪ  ತೊಳೆಯುವ, ಪಾಪಿಯಾಗದ , ಶಂತನುವರಿಯದ ಗಂಗೆಯಂತೆ
ಎಲ್ಲ ಕೊಳಕಿನೊಳಗಿಂದ ಎದ್ದು ಬರುವ ದೇವನದಿಯಾಗಬೇಕು.







Thursday, December 29, 2011

ಸರಸೀ - ೨

ಹೂಡುತ್ತಿದ್ದಾರಂತೆ ಕೋಟಿ ರುಪಾಯಿ ಖರೀದಿಸಲು ವಿದ್ಯುತ್ತು.
ಹುಚ್ಚು ಮಂತ್ರಿಗಳು,ಸುಮ್ಮನೆ ನನ್ನವಳ ನಗಿಸಿದ್ದರೆ ಸಾಕಿತ್ತು.

-----------------------------------------------------
ನಿನ್ನ ಕನಸಿನೊಳಗಣ ಪ್ರೇಮದರಮನೆಯ ಕಟ್ಟಲೆನ್ನ ನಲ್ಲೆ .,
ಮೊದಲು ನಿದ್ರಿಸಲು ಕೊಡಿ , ಎಂದಳಾಕೆ ನಿಮ್ಮ ನಾ ಬಲ್ಲೆ :)

-----------------------------------------------------
ಹಾಸಿಗೆಯೇಕೂ ಸರಿಯಿಲ್ಲ ,
ನಗುತಳಂದಳು ಗೆಳತಿ
ಸುತ್ತು ಯಾತಕೋ ನಲ್ಲ :)
-----------------------------------------------------

ಕನಸಿಲ್ಲದೆ ಮಲಗಿದ್ದುಂಟು
ಮನಸಿಲ್ಲದೇ ಮಲಗಿದ್ದುಂಟು
ನಿನ್ನ ಬಾಹುಬಂಧದ
ನೆನಪಿಲ್ಲದೆ ಮಲಗಿದ್ದಿಲ್ಲ ಪ್ರಣಯಸಖಿ- ಶುಭರಾತ್ರಿ

 

Tuesday, December 13, 2011

ಸರಸೀ ....

ಪಾತ್ರವೆನೆಗೆ ಇಷ್ಟವೆಂದೆ
ಮುದ್ದು ಕೃಷ್ಣ ಬೆಣ್ಣೆ ಕಳ್ಳ
ಅವಳಿಗ್ಯಾಕೆ ಬೇಕಂತೆ
ಬೆಣ್ಣೆಯ ಪಾತ್ರ-ಅರ್ಥವೇ ಆಗಲಿಲ್ಲ

------------------------------
ನೂಪುರದೊಡನೆ ಆಡಬಲ್ಲೆ ನಾ ರಾತ್ರಿ ಇಡೀ.,
ನಾಚುತವಳು ಅಂದಳು ,ನಡುವಿಗುಡಲಾರೆ ಗೆಜ್ಜೆಯ -ಬಿಡಿ
-ಮತ್ತೆ ಅರ್ಥವಾಗಲಿಲ್ಲ
------------------------------

ಮಧುತುಪ್ಪ ಇಷ್ಟವೆಂದೆ
ಮಧುವಂತಿ ತುಟಿ ವರೆಸಿಕೊಂಡಳು
-ಅರ್ಥವಾಗುತ್ತಿಲ್ಲ

------------------------------
ಅಬ್ಬಿಗುಳಿಗೆ ಕಿಚ್ಚನಿಟ್ಟು
ಹಬೆಗುಡುವ ನೀರನಿಡಿದು
ಚಳಿ ಎಂದು ಕೂಗುತಾಳೆ ...
-ಬಹುಶಃ ಹುಷಾರಿಲ್ಲ

------------------------------
ಊಟಿ ಸೇಬು ಊಟಿಯಲ್ಲಷ್ಟೇ ಏನೋ ಜಾಣೇ.,
ಅಂದಿದ್ದಕ್ಕವಳ ಕೆನ್ನೆ ಕೆಂಪಾಗಿದ್ದೇಕೆ ನಾ ಕಾಣೆ..

-ತಿಂದದ್ದು ನೆನಪಾಗಿರಬೇಕು
 

Sunday, October 30, 2011

ಹಿಂಗೆಲ್ಲಾ ಅನ್ಸತ್ತೆ :)

ಹೀಗೆ ಪ್ರೇಮದ ನೆನಹುಗಳ ಮೇಲೆ ಕುಳಿತು  ,ಇತಿಹಾಸದ ಪುಟಗಳನ್ನ ಕವಚುತ್ತಾ ಹೋದರೆ ಡಣ್ಣನೆ ಮುಖಕ್ಕೆ ರಾಚುವ ಸತ್ಯ., ಪ್ರೀತಿಗೆ , ಪ್ರೇಮಕ್ಕೆ ಹುಡುಗಿಯರ ಕಾಣಿಕೆ ಸೊನ್ನೆ.ಯೋಚನೆ ಮಾಡಿ ., ಪ್ರೇಮ ವೈಫಲ್ಯ ಅಂದ್ರೆ ತಕ್ಷಣ  ದೇವದಾಸ ನೆನಪಾಗ್ತಾನೆ.,ಪಾರು ಮದ್ವೆ ಆಗಿ settle  ಅಗಿಬಿಡ್ತಾಳೆ.ಹಾಗಾದರೆ ಈ ಹುಡ್ಗೀರಿಗೆ ಪ್ರೇಮ ಲವ್ವು ಇವೆಲ್ಲ ಸುಮ್ಮನೆ ಆಟದ ಸಮಾನುಗಳೇ??.ಒರಿಜಿನಲ್  ಲವ್ವು ಹೇಳದು ಇಲ್ಲವೇ ಇಲ್ಯೇ??.
ಯಾವ್ದಾರು ಹುಡುಗಿ ಜೊತೆ ಜಗಳ ಮಾಡಿ ಪಲ್ಟಿ ಹೊಡೆಸ್ಬೇಕು ಅಂದ್ರೆ ಹಿಂಗೆ ಮಾತಾಡಿ.ಆಮೇಲೆ ಆ ಹುಡುಗಿ ಸಮಾಧಾನ ಮಾಡಕ್ಕೆ ನಿಮಗೆ ಏಳು ಹನ್ನೊಂದು ಆದರೆ ನನಿಗ್ ಗೊತ್ತಿಲ್ಲ ಅಷ್ಟೇ.

basically , ಪ್ರೀತಿಸಿದಷ್ಟು ಕಾಲ , ಪ್ರೀತಿ ಸತ್ಯವೇ ಆಗಿರುತ್ತದೆ.ಸ್ವಲ್ಪ ಕನ್ಫ್ಯೂಸ್ ಅಲ ?? ಹೇಳ್ತೀನಿ ತಾಳಿ.
ಮೂಲತಃ ಅದು  ,  ಅಹಂಕಾರವನ್ನ ಪೋಷಿಸುವ ಮತ್ತು ಪೋಷಿಸಿಕೊಳ್ಳುವ ಭಾವ.ಒಂದು ಹುಡುಗಿ ., ಕೈ ಕೊಟ್ಟು ಹೋದಳು ಎಂದಾಗ ., ಅಥವಾ ತಿರಸ್ಕರಿಸಿದಳು ಅದು ಹುಡುಗನ ಅಹಂಕಾರಕ್ಕೆ ಬೀಳುವ ಪೆಟ್ಟಾಗಿರುತ್ತದೆ.ಆ ಪೆಟ್ಟನ್ನ ತುಂಬಿಕೊಳ್ಳುವ ಸಲುವಾಗಿ , ಹುಡುಗ ಅನುಕಂಪದ ಮೊರೆ ಹೋಗುತ್ತಾನೆ.ಬಹಿರಂಗವಾಗಿ ತೋರಗೊಡುತ್ತಾನೆ.ಕುಡಿತ ಧೂಮಪಾನ ಇವುಗಳ ಮೂಲಕ ಸಮಾಜದ ಗಮನ ಬೇಡುತ್ತಾನೆ.ಕೈಗೆ ಸಿಗದ ಹುಡುಗಿಯನ್ನ ಬಯ್ಯುವ ಮೂಲಕ ತನ್ನ ಅಹಮಿಕೆಗೆ ಆದ ನೋವನ್ನು ತುಂಬಿಕೊಳ್ಳುತ್ತಾನೆ.ಬಹುಶಃ ಪುರುಷ ಪ್ರಧಾನ ವ್ಯವಸ್ತೆ ಆಗಿದ್ದರಿಂದ ಆತನ ಆ ಎಲ್ಲ ಡ್ರಾಮಾಗಳಿಗೆ ಬೆಲೆ ಸಿಗುತ್ತದೆ.ಅಹುದಹುದೆನ್ನಲು ಒಂದಿಷ್ಟು ಜನ ಕೂಡ.public  affection of attraction ನಮ್ಮ ಮೂಲ ಗುಣಗಳಲ್ಲಿ ಒಂದು ಅಷ್ಟಕ್ಕೂ.

ಹುಡುಗಿಯರಿಗೆ ಹಾಗಾದ್ರೆ ., ಲವ್ವಿನ ಫೀಲಿಂಗ್ ಬರೋದೆ ಇಲ್ವೆ.ಅಥವಾ ಅವರು ಬೇಜಾರೆ ಆಗೋಲ್ವೇ?? ಯಾಕೆ ಇತಿಹಾಸದ ಪುಟಗಳಲ್ಲಿ ,ವರ್ತಮಾನದ ವಾರ್ತೆಗಳಲ್ಲಿ ., ಲವ್ ಫೈಲ್ಯುರ್ ಆಗಿ ಮಕಾಡೆ ಮಲಗಿದ ಹುಡುಗಿಯರು ಸಿಗದೇ ಇಲ್ಲ.ಅಥವಾ ಭಾಳ ಕಮ್ಮಿ??
ಅದಕ್ಕೆ ಕಾರಣಗಳು ಹಲವಾರು., ಹುಡುಗಿಗೆ ಮನೆತನದ ಘನತೆ- ಗೌರವಗಳು ಪ್ರೇಮಕ್ಕಿಂತ ಯಾವತ್ತೂ ಹೆಚ್ಚು ಹೇಳುವ ಮನೋಭಾವವನ್ನ ತುಂಬಲಾಗಿರುತ್ತದೆ.ಮಾನಸಿಕವಾಗಿ ಗಂಡಿನಷ್ಟು ಸಮರ್ಥಳಲ್ಲದ ಕಾರಣ ., ಆ ತರದ ರಿವಾಜುಗಳನ್ನ ಮೀರಿ ನಡೆಯಲು ಬಹಳಷ್ಟು ಕೇಸ್ ಗಳಲ್ಲಿ ಸೋಲುತ್ತಾಳೆ.
ಮತ್ತೆ., ಇಲ್ಲ ಆತನ ಮರೆಯುವುದು ಸಾಧ್ಯವೇ ಇಲ್ಲ ., ನಾನು ಹೀಗೆ ಇದ್ದುಬಿಡುತ್ತೇನೆ ಎಂಬ ನಿರ್ಧಾರ ಮಾಡಿದರೂ ತನ್ನ ಮನೆ ಇದ್ದದ್ದು ನಿಧಾನವಾಗಿ "ಅತ್ತಿಗೆಯ" ಮನೆಯಾಗುವುದು., ಓರಗೆಯ ಹುಡುಗಿಯರ ,ಗೆಳತಿಯರ ಮಕ್ಕಳ ಚಿನ್ನಾಟದ ಮುಂದೆ ., ನಿರ್ಧಾರಗಳ ತಾಯಿಬೇರು ಜೀವ ಕಳೆದುಕೊಳ್ಳುತ್ತದೆ.ಅದಕ್ಕೆ ., ಲವ್ವು ಮಾಡಿದಷ್ಟು ಕಾಲ ಮಾತ್ರ ಸತ್ಯ., ಆಮೇಲೆ ಬರೀ ನೆನಪಷ್ಟೇ.

ನಂಗೆ ಅನ್ಸಿದ್ದೆಲ್ಲ ಸರೀ ಇರ್ಬೇಕು ಅಂತೆ ರೂಲ್ಸ್ ಏನಿಲ್ಲ ಬಿಡಿ:)


Monday, August 29, 2011

ತಲೆಮಾರು-೨

ವಿಷಣ್ಣ ಭಾವದ ಶೃಂಗದಲ್ಲಿ ಕುಳಿತು ಶಶಾಂಕ ಅಳುವುದೊಂದು ಬಾಕಿ ಇತ್ತು.ಅಷ್ಟಕ್ಕೂ ತಾನು ಮಾಡಿದ್ದೂ ಹೇಗೆ ಮತ್ತು ಏನಕ್ಕೆ ತಪ್ಪು ಅಂತ ಅರ್ಥವೇ ಆಗದೆ ತೊಳಲಾಡಿದ್ದ.ಕಾಲೇಜ್ ನಲ್ಲಿ ಹುಡುಗಿಯರೂ ಕುಡೀತಾರೆ., ಇನ್ನು ನಾನು ಕುಡಿದಿಲ್ಲ ಅಂದ್ರೆ .,ಪಾಪು ಅಂತ ಜೀವಮಾನವಿಡಿ ಅಣಕಿಸುತ್ತಾರೆ. ಅದಕ್ಕಿಂತ ದೊಡ್ಡ ಅವಮರ್ಯಾದೆ ಮತ್ತೊಂದಿಲ್ಲ .,ಇವತ್ತಿನ ಕಾಲಕ್ಕೆ ಅಪ್ಪ ಇನ್ನು ಅಪ್ಡೇಟ್ ಆಗೇ ಇಲ್ಲ ಎಂದು ಬೇಜಾರಿಸುತ್ತಾ.ಗೆಳೆಯ ಸಂಜಯನಿಗೆ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಲು ಹೊರಟ.
                                                   ------------------------------
  ಸಂಜೆ ಅಡ್ಡಾದಲ್ಲಿ ., ಶಶಾಂಕ ತಾ ಸಿಕ್ಕಿಬಿದ್ದ ಘಟನೆ ಹೇಳಿದರೆ ಗೆಳೆಯರೆಲ್ಲ ಬಿದ್ದು ಬಿದ್ದು ನಗುತ್ತಿದ್ದರು.ಸಣ್ಣ ಮುಖ ಮಾಡಿ ಕುಳಿತ ಶಶಾಂಕನನ್ನ ನೋಡಲಾಗದೆ .,ಸಂಧ್ಯಾ ಎಲ್ಲರಿಗೂ ಕಣ್ಸನ್ನೆ ಮಾಡಿ ಸುಮ್ಮನಾಗಿಸಿದಳು. ಹೋಗಿ ಶಶಾಂಕನನ್ನ ಸಮಾಧಾನ ಮಾಡತೊಡಗಿದಳು.,
"ಶಶ್., ಅವೆಲ್ಲ ಕಾಮನ್ ಕಣೋ .,ಅವ್ರಿಗೆ ಎಲ್ಲಾರು ತಾವ್ ಹೇಳ್ದಂಗೆ ಕೇಳಬೇಕು ಅಂತ ಆಸೆ .,ನಮ್ಮಪ್ಪಾನೂ ಬೈತಾರೆ ., ಜೀನ್ಸ್ ಯಾಕೆ ಅಷ್ಟು  ಕೆಳಗೆ ಹಾಕ್ಕೊತೀಯ ., ಅಷ್ಟು ಟೈಟ್ ಶರ್ಟ್ ಏನಕ್ಕೆ  ಅಂತೆಲ್ಲ .,ತಲೆ ಮೇಲೆ ಸೆರಗು ಹಾಕ್ಕೊಂಡು ಕೂತ್ಕೊಳೋಕೆ ಇದೇನು ಹತ್ತನೇ ಶತಮಾನನ.ಹಾಗ್ ಇರ್ಬೇಕು ಅನ್ತಿದ್ದಿದ್ರೆ ಹತ್ನೆ ಕ್ಲಾಸ್ಗೆ ಬಿಡಿಸಬೇಕಿತ್ತು. ಇಂಟರ್ನ್ಯಾಷನಲ್ ಸ್ಚೂಳು ಕಾಲೇಜು ಸೇರಿದ ಮೇಲೆ ಅದೇ ಸ್ಟ್ಯಾಂಡರ್ಡ್ ನ ಮೇನ್ಟೇನ್ ಮಾಡಬೇಕು.ಅವರಿಗೆಲ್ಲ ಅದೆಲ್ಲಿ ಅರ್ತ ಆಗತ್ತೆ ..ಅವರಿದ್ದಾಗ ಇರೋ ಕಾಲೇಜೆ ಇವಗಳು ಇರೋದು ಅನ್ಕೊಂಡ್ ಬಿಟ್ಟಿಯಾರೆ., ಓಲ್ಡ್  ಜನ್ಕ್ಸ್ "

ಸಂಜಯನೂ ದನಿಗೂಡಿಸಿದ
"ಹು ಮಗಾ.,ಅವರಿದ್ದಾಗ .,ಇರೋ values  ನ ಫಾಲ್ಲೋ ಮಾಡಬೇಕು ಅಂದ್ರೆ ಅವಾಗಿನ ಲೈಫ್ ಸ್ಟೈಲ್ ಇವಾಗ್ಲೂ ಇರ್ಬೇಕು..ನಮಪ್ಪಂಗೆ ಅಥವಾ ನಿಮಪ್ಪಂಗೆ ಆಟ ಆಡಬೇಡ .,ಆದ ಮಾಡಬೇಡ ಈದ್ ಮಾಡಬೇಡ ಅಂತ ನಮ್ಮಜ್ಜ ನಿಮ್ಮಜ್ಜ ಕಂಡಿಶನ್ ಹಾಕಿದ್ರಾ?? ಇದನ್ನೇ ಓದು ., ಇಷ್ಟೇ ಮಾರ್ಕ್ಸ್ ತೆಗಿ ಇಲ್ಲ ಅಂದ್ರೆ ಕಾಲ್ ಮುರೀತೀನಿ ಅಂತ ಯಾವಾಗ್ಲಾರು ಹೇಳಿದ್ರ .,?? ದುಡ್ ಇಟ್ಕೊಂಡ್ರೆ.,ಒಳ್ಳೆ ಡ್ರೆಸ್ ಹಾಕ್ಕೊಂಡ್ರೆ ಮಾತ್ರ ಮರ್ಯಾದೆ ಸಿಗೋದ ಅವಾಗೆಲ್ಲ??
ಬಿಕ್ಷುಕರು ಬಂದ್ರೆ ಕಾರಿನ ಗ್ಲಾಸ್ ಇಳಿಸದೆ ಮುಖ ಸಿಂಡರಿಸ್ತಾರೆ ., ನಾವ್ ಅದೇ ಸ್ಟ್ಯಾಂಡರ್ಡ್ ಮಾಡ್ತೀವಿ ಅಂದ್ರೆ ಅವ್ರಿಗೆ ಉರಿ" ಅಂತ ಸ್ವಲ್ಪ ಲಾಜಿಕಲ್  ಸ್ವಲ್ಪ ಸಿಟ್ಟಿನ ವಾದ ಮುಂದಿಟ್ಟ.

"ಮಗಾ .,ಅಷ್ಟಕ್ಕೂ ದುಡ್ಡು ಮಾಡೋದ್ ಏನಕ್ಕೆ .,ಜನ ದುಡಿಯೋದ್  ಏನಕ್ಕೆ ., ಲೈಫ್ ಎಂಜಾಯ್ ಮಾಡೋಕೆ ತಾನೆ ??..ಎಷ್ಟ್ ದಿನ ಬದುಕ್ತಿಯೋ ಯಾರಿಗ್ ಗೊತ್ತು., ಈ ಬೆಂಗಳೂರಲ್ಲಿ ಸಾಯೋದಿಕ್ಕೆ ರೀಸನ್ನೇ ಬೇಡ.ನಾಳೆ ಬಗ್ಗೆ ಯೋಚನೆ ಮಾಡ್ತಾ ಮಾಡ್ತಾ ಇವತ್ತಿನ ಸಾಯ್ಸೋ ಮಂದಿ ಫೂಲಿಶ್ ಕಣೋ.live  today ., tommarrow is  too  late "  ಹರೀಶ ಕೂಡ ಒಂದಿಷ್ಟು ಪದ ಸೇರಿಸಿದ."ಆಚೆ ಕಿವಿಲ್ ಕೇಳಿ ಈಚೆ ಕಿವಿಲ್ ಬಿಡೋ ಮಗಾ" ಎಂದು ಮುಂದುವರೆಸಿದ.
ಮಬ್ಬುಗತ್ತಿಲನಲ್ಲಿ ಮುಂದಿನ ಯೋಚನೆ ಮಾಡೋಣ ಎಂಬ ನಿರ್ಧಾರದೊಂದಿಗೆ  ., ಮತ್ತೊಮ್ಮೆ ಸಿಕ್ಕಿಹಾಕಿಕೊಳ್ಳಬೇಡ ಎಂಬ ಎಚ್ಚರಿಕೆಯೊಂದಿಗೆ ಮೀಟಿಂಗ್ ., ಪ್ರತಿಷ್ಟಿತ ಬಾರ್ ಒಂದಕ್ಕೆ ಸ್ಥಳಾಂತರಗೊಂಡಿತು.                                                                                                           ---------------------------------                                                         ಹಳೆಯ ಗೆಳೆಯ ರಾಮಮೂರ್ತಿಯೊಂದಿಗೆ .,ಕೈಯಲ್ಲಿದ್ದ ಗ್ಲಾಸ್ ಒಳಗಿನ ನಿಧಾನ ವಿಷ ನೋಡುತ್ತಾ  ., "ಮಗನೂ ಕುಡಿಯುತ್ತಾನೆ ಮಾರಾಯ" ಎಂದೇಳಿದ ರಾಜೇಂದ್ರ.
ದೊಡ್ಡದೊಂದು ನಗೆಯ ನಕ್ಕು ಮೂರ್ತಿ ಹೇಳಿದ "ತಾವು ಕುಡಿಯುತ್ತಿರುವುದೇನೂ ಗೊಮೂತ್ರವೋ"
"ಹಾಗಲ್ಲಯ್ಯ., ನಾನು ದುಡೀತೇನೆ ., ಜೀವನ ಕಂಡಿದ್ದೇನೆ .,ಕಷ್ಟ ಸುಖಗಳು ಗೊತ್ತು., ಅವನಿಗಿನ್ನೂ ಮೀಸೆ ಸರಿಯಾಗಿ ಮೂಡಿಲ್ಲ ಗೊತ್ತಾ"
"ನಿನ್ನಪ್ಪ ನಿನ್ನ ವಯಸ್ಸಿಗೆ ಕುಡೀತಿದ್ರೆನೂ??., ಅವಾಗ ಅವರು ಜೀವನ ಕಂಡಿರ್ಲಿಲ್ವ??"
"ಹಾಗಲ್ಲಯ್ಯ ........" ಅರ್ಧದಲ್ಲೇ ತಡೆದ ಮೂರ್ತಿ
"ನೋಡು ., ಕುಡಿಯುವುದಕ್ಕೆ ಅವೆಲ್ಲ ಕಾರಣಗಳಷ್ಟೆ., ನಿನ್ನ ಮಗನಿಗೆ ಕೇಳಿದರೆ ಅವನೂ ಒಂದಷ್ಟು ಕಾರಣಗಳನ್ನ ಕೊಟ್ಟಾನು.ಅದಲ್ಲ ಉತ್ತರ.ನೀ ಅವನ ವಯಸ್ಸಿದ್ದಾಗ ., ಶೆಟ್ಟರ ಅಂಗಡಿಯ ಸುಬ್ಬಣ್ಣನಿಗೂ ನಿನ್ನಪ್ಪ ಗೌರವ ಕೊಡುತ್ತಿದ್ದರು.ಅವರು ಶ್ರೀಮಂತರು ಹೇಳುವ ಕಾರಣಕ್ಕಾ??.ಅವಾಗ ಅವರವ ವ್ಯಕ್ತಿತ್ವ., ಅವರಿಗೆ ಗೌರವ ದಕ್ಕಿಸಿಕೊಡುತ್ತಿತ್ತು.ತಿಳಿದವರು ಹೇಳುವ ಕಾರಣಕ್ಕೆ ಗೌರವ ಕೊಡು .,ವಯಸ್ಸಿಗೆ ಗೌರವ ಕೊಡು ಅಂತ ನಿನ್ನ ಅಪ್ಪ ನಿನಗೆ ತಿದ್ದಿದ್ದರು.ಇವಾಗ ನೀ ಮಾಡಿದ್ದೇನು .,ನೀ ಒಬ್ಬನೇ ಅಲ್ಲ ನಾವೆಲ್ಲಾ ಮಾಡಿದ್ದೇನು"
 ರಾಜೇಂದ್ರನಿಗೆ ಮಗಾ ಕುಡಿಯುವುದಕ್ಕೂ ., ಇದಕ್ಕೂ ಎತ್ತೆಣಿ0ದೆತ್ತ ಸಂಬಂದ ಎಂದು ಅರ್ಥವಾಗಲಿಲ್ಲ.
"ಮನೆಯಲ್ಲಿ ಅಡಿಗೆ  ಮಾಡುವ ಆಳಿಗೆ ನಾಗ ಅಂತ ಕರೆ ಅಂತ ನಿನ್ನ ಮಗನಿಗೆ ಹೇಳಿಕೊಟ್ಟಿದ್ದಿಯ.,ಅಥವಾ ವಯಸ್ಸು ಮತ್ತು ತಿಳುವಳಿಕೆಗಿಂತ ., ದುಡ್ಡಿನ ಆಧಾರದ ಮೇಲೆ ಮನುಷ್ಯನಿಗೆ ಗೌರವ ಕೊಡುವುದ ಹೇಳಿಕೊಟ್ಟು., ಟೋಟಲ್ಲಾಗಿ ದುಡ್ಡಿನ ಸಂಸ್ಕೃತಿಯಲ್ಲಿ ಮಗನ ಬೆಳಿಸಿ ಈಗ ನಿನ್ನ ಹಾಗೆ ಇರಬೇಕು ಅಂದರೆ ?? ಆತ ದುಡ್ಡು ಯಾವ ಸಂಸ್ಕೃತಿ ಹೇಳತ್ತೂ  ಅದನ್ನ ಅನುಸರಿಸುತ್ತಾನೆ ., ಅಷ್ಟೇ "
"ಬಿಸಿನೆಸ್ಸ್ ಕೂಡ ಒಂದು ರೀತಿಯ ರೀಲೆಶನ್ ಆಗಿದ್ದ ಕಾಲವನ್ನ., ರೀಲೆಶನ್ ಕೂಡ ಒಂದು ಬಿಸಿನೆಸ್ಸ್ ಆಗುವ ಹಾಗೆ ಬದಲಾಯಿಸಿದ ಕೀರ್ತಿ ನಮ್ಮದು ರಾಜೇಂದ್ರ., ಪರಿವರ್ತನೆ ಜಗದ ನಿಯಮ"
ರಾಜೇಂದ್ರನಿಗೆ ಇವೆಲ್ಲ ಸಹ್ಯವಾಗಲಿಲ್ಲ.,ಬೋಳಿಮಗ ಬುದ್ದಿಜೀವಿ ಆಡಿದ ಹಾಗೆ ಆಡ್ತಾನೆ ಅಂತ ಮನಸ್ಸಿನಲ್ಲೇ ಬಯ್ಯುತ್ತ ಎದ್ದ.
"ಬಾಯಿಗೆ ಮೌತ್ ಫ್ರೆಶ್ನೆರ್ ಹಾಕ್ಕೊಳೋ ಮಗನಿಗೆ ಗೊತಾದ್ರೆ ಮರ್ಯಾದೆಗೇಡು" ಅಂತ ಮೂರ್ತಿ ಕಿಚಾಯಿಸಿದ್ದು ತಮಾಷೆಗೆ ಅಂತ ಅನ್ನಿಸಲಿಲ್ಲ ರಾಜೇಂದ್ರನಿಗೆ. ಅದರೂ ಹಾಕಿಕೊಳ್ಳುವುದ ಮರೆಯಲಿಲ್ಲ.
                                                                    --------------------------------------
ಸಂಜೆಯ ಮೀಟಿಂಗ್ ಮುಗಿದ ಮೇಲೆ ಶಶಾಂಕ ಸಂಧ್ಯಾಳನ್ನ ಅವಳ ಮನೆಗೆ ಬಿಟ್ಟ., ಅವಳ ಅವತಾರ ನೋಡಿದ ಅಜ್ಜಿ ಭಗವಂತ ಈ ಹುಡ್ಗೀ ದುಂಡಗೆ ಓಡಾಡಿ ಅದನ್ನೂ ಫ್ಯಾಶನ್  ಅಂತ ಹೇಳದೊಂದು ಬಾಕಿ ಇದ್ದು  ಅಂತ ದೊಡ್ಡಕೆ ಗೊಣಗಿದ್ದು  ಕೇಳಿ ತುಟಿಯಂಚಲ್ಲೇ ನಕ್ಕ.ಅಪ್ಪನಿಗೆ ಗೊತ್ತಾಗದಿರಲಿ ಅಂತ ಮೌತ್ ಫ್ರೆಶ್ನೆರ್ ಹಾಕಿಕೊಳ್ಳುವದ ಮರೆಯಲಿಲ್ಲ.





Tuesday, June 28, 2011

ತಲೆಮಾರು -೧



ರಾಮ ಕುರ್ಚಿಯಲ್ಲಿ ಕುಳಿತಿದ್ದ ರಾಜೇಂದ್ರ ಶರ್ಮ ಮಗನನ್ನು ತರಾಮಾರಿ ಬೈಯ್ಯುತ್ತಿದ್ದರು.
"ನಿನ್ ವಯ್ಯಸ್ಸಿಗೆ ನನಗೆ ಗಂಜಿ ಗಂಜಿಗೆ ಗತಿ ಇರಲೇ ಗೊತ್ತಾ??., ಹಸಿದ ಹೊಟ್ಟೆಯಲ್ಲಿ  ಕವಚಿ ಮಲಗುತ್ತಿದ್ದೆ ರಾತ್ರಿ.,ವಾರಾನ್ನ ಮಾಡಿ ಈ ., ಇವತ್ತಿನ ಹಂತಕ್ಕೆ ಬಂದಿದ್ದೇನೆ ,ನಿನಗೇನು ಕಡಿಮೆ ಹಾಂ".,,"ನಾನು ಗಂಜಿ ಕುಡಿಯುತ್ತಿದ್ದ ಕಾಲಕ್ಕೆ ನೀನು ಎಣ್ಣೆ ಹೊಡ್ಯುತ್ತಿಯಾ ನಾಚಿಕೆ ಆಗಬೇಕು ನಿನ್ನ ಜನ್ಮಕ್ಕೆ. ಛೀ"

ಶಶಾಂಕ ಶರ್ಮ ಮೆದುಳು ತಕ್ಷಣಕ್ಕೆ ಕೆಲಸ ಮಾಡುವುದನ್ನೇ ನಿಲ್ಲಿಸಿದಂತಿತ್ತು.ಈ ಪರಿ ಅಪ್ಪನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಅಂತ ಅಂದಾಜು ಇರಲಿಲ್ಲ ಮಾರಾಯನಿಗೆ.ಉತ್ತರವಾದರೂ ಏನು ಕೊಟ್ಟಾನು??.
ಇನ್ನೊಮ್ಮೆ ಕುಡಿದದ್ದು ಕಂಡರೆ ಕಾಲು ಮುರಿದು ಬಿಡುತ್ತೇನೆ ಎಂಬ ಎಚ್ಚೆರಿಕೆಯ ಮಾತಿನೊಂದಿಗೆ ಅವತ್ತಿನ ಪ್ರಹಸನ ಮುಗಿದಿತ್ತು.

-------------------------------------------------------------------------------------------------------------
ಮಲಗಿದ ರಾಜೇಂದ್ರ ಶರ್ಮನಿಗೆ ಬಾಲ್ಯದ ನೆನಪುಗಳು ತಲೆ ತುಂಬಿಕೊಂಡವು.
ಅಮ್ಮಾ ...ಎಂದಳುತ್ತಾ  ತರಚಿದ ಕಾಲಿನೊಂದಿಗೆ ಬಂದಾಗ ಆ ಕಾಂಗ್ರೆಸ್ಸ್ ಸೊಪ್ಪಿನ ರಸ ಹಚ್ಚಿ ರಕ್ತ ಕಟ್ಟಿಸಿದ ಆಯಿ.ರಾತ್ರಿಯ ಅನ್ನವೇ ., ಬೆಳಗಿನ ಹುರಿದನ್ನದ ಮುಖವಾಡ ಹೊತ್ತು ., ಹೊಟ್ಟೆಯ ಪಾಡಿಸಿದ ನೆನಪುಗಳು ಹಾಯತೊಡಗಿದವು  

ರಾಜೇಂದ್ರ ಹುಟ್ಟಿದ ಊರು ಲಿಂಗನಮಕ್ಕಿ ಜಲಾಶಯದ ನೀರ ಹೊಟ್ಟೆಯೊಳಗೆ ಮಲಗಿತ್ತು.ಕೊಪ್ಪಲಮನೆ ಎಂಬ,ಅಕ್ಷರಶಃ ಮೂರು ಮತ್ತೊಂದು ಮನೆ ಇದ್ದ ಊರದು.ಅಪ್ಪ ಅಮ್ಮ ಅಜ್ಜ ಅಜ್ಜಿ ಮತ್ತು ೭ ಜನ ಸಹೋದರ -ಸಹೋದರಿಯರಲ್ಲಿ ನಾಲ್ಕನೆಯ ಮಗ ರಾಜೇಂದ್ರ ಶರ್ಮ.ಬಹುಶಃ ಹುಟ್ಟಿದಾಗ ,ಆ ಹುಟ್ಟಿಗೊಂದು ಕಾರಣ ಇರಲೇ ಬೇಕೆಂಬ, ಸಾಧನೆಯ ಸಾಧನ ಆಗಲೇ ಬೇಕೆಂಬ ಮಹತ್ವಾಕಾಂಕ್ಷೆ ಯಾರಲ್ಲೂ ಇದ್ದಿದ್ದು ಸುಳ್ಳು.ಮನೆಯ ಎದಿರಿಗಿನ ಸೊಂಪಾದ ತೋಟ. ಅದರಾಚೆಗೆ ಹೊಳೆವ ಹೊಳೆ.ವೈಷ್ಣ ಹೊಳೆ ಅಂತ ಕರೆಯುತ್ತಿದ್ದರದಕ್ಕೆ.ಅದೇ ಹೆಸರೋ ಅಥವಾ ಯಾವದಾದರೂ ಹೆಸರಿನ ಅಪಭ್ರಮ್ಷವೋ ಕೆದಕಿದವರಿಲ್ಲ.ಅಲ್ಲೇ ರಾಜೇಂದ್ರ ಈಜು ಕಲಿತದ್ದು.ದೊಡ್ಡಣ್ಣ ಹಿಯಾಳಿಸುತ್ತಲೇ.,ಕಲಿಸಿಕೊಟ್ಟಿದ್ದ.ಅಷ್ಟಕ್ಕೂ ಈಜು ಒಂದು ಮೂಲಭೂತ ಅಗತ್ಯವೇ ಆಗಿತ್ತು.೬ ಮೈಲು ದೂರದ ಶಾಲೆಗೆ ಇದೆ ಹೊಳೆಯನ್ನ ತೆಪ್ಪದ ಮೇಲೆ ದಾಟಬೇಕಿತ್ತು.

ಹೊಳೆ ನೀರು., ಹಾವು ಹಸೆ ,ಸಂಕ .,,ಎಲ್ಲವನ್ನೂ ಬದುಕಿನ ಒಂದು ಭಾಗವಾಗೆ ನೋಡುತ್ತಾ ತೆಗೆದುಕೊಳ್ಳುತ್ತಾ ಬೆಳೆದ ಜನಗಳ ಮದ್ಯ ರಾಜೇಂದ್ರನೂ ಒಬ್ಬನಾಗಿದ್ದ.ಅವನ ಜೀವನದ ಬಹಳ ದೊಡ್ಡ ತಿರುವು ., ಶರಾವತಿ ನದಿ ನೀರಿನ ತಿರುವಿಗೆ ಆಣೆಕಟ್ಟು ಕಟ್ಟಲು ಸರ್ಕಾರ ನಿರ್ಧರಿಸಿದ್ದು.ನಮ್ಮದು ಮುಳುಗಡೆ ಪ್ರದೇಶವಂತೆ ಅಂತ ಕೇಳಿದಾಗಲೇ ., ಆ ಭಾಗದ ಜನರ ಎದೆ ಬಡಿತ ದಸಕ್ಕೆನ್ದಿತ್ತು.ದೊಡ್ಡವರ ಭಾವನೆಗಳ ತುಮುಲ ಅರ್ಥವಾಗುವ ವಯಸ್ಸಲ್ಲ ಅವನದು.ಮನೆಯ ಅಪ್ಪ -ಅಜ್ಜಂದಿರು ಗುಳೆ ಏಳುವ ವ್ಯವಸ್ಥೆಯಲ್ಲಿ ತೊಡಗಿದ್ದರೆ., ರಾಜೇಂದ್ರ ಅಣ್ಣ ತಮ್ಮಂದಿರ ಜೊತೆ  "ಹೇ ಇವತ್ತು ಹೊಳೆ ಇಷ್ಟು ಮೇಲೆ ಬಂದಿದೆ" ಅಂತ ಲೆಕ್ಕ ಹಾಕುತ್ತಿದ್ದ.

ಆಮೇಲೆ ಬೆಂಗಳೂರಿಗೆ ಬಂದಿದ್ದು.ಮೈಯ ಬೆವರ ಪ್ರತಿಹನಿಯು ಇಂದು ಸಾಮ್ರಾಜ್ಯವಾಗಿ ನಿಂತಿದೆ.ಕೆಲವೊಂದು ದಿವಸ ಕಾಲಿ ಅರ್ಧ ಕಪ್ಪು ಚಾದಲ್ಲೇ ದಿನದ ಜೀವನ ಮುಗಿಸಿ ಬಂದದ್ದುಂಟು.ಯಾಕೆ ಮಗ ಹೀಗಾಗುತ್ತಿದ್ದಾನೆ ಹೇಳುವುದೇ ಅರ್ಥವಾಗದ ವಿಷಯವಾಗಿಬಿಟ್ಟಿದೆ.ಚನ್ನಾಗಿ ಓದಲಿ .ತನ್ನಂತೆ ಕಷ್ಟ ಪಡದೆ ಇರಲಿ ಎಂದು ಅಂತಾರಾಷ್ಟ್ರೀಯ ಮಟ್ಟದ ಶಾಲೆಗೇ ಸೇರಿಸಿದ್ದೇನೆ.ಜನಮಾನಸದ ಮದ್ಯೆ ಕೀಳು ಆಗದಿರಲಿ ಹೇಳುವ ಕಾರಣಕ್ಕೆ ಲಕ್ಷ ಕೊಟ್ಟು ಎಂಜಿನೀರ್ ಓದಿಸುತ್ತಿದ್ದೇನೆ.ಅದರೂ ..ಯಾಕೊ ತಾನು ಹೇಳಿದ ಮಾತು ಕೇಳುತ್ತಿಲ್ಲ ಶಶಾಂಕ ಹೇಳುವುದು.ನಿಧಾನಕ್ಕೆ ಅರ್ಥವಾಗುತ್ತಿದೆ.

ಯಾಮಿನಿ ಆತನ ರಾತ್ರಿಯ ತಬ್ಬಿಕೊಂಡಿತು.
                                                                                                                             (contd....)

Sunday, June 19, 2011

ಜಾಗತೀಕರಣ ಮತ್ತು ಅಪ್ಪಂದಿರ ದಿನ

ಗಣಪತಿಯ ಆಕಾರವೇ ಎಷ್ಟು ವಿಚಿತ್ರ ಅಲ್ಲವಾ..ಒಂದು ಬಗೆಯ ವಿಚಿತ್ರ ಅಕಾರ .ಡೊಳ್ಳು ಹೊಟ್ಟೆ ,ಸೊಂಡಿಲು ,ಇಲಿ ಹಾವು ..ನಾವು ವಿಕಾರ ಮತ್ತು ಅಪೂರ್ಣತೆಯನ್ನ ಪೂಜೆ ಮಾಡ್ತು. ಪೂರ್ಣತೆಯ ಹಂಬಲಕ್ಕಾ??..ಬಿಡು.ಮೊದಲು ಮೃಥಿಕಾ ಪೂಜೆ ಅಂತ ಮಣ್ಣನ್ನೇ ತಂದು ಪೂಜೆ ಮಾಡಿ ಹಾಗೆ ವಿಸರ್ಜನೆ ಮಾಡ್ತಿದ್ದರಂತೆ. ಆ ಮೇಲೆ ಮೆಲ್ಲ ಮೆಲ್ಲನೆ ಆಕರ ಬರೋಕೆ ಶುರುವಾಗಿರಬೇಕು.ಚೌತಿ ಹಬ್ಬ ಅಂದರೆ ದೂರ್ವೆ ಗುಡ್ಡ ಹತ್ತಿ  ಕಿತ್ತು ತರುವ  ಗರಿಕೆ ,ವಿಷ್ಣು ಕಾಂತಿ. ಮನೆಯಲ್ಲಿ ದೇವರ ಮಂಟಪದ ಎದುರು ಇರುವ ಅಟ್ಟಣಿಗೆಯಲ್ಲಿ ಕಟ್ಟುವ ಪಲವುಳಿಗೆ (ಫಲಾವಳಿ)ಆ ಹೊತ್ತಿಗೆ ಬಿಡುವ ಹಣ್ಣು ಹೂವು ,ಕಾಡಿನ ಎಂತೆತದೋ ಹೂವು.ಅವೆನ್ನೆಲ್ಲ ತಂದು ಕಟ್ಟೋದು ರೂಡಿ.ಸುತ್ತ ಮುತ್ತ ಸಿಗುವುದರಲ್ಲೇ ಹಬ್ಬಕ್ಕೆ ಚಂದ ಮಾಡುವ ಸಡಗರ.ಮನೆ ಎದುರು ಮಾವಿನ ಚಂಡೆ ,ಚಕ್ಕುಲಿ ಕಾಯಿಕಡುಬು.,ಸರಿಯಗುವುದ್ದಕ್ಕಿಂತ ಹಾಳೆ ಆಗುವ ಪಂಚಕಜ್ಜಾಯದ  ಹದ.

ಹಬ್ಬಕ್ಕೆ ವಾಸನೆ ಇರ್ತದೆ ಅಂದ್ರೆ ಯಾರದ್ರೂ ನಗಬಹುದು ,ಆದ್ರೆ ನಮಗೆ ಬರಲಿಕ್ಕಿಲ್ಲ.ಚೌತಿ ಹಬ್ಬ ಬರೋ ಹೊತ್ತಿಗೆ ಮಳೆಗಾಲದ ದೊಡ್ಡ ಹೊಡೆತ ಮುಗಿದಿರುತ್ತದೆ.ಹೂ ಬಿಡೋ ಗಿಡ ಎಲ್ಲ ಹೂ ಬಿಟ್ಟು ಜೋತಾಡ ತೊಡಗುತ್ತಿರುತ್ತವೆ.ಕೆಸರು ಥಂಡಿ ಎಲ್ಲ ಒಣಗಿದ್ದರು ತೇವ ಏನೂ ಹೋಗಿರೋದಿಲ್ಲ.ನಮ್ಮ ಮನೆಗಳಲ್ಲಿ ಚಕ್ಕುಲಿಯ ಪರಿಮಳ ಬರೋದು ಚೌತಿಲಿ ಮಾತ್ರ ಅಲ್ವ.ಚೌತಿ ಹಬ್ಬದ ಹಾಡನ್ನ ಬೇರೆ ಯಾವಾಗಲು ಹೇಳಲ್ಲ.ಜೋರು ಜಂಗಟೆ  ಆಗೀಗ ಬೀಳುವ ಹನಿ ಹನಿ ಮಳೆ.ಎಲ್ಲ ಸೇರಿ ಒಂದು ಆವರಣ ಸೃಷ್ಟಿಯಾಗಿರತ್ತೆ.ಚೌತಿ ಹಬ್ಬ ಅಂದ್ರೆ ಇದೆಲ್ಲ ನೆನಪಿಗೆ ಬರತ್ತಲ್ವಾ.ದೀವರು ಗೌರಿ ಬಿಡುವ ವರೆಗಿನ ಎಲ್ಲ ಚಿತ್ರಣಗಳೂ.

ಬರೀ ಚೌತಿಗಲ್ಲ ,.ನವರಾತ್ರಿಗೆ ದೊಡ್ದಬ್ಬಕ್ಕೆ.,ಈಗಲೂ -ಮಟ ಮಟ ಮಧ್ಯಾನ್ನದಲ್ಲೂ ಕಣ್ಮುಚ್ಚಿ ಕುಳಿತರೆ ಆ ಘಮ ಮೂಗಿಗೆ ಬಡಿಯತ್ತೆ. ಒಳಗೆಲ್ಲೋ ಇಳಿದು ನಡುಮನೆಯ ಮಂದ ಕತ್ತಲು ,ವಳ್ಳೆಣ್ಣೆ   ಕಂಪು ಗಂಟೆಯ ಶಬ್ದ ತುಂಬಿಕೊಳ್ಳುತ್ತದೆ. ಶ್ರೀಪಾದು ಈ ವಾಸನೆಯನ್ನ ಹಿಡಕೊಂಡ್ರೆ ಮಾತ್ರ  ನಾವೆಲ್ಲ ಹೇಳುವ "ಜಾಗತೀಕರಣ" ವನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ.ನೋಡು ನಾನು ನೀನು ಈಗ ದೂರ್ವೆ ಕೊಯ್ಯೋದಿಲ್ಲ.ಫಲವುಳಿಗೆ ಬಹುಷಃ ದೊಡ್ಡಪ್ಪ ಶಾಸ್ತ್ರಕ್ಕೆ ಅಂತ ಕಡ್ತಾರೆ.ಅಮ್ಮ ಒಬ್ಳೇ ಚಕ್ಲಿ ಮಾಡಬೇಕಲ್ಲ ಅಂತ ಮಾಡೋದು. ಈಗಿನ ಮಕ್ಳು ನಾನು ಜನ್ಗಟೆ ಹೊಡಿತಿ ,ನಂಗೆ ಜನ್ಗಟೆ ಬೇಕು ಅಂತ ಅತ್ತು ರಂಪ ಮಾಡೋದಿಲ್ಲ.ಗರಿಕೆ ಹುಲ್ಲು ಬೇಕೇ ಬೇಕು ಅಂತ ಇಲ್ಲ. ಗಣಪತಿ ಸಾಗರದಿಂದ ಬರತ್ತೆ ಮತ್ತು ನಾನು ನೀನು ಎಲ್ಲ "ಗಣೇಶ ಚತುರ್ಥಿ"ಗೆ ಅಂತ ಕೊಡುವ ರಜಕ್ಕೆ ಊರಿಗೆ ಬರ್ತೇವೆ.ಹಬ್ಬದ ದಿನ ನಮಗೆ ಮೀಟಿಂಗ್ ಇದ್ರೆ ಮೀಟಿಂಗೆ ಮುಖ್ಯ. ಹಬ್ಬ ಏನೂ ಮುಂದಿನ ವರ್ಶಾನೂ ಬರತ್ತೆ ಅಲ್ವ.

"ಅಪ್ಪಂದಿರ ದಿನ " ಹೆಸರು ಕೇಳಿದ್ರೆ ಗೊತಾಗತ್ತೆ ಅದು ನಮ್ಮ ಹಬ್ಬ ಅಲ್ಲ ಅಂತ,.ಪಿತೃ ದೇವೋ ಭವ ಅಂತ ದಿನಾ ಮಂತ್ರದಲ್ಲಿ ಹೇಳ್ತಿವಿ ನಾವು.ಪ್ರೀತಿಸುದಕ್ಕೆ .,ಅದನ್ನ ವ್ಯಕ್ತ ಪಡಿಸುವುದಕ್ಕೆ ಇಂತದ್ದೆ ದಿನ ಹೇಳಿ ನಾವು ಮಾಡಿತ್ತುಕೊಂಡಿದ್ದಲ್ಲ.ಅಪ್ಪನ ಪ್ರೀತಿಯನ್ನ ಕೇವಲ ಒಂದು ದಿನಕ್ಕೆ ಫಾರ್ಮಾಲಿಟಿ ಮಾಡಿಕೊಂಡಿಲ್ಲ ನಾವು.ಬಹುಷಃ ನಾವು ದಿನವೂ ಅಪ್ಪನ ಕಾಲಿಗೆ ನಮಸ್ಕಾರ ಮಾಡಿಯೇ ತೀರ್ಥ ತಗೊಳ್ತಿವಿ.ಅಲ್ವಾ

ಇದಕ್ಕೆ ಏನಂತ ಹೆಸರಿಡೋಣ .ನಮ್ಮ ಮನೆಯ ಚೌತಿ ಹಬ್ಬ ಅರಿವಿಗೆ ಬರದಂತೆ ನಿಸ್ತೇಜವಾಗೋದು.ಮಾರಿಜಾತ್ರೆ ಮೂಡ ನಂಬಿಕೆ ಅನ್ಸೋದು.fathers day ,mothers day  feb-14 ನಮ್ಮ ಮನೆಯಂಗಳಕ್ಕೆ ಮನೆಯೊಳಗೇ ಬಂದು ಕೂರೋದು.ಹೊಗೊಪ್ಳಲ್ಲಿ ಇನ್ನೊಂದು ಹತ್ತು ವರ್ಷಕ್ಕೆ  ಜನವೇ ಇಲ್ಲದಂತಾಗುವುದು.ಇನ್ನೊಂದು ಇಪ್ಪತ್ತು ವರ್ಷಕ್ಕೆ  ಜನ ಯಾರೂ ಇರಲ್ಲ ಹೇಳಿ ವಾಪಸ್ಸು ಹೋಗ್ತಾರೆ ಅಂತ ದೀವರು ಗೌರಿ ಹಬ್ಬದ ದಿನಾನೆ ಗೌರಿನ ಹೊಳೆಗೆ ಬಿಟ್ಟು ಬರುವಂತಾಗುವುದು.??

ಇದ್ಯಾವ್ದೂ ಅರ್ಥವಾಗದೆ ದೇಶದ ಬಗ್ಗೆ ,ಜಾಗತೀಕರಣದ ಬಗ್ಗೆ ,ಪ್ರಗತಿಯ ಬಗ್ಗೆ ,ನಮಗೆ ಬೇಕಿರುವ ಪ್ರಗತಿಯ ಬಗ್ಗೆ  ಮಾತಾಡಿ ಪ್ರಯೋಜನವಿಲ್ಲವೇನೂ???

(ನನಗೆ ಬಂದ ಒಂದು ಪತ್ರ, ಅಪ್ಪಂದಿರ  ದಿನದ ಭರಾಟೆಯ ಹಿನ್ನಲೆಯಲ್ಲಿ ಹಾಕ್ತ ಇದ್ದಿ )

Monday, June 13, 2011

ತಲ್ಲಣಿಸದಿರು ಕಂಡ್ಯ ತಾಳು ಮನವೆ..............

ಆತ್ಮೀಯ .,

ನಮ್ಮ ಅತೃಪ್ತಿ ಮತ್ತು ಮಿತಿಗಳು ನಮಗೆ ಕಾಣುವುದಕ್ಕೆ ಶುರುವಾಗುವುದು ನಮ್ಮೆದುರು ಆ ಕೊರತೆ ಇಲ್ಲದವರು ನಿಂತಾಗ.ಅಂಥದೊ ಮಂಕು ಸಿಟ್ಟು ಬೇಜಾರು ,ನಮ್ಮ ಖುಷಿಯ ಸಂತೋಷದ  ಒಂದಷ್ಟು ಕ್ಷಣಗಳನ್ನ  ಯಾರೋ ನಮ್ಮಿಂದ ಕಿತ್ತುಕೊಂಡು ಬಿಟ್ಟರು ಅನ್ನುವ ಸಿಟ್ಟು.ಈ ದುಗುಡ ಶಾಂತ ಆಗೋದು ಮತ್ತೆ ಅಮ್ಮ ನೆನಪಾಗಿ ,ಹಪ್ಪಳ ಉಪ್ಪಿನಕಾಯಿ ಮಾಡುವುದರಲ್ಲೇ ಖುಷಿ ಕಾಣುವ ಅಮ್ಮ .ಅಜ್ಜಿ.ಇದನ್ನೆಲ್ಲಾ ದಾಟುವುದಕ್ಕೆ ಸಾದ್ಯವಿದ್ದೂ ದಾಟದ ,.ಇಂತದ್ದಕ್ಕೆಲ್ಲ ಹೊಂದಿಕೊಳ್ಳಲಾಗದೆ ಮೀರುವ ದಾರಿಯೂ ಗೊತ್ತಿಲ್ಲದೇ ಒದ್ದಾಡುವ ನೆಂಟರಿಷ್ಟರು  ಇವರೆಲ್ಲ ನೆನಪಾದಾಗ .ದಿನನಿತ್ಯದ ಅಗತ್ಯಗಳಿಗೆ ಬಲವಂತದ ಕಡಿವಾಣ ಹಾಕಿ ಕೇಳಿದಾಗ ದುಡ್ಡು ಕೊಡುವ ಅಪ್ಪ ನೆನಪಾದಾಗ.
ಅದರೂ
ಏನೋ ಕಹಿ ಏನೋ ಕೊಸರು ಒಳಗೊಳಗೆ ವಿಷವಾಗಿಬಿಡುವ ಭಯ.
ಎಲ್ಲರೂ ಕ್ಯಾಮೆರಾ ಇರುವ ಮೊಬೈಲ್ ತಗೊಂಡಾಗ ., ಕೈಲ್ಲಿ ಸೆಲ್ಲೆ ಇಲ್ಲದ ನಾವು ಕಿಳರಿಮೆಯಿಂದ ನರಳುವಾಗ ,ಅದನ್ನೇ ಬೇರೆಯವರು ಎತ್ತಿ ಆಡಿದಾಗ  ಯಾಕೋ ಅಳು ಬಂದು ಬಿಡ್ತದೆ.ಛೆ ಯಾವಾಗ ಇದೆಲ್ಲ ಮುಗಿಯುತ್ತದೆ.ನನ್ ಹತ್ರ ಯಾರೂ ಹೊಸ ಸಿನಿಮ ಬಗ್ಗೆ ಕೇಳಲ್ಲ.ಹೊಸ ಫ್ಯಾಶನ್ ಬಗ್ಗೆ ಮಾತಾಡಲ್ಲ.ಬೇರೆ ಹುಡುಗಿಯರ ಜೊತೆ ಮಾತನಾಡುವ ಹಾಗೆ ಮಾತಾಡಲ್ಲ.ಹೇಗೆ ಇದನ್ನೆಲ್ಲಾ ನಿನಗೆ ಮೀರುವುದಕ್ಕೆ (?!) ಸಾದ್ಯವಾಯಿತು  ಅಂತೆಲ್ಲ ಕೇಳ್ತಾರೆ.ಯಾಕೆ ನಿನಗೆ ಬೇರೆ ಹುಡುಗಿಯರ ತರಹ ಆಕರ್ಷಕವಾಗಿ ಡ್ರೆಸ್ ಮಾಡಿ ಮಿಂಚಬೇಕು ಅನ್ಸಲ್ಲ ಅಂತ ಕೇಳ್ತಾರೆ.ಹೇಗೆ ಹೇಳಲಿ ಅದೆಲ್ಲ ನಾನು  ಆಯ್ಕೆ ಮಾಡಿಕೊಂಡದ್ದು ಅಲ್ಲ ಅಂತ. ಒದಗಿ ಬಂದದ್ದು ಅಂತ.

ಹೇಳಿಕೊಳ್ಳದಿದ್ದರೆ ವಿಷವಾಗಿಬಿಡುವ ಭಯ., ಹೇಳಿಕೊಂಡರೆ ಖಾಸಗಿತನವೆಲ್ಲ ಕಳೆದುಕೊಂಡು ಕಾಲಿ ಕಾಲಿ ಅದಂತೆ.

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲುಹುವನು ಇದಕೆ ಸಂಶಯವಿಲ್ಲ.........


ಯಾಕೋ ಎಲ್ಲ ಜಾಳು ಜಾಳು ಪದಗಳೆನ್ನಿಸುತ್ತಿದೆ.ನಿನ್ನ ನೆನಪೊಂದು ಬಿಟ್ಟು .



ಪ್ರೀತಿಯಿಂದ

Sunday, May 29, 2011

ಹೀಗೊಂದು ಕನ್ನಡಿ ಕಥಾನಕ

ಅದೊಂದು ಚಂದದ ಕನ್ನಡಿ.ಮೂಲೆಗಳೇ ಇಲ್ಲದ ನವಿಲಿನ ಗರಿಯ ರೂಪುಗಳುಳ್ಳ ಮೇಲ್ಪದರದಲ್ಲಿ ಅನ್ಕುಡೊಂಕಿಲ್ಲದ ಎಲ್ಲರೂ ಇಷ್ಟ ಪಡುತ್ತಿದ್ದ ಕನ್ನಡಿ.ಕನ್ನಡಿಗೆಲ್ಲ ಇರುವ ಮತ್ತೊಂದು ವಿಶೇಷತೆ ಅಂದ್ರೆ ಅದು ಹಿಂದೆ ಮರೆಸಿ ಮುಂದೆ ತೋರಿಸುತ್ತದೆ.ಎಲ್ಲ ಜನರು ಬಯಸುವಂತೆ.ಒಳಗೇನು ಹೇಳುವದರಕ್ಕಿಂತ ಹೊರಗೆ ಏನು ಹೇಳುವಂತೆ.ಮುಖವಾಡದ ಅಂತ್ಯಂತ ಸುಂದರ ಮೂರ್ತರೂಪ ,ವಿಶೇಷ ಸೃಷ್ಟಿ ಕನ್ನಡಿ. ಒಳಗೆ ಏನೂ ಹೊರಗೆ ಮತ್ತೊಂದೇನೂ.

ಪಾಪ ನಮ್ಮ ಈ ಕಥೆಯ ಕನ್ನಡಿಗೆ ಅವೆಲ್ಲದರ ಜೊತೆ ಮತ್ತೊಂದು ಶಕ್ತಿ  ಇತ್ತು., ಎದುರಿಗೆ ಇದ್ದಿದ್ದರ ಬಿಂಬ ಚನ್ನಾಗಿತ್ತೋ ಇಲ್ಲವೂ ಪ್ರತಿಬಿಂಬ ಸುಂದರವಾಗಿರುತ್ತಿತ್ತು.ಚಂದಾಮಮನ ಕತೆಯಲ್ಲಿ ಬರುವ ಮಾಯಾ ದರ್ಪಣದ ತರಹ.ಗಜಾಗಮಿನಿಯನ್ನು ಹಂಸಗಮನೆಯನ್ನಾಗಿಯೂ .,ಅಷ್ಟಾವಕ್ರನನ್ನು ಸ್ಪುರದ್ರೂಪಿಯನ್ನಾಗಿಯೂ ತೋರಿಸಬಲ್ಲ ಅದ್ಬುತ ಕಲೆ ಇತ್ತು.ಸಹಜವಾಗಿ ಎಲ್ಲರಿಗೂ ಪ್ರಿಯವಾಗಬಲ್ಲ ಗುಣ.ಎಲ್ಲರು ಬಂದು ಪ್ರತಿಬಿಂಬವ ನೋಡಿ ಖುಷಿ ಪಡುವವರೆ.

ಕನ್ನಡಿಯ ಮನಸಿನ ಒಳಗಿನ ತಲ್ಲಣವ ಅರ್ತ ಮಾಡಿಕೊಳ್ಳುವ ಗೂಜಿಗ್ಯಾರೂ ಹೋಗುತ್ತಿರಲಿಲ್ಲ.ಕನ್ನಡಿಗ್ಯಾರು ಕನ್ನಡಿ ಹಿಡಿದಿರಲಿಲ್ಲ.ಅದೊಂದು ಕಾಳ ರಾತ್ರಿ.ಕಾಕೋಳು ರಾಮಯ್ಯನ ಕಾದಂಬರಿಯಲ್ಲಿ ಬರುವಂತಹದ್ದು.ಕನ್ನಡಿ ತನ್ನೊಳಗಿನ ಬವಣೆಗಳ ಭಾವನೆಗಳ  ಎಲ್ಲ  ಹೊರಹಾಕುವ ನಿರ್ಧಾರದೊಂದಿಗೆ ರೂಪ., ಗುಣಗಳ ಬದಲು ಮಾಡಿಕೊಂಡು ಬೆತ್ತಲಾಗಿತ್ತು.ಜಗತ್ತನ್ನ ಬೆತ್ತಲು ಮಾಡುವ ಹಂಬಲದೊಂದಿಗೆ.

ಮರುದಿನ ಗಜಗಮನೆ  ಗಜಗಮನೆಯಾಗೆ ಇದ್ದಳು.ಮತ್ತೆ ಅಷ್ಟಾವಕ್ರಾ ಅಷ್ಟವಕ್ರನಾಗೆ .ನಿಜವ ಅರಗಿಸಿಕೊಳ್ಳುವ ., ಹೊಟ್ಟೆಗಿಳಿಸಿ ಭುಜಿಸಿಕೊಳ್ಳುವ ಮನವಾಗಲಿಲ್ಲ.ಕಲ್ಲು ಹೊಡೆದರು .ಕನ್ನಡಿಯ ರೂಪ ಕಳಚಿಕೊಳ್ಳುವ ಹಂಬಲಕ್ಕೂ ಸೇರಿಸಿ . ಚೂರಾಯಿತು.ಕನ್ನಡಿಯ ಅಳುವ ಕಾಣುವ ಕನ್ನಡಕ ಯಾರಲ್ಲೂ ಇರಲಿಲ್ಲ.

"ನಮ್ಮ ಕನ್ನಡಿ ಹೀಗೆ ಅಂತ ಗೊತ್ತಿರಲಿಲ್ಲ"
"ಕನ್ನಡಿಯ ಒಳಗೆ ಇನ್ನೆಷ್ಟು ಬಣ್ಣವೋ"
"ಈ ಕನ್ನಡಿ ಸರಿ ಇಲ್ಲವೆಂದು ಕಾಣಲೇ ಇಲ್ಲ . ಛೆ"

ಆಳಿಗೊಂದು ಕಲ್ಲು .,.,ಅವಕಾಶ ಬಿಟ್ಟಾರೆಯೇ??.ಕನ್ನಡಿಯ ಕಲ್ಲೆದೆ ಒಡೆಯಿತು.ಬಿಂಬಗಳು ಮುಸುಕಾಗತೊಡಗಿದವು.ಕನ್ನಡಿಯಿಂದ ಕುಶಿ ಪಡೆದವರ ಕವಾಟಗಳು ಬದಲಾಗಲಿಲ್ಲ.ಒಬ್ಬ ಸಹೃದಯಿ ಬಂದ ಎಲ್ಲಿನ್ದಾನೋ.ಮರುಭೂಮಿಯಲ್ಲಿ ಅಪರೂಪಕ್ಕೆ ಸಿಗುವ ಓಯಸಿಸ್ ತರಹ. ನೋಡಲಾಗಲಿಲ್ಲ ಕನ್ನಡಿಯ ಕಣ್ಣಿರ.ತೇಪೆ ಹಚ್ಚಿದ.ಅಂಟಿಸಿದ.ಒಂದಿಷ್ಟು ಮೂಲೆಗಳೊಂದಿಗೆ ಮತ್ತೆ ಗಾಜು  ಕನ್ನಡಿಯಾಯಿತು.

ಇಂದು ಮನ್ಮಥನ ಪ್ರತಿಬಿಂಬ ಕೂಡ ಅಂಕುಡೊಂಕು.



Thursday, May 26, 2011

ದೇವರು-೩

...ಬರ್ಜರಿ ಚಪ್ಪರ ಕಂಡಿತ್ತು ಕೊಪ್ಪಲು.,ಕೊಪ್ಪಲ ಊರವರ  ಮಾತಿನ ಸಂಬ್ರಮಕ್ಕೆ ಒಣಗಿದ ಸೋಗೆಯ ಗರಿಯ ಸದ್ದು ಕಳೆದು ಹೋಗಿತ್ತು.ಹರಿ ಬಟ್ಟರ  ಮಂತ್ರದೊಂದಿಗೆ ಸಂಗೂಪಾಂಗವಾಗಿ ನಡೆದ ಹೋಮ .,ಆ ಬ್ರಹ್ಮಗಣಪತಿಯ ಬರುವಿಕೆಗೆ ಹೆದ್ದಾರಿಯನ್ನೊದಗಿಸಿತ್ತು.ದೇವರ ಪ್ರಾಣಪ್ರತಿಷ್ಟೆಯೊಂದಿಗೆ ದೇವಸ್ಥಾನ ನೆಲೆ ಊರಿತ್ತು.

"ನಿನ್ನಿಂದಾಗಿ ಊರಿಗೊಂದು ಗುರುತು ಬಂತು ಗಪ್ಪಣ್ಣ....ದೇವರು ತಣ್ಣಗೆ ಇಟ್ಟಿರ್ಲಿ ನಿನ್ನ" ಎಂದು ಹರಸಿ ಹೋಗಿದ್ದಳು ಪುಟ್ಟಜ್ಜಿ.ಅಷ್ಟೆಲ್ಲ ಕಾರ್ಯ ಮಾಡಿದ ಗಪ್ಪಜ್ಜನಿಗೂ ಒಂದು ಶಾಲು ಹೊಡೆಸಿ ಮಾಡಿದ ಕಾರ್ಯಕ್ರಮದಲ್ಲಿ ಹೋಗಳದವರಿಲ್ಲ ಗಪ್ಪಜ್ಜನನ್ನ.
ದೇವರು ಸಂತುಷ್ಟನಾಗಿದ್ದನೂ ಇಲ್ಲವೂ ,.ಗಪ್ಪಜ್ಜನಾಗಿದ್ದ.

ವೆಂಕಣ್ಣ ಹೊಟ್ಟೆಯಲ್ಲೇ ಅವಲಕ್ಕಿ ಕುಟ್ಟಿದ್ದ.

                                         ------------------------------------------------------------------------------------------------------------------------------------------------

ಕಮಿಟಿಯ ಸಭೆಯಲ್ಲಿ ., ಕಾರ್ಯದರ್ಶಿ ವೆಂಕಣ್ಣನ ತಕರಾರು ಸರಿಯಿತ್ತೆಂದು ಎಲ್ಲರಿಗೂ ಅನಿಸಿತ್ತು.ಅಲ್ಲ ಬ್ಯಾಡ ಬ್ಯಾಡ ಅಂದ್ರೂ  ನಾಲ್ಕು ವರ್ಷದ ಹಿಂದೆ  ಕುಣ್ಕಂಡು ಕುಣ್ಕಂಡು ದೇವಸ್ಥಾನ ಕಟ್ಟಿದ..ಇಗ ಕಮಿಟಿ ನಿರ್ಧಾರ ಮಾಡಿರ ವರಾಡ ಕಟ್ಟದಿಲ್ಲೇ ಅಂದ್ರೆ ಹೆಂಗೆ??.,ಒಂದ್ ದೇವಸ್ಥಾನ ನೆಡ್ಸದು ಅಂದ್ರೆ ತಮಾಷೆ ವಿಷಯವಾ..??

ಗಪ್ಪಜ್ಜ ., ನಿದಾನದ ದನಿಯಲ್ಲಿ ನುಡಿದ."ವೆಂಕು, ನಮ್ಮುರಿಂದು ಹೊಳೆ ಆಚೆಗಿನ ಜಮೀನು .,ಸವಳು ನಿಂಗಳಷ್ಟು ಪಸಲು ಬತಲೇ.,ವರಾಡ ಕೊಡದಿಲ್ಲೆ ಅಂತ ಹೇಳದಿಲ್ಲೆ., ನ್ಯಾಯಯುತವಾದ ವರಾಡ  ಹಾಕು"

"ಸುಮ್ಮನ್ಗಿರಾ ., ನೀ ಕೃಷಿ ಮಾಡದೇ ಇದ್ದದ್ದಕ್ಕೆ ., ಇಲ್ದೆ ಇರ ಸಬೂಬು ಹೇಳಡ"

"ನೋಡು ., ಇದೆ ವರಾಡ ಆದ್ರೆ ನಂಗೆ ಕೊಡದು ಕಷ್ಟ., ಧರ್ಮ ಹೇಳಿ ಬನ್ನಿ ., ನೋಡಿ ಮಾಡಿ ಕೊಡ್ತಿ"

ಮೀಟಿಂಗ್ ಮುಗ್ದಿತ್ತು.ಹೆಜ್ಜೆಗಳು ಭಾರವಾಗಿತ್ತು.
                                                ------------------------------------------------------------------------------------------------------------------------------------

ಮರುದಿನ ಊರಿನ ಪಂಚಾಯ್ತೀಗೆ ನಿರ್ದಾರ ,ಗಪ್ಪಜ್ಜನ ಕಿವಿಗೆ ಬಿದ್ದಿತ್ತು., 'ವರಾಡದ ವಿಷಯವಾಗಿ ಗಪ್ಪಜ್ಜನ ಮನೆಯನ್ನ ಬಹಿಷ್ಕಾರ ಮಾಡಕ್ಕು'

ದೇವರು ಕೊಪ್ಪಲಿನಿಂದ ಹೆಜ್ಜೆ ಆಚೆ ಇಟ್ಟಿದ್ದ ಅವತ್ತು ಸಂಜೆ                             

Wednesday, May 18, 2011

ಒಂದಿಷ್ಟು ಅಸ್ಪಷ್ಟ ಪದಗಳು

ಮನಸ ಹಗೇವಿನಲಿ ಅಡ ಮಾಡಿ
ಕುದಿಯುತಿಹ ನೋವು
ಬೆಂದ ಅಡಕೆಯ ಕಣ್ಣು ಬಿಟ್ಟಂತೆ
ಕಳಚಿಟ್ಟು ಹೋದ ನೆನಪು

ಗಿಡ ಮಾಡಿ ನೆರಳಿತ್ತು,ಬಸಿರಂತೆ
ಕಾಪಿಟ್ಟು,ಸಿಂಗಾರ ಶೃಂಗಾರ ಮಾಡಿ
ನಿಂತಿಹ ಮರದ ಬೇರು ಸತ್ತಿಹ ವಾಸನೆ
ಬದುಕ ಬಲ್ಲದೆ ಜೀವ ಪಸಲ ಹೊತ್ತು

ನೇದಿಟ್ಟ ಹೂವು ತನಗಲ್ಲವೆಂದು
ಸ್ಪರ್ಶ ಪ್ರೀತಿಯ ಸಾಂದ್ರಕೆ
ಕ್ಷಯವಿತ್ತೆ ಹೂವಾಡಗಿತ್ತಿ
ಕೈ ಸೋತಿತೇಕೆ ನಿನಗೆ??

ಹಣ್ಣಾದ ಕಾಲಕೆ ಎಲೆ ಉದುರುವಾಗ
ಯಾರು ಹೊಣೆ ಅದಕೆ,ಹಿಡಿಯ
ರಿಯದ ತರುವೋ
ತೂರಿಬಿಟ್ಟ ಗಾಳಿಯೋ,ಕೈಬಿಟ್ಟ ಎಳೆಯೋ??

Tuesday, May 17, 2011

ಒಂದು ಹಾಳು ಯೋಚನೆ

ಈ ಹುಡುಗಿಯರು ಮುಟ್ಟಿದ್ದೆಲ್ಲ ಹಾಳು ಅಲ್ದಾ ?? ಒಂದು ಹುಡುಗಿ ಹಾರ್ಟ್ ಟಚ್ ಮಾಡಿದ ಅಂದ್ರೆ ಹಾರ್ಟ್ ಹಾಳಾಗ್ತು.ಕನಸಲ್ಲಿ ಬಂದ್ರೆ ನಿದ್ದೆ ಹಾಳು.ನೆನಪಿನ ತಡಿಕೆಯ ಪ್ರತಿ ಮಡಿಕೆಯನ್ನ ಮುಟ್ಟಿ ಹೋಗ್ತಾ ಹಾಳಾದ ನೆನಪುಗಳು ಮರೆತೇ ಹೋಗುವುದಿಲ್ಲ.ತಣ್ಣಗೆ ಕೊಟ್ಟ ಮುತ್ತು ಹಾಳಾದ್ದು ವರ್ಷಗಟ್ಟಲೆ ಸುಡುತ್ತದೆ.ಈ ತರದ್ದೊಂದು ಸೃಷ್ಟಿಯ ಬಗ್ಗೆ ಬ್ರಹ್ಮನಿಗೆ ಕಲ್ಪನೆ ಮೂಡಿದ್ದಾದರೂ ಹೇಗೆ?? 


ಮೊನ್ನೆ ಮೊನ್ನೆ ಗಾಡಿ ಮುಟ್ಟಲು ಕೊಟ್ಟೆ.ರಾತ್ರಿ TV ಲಿ ಸುದ್ದಿ..ಹಾಳಾದ್ದ ಪೆಟ್ರೋಲ್ ರೇಟು ೫ ರುಪಾಯೀ ಜಾಸ್ತಿ ಹೇಳಿ.

Sunday, May 15, 2011

ದೇವರು-೨

ಮೂರ್ ಮನೆ ಸುಬ್ಬುವಿನ ಮನೆಯ ಮೆತ್ತಿಯ ಮೇಲ್ಗಡೆ ಇಸ್ಪೀಟ್ ಆಡುತ್ತ ವೆಂಕಪ್ಪ ಮಾತಿಗೆ ಶುರುವಿಟ್ಟ."ಅಲ ಈ ದೇವಸ್ಥಾನ ಅಂದ್ರೆ ಸುಮ್ಮನೆಯಾ.,ಪೂಜೆ ಮಾಡಲೇ ಭಟ್ರು  ಬೇಕು ದೇವಸ್ತಾನಕ್ಕೆ ಅಂತ ಜಾಗ ಬೇಕು.,ನಡೆಸಿಕೊಂಡು ಹೊಪರೊಬ್ರು ಬೇಕು.,ಹರ ಹರ ಅನ್ನೋ ಮುದಕಂಗೆ ತಣ್ಣಗೆ ಇಪ್ಪಲೇ ಅಗದಿಲ್ಲವ, ತಗಳ ಆಟೀನ್ ರಾಣಿ" ರಪ್ಪನೆ ವಾಲೆಯ ವಗದು ಹೇಳಿದ. ರಾಮಾನಂದ  ಕಣ್ಣು ಕಿರಿದು ಮಾಡಿ " ನಂಗ ಬ್ರಾಹ್ಮಣರು.,ದೇವರು ನಮಗೆ ತಾತ್ವಿಕವಾಗಿಯೂ ವ್ಯಾವಹಾರಿಕವಾಗಿಯೂ ಒಂದು ನೆಲೆ ಒದಗಿಸಿ ಕೊಟ್ಟಿದ್ದ.ಜನ ಮರ್ಯಾದೆ ನಮಗೆ ಏನಕ್ಕೆ ಕೊಡ್ತಾ ಇದ್ದ ದುಡ್ಡಿದ್ದು ಹೇಳ ?? .ಇತರ ಜನಾಂಗದ ಮುಂದೆ ಊರಿಗೊಂದು ಮರ್ಯಾದೆ ಇರ್ಲಿ ವೆಂಕ.ದೇವಸ್ಥಾನ ಸಯ್ಯಲ ಕಟ್ಟಿರಾತು.ಒಂಚೂರು ಹೆಚ್ಚುಕಮ್ಮಿ ಆದರೆ ದೇವರೇನು ತಕರಾರು ಮಾಡದಿಲ್ಲೆ".ಸಿದ್ದಜ್ಜನಿಗೆ ಗಿರಿಗೆ ಯಾಕೋ ಮಾತು ಸರಿ ಎನಿಸಿತು.ಅಷ್ಟಕ್ಕೂ ದೀಪಾವಳಿಯಂದು ಇತರ ಜನಾಂಗದವರು ಚೌಡಿಕಟ್ಟೆಯಾ ಮುಂದೆ ತೋರುವ ಭಕ್ತಿಯ ರುದ್ರನರ್ತನ ಎಲ್ಲರ ಕಣ್ಣಿಗೆ ಕಟ್ಟಿದ್ದೆ ಅಲ್ಲವೇ.

ವೆಂಕಪ್ಪನಿಗೆ ಯಾಕೋ ಇರಿಸಿನ್ನು ಹೋದ ಹಾಗೆ ಕಾಣಲಿಲ್ಲ."ಬ್ಯಾಡದೋ ರಾಮಾನಂದ.,ನಿಂಗೆ ಗೊತಾಗ್ತಲ್ಲೇ ಮಾರಾಯ.ಆ ವರಾಡ ದೀಪಕಾಣಿಕೆ ಕಾರ್ತಿಕ ಹೇಳಿ ಸುಮ್ನೆ ದುಡ್ಡು ದಂಡ ಮಾರಾಯ".ಒಳಮನಸ್ಸಿನ ನಿಜ ಬೇಗುದಿಯನ್ನ ತೆರೆದಿಟ್ಟ.ಮರುಕ್ಷಣವೇ ತಾನೆಕೋ ತುಚ್ಛವಾಗಿ ಮಾತನಾಡಿದೆ ಎಂದೆನಿಸಿ ಮಾತು ಕಮಚಿ " ನಿಂಗ ಎಲ್ಲ ಹೆಂಗೆ ಹೇಳ್ತ್ರೋ ಹಂಗೆ" ಎಂದ.ಇಸ್ಪೀಟು ಅಷ್ಟು ಹೊತ್ತಿಗಾಗಲೇ ತನ್ನ ಬಣ್ಣ ಕಳೆದು ಕೊಂಡಿತ್ತೆನಿಸಿತು.ತಣ್ಣಗೆ ಗುಡುಗಿದ ಶಬ್ದ ಕೇಳಿ "ಅರ್ಜುನ ಪಲ್ಗುಣ ಪಾರ್ಥಾ....." ಎಂದೇನೂ ಗುನುಗುತ್ತ ವೆಂಕಪ್ಪ ಎದ್ದು ಹೊರಟ.

                                                                       --------------------------------------------------------------------------------------------------------------------------------

ಪಂಚೆ ನೆಲದವರೆಗೆ ಮುಟ್ಟಿದ್ದರಿಂದ ಕಾಲು ನೆಲದ ಮೇಲೆ ಇತ್ತೋ ಇಲ್ಲವೋ ಗಪ್ಪಜ್ಜನದು ಗೊತ್ತಾಗುತ್ತಿರಲಿಲ್ಲ .ಕೊಟ್ಟಿಗೆಯಲ್ಲಿದ್ದ ಗೌರಿ ಕೂಡ ಪ್ರಸನ್ನವದನಳಾದಂತೆ ಕಾಣುತ್ತಿತ್ತು.ಊರಮನೆ ಮನೆ ಜನರೆಲ್ಲಾ  ಸೇರಿ ದೇವಸ್ಥಾನ ಒಂದು ಆಗಿಬಿಡಲಿ ಹೇಳ ತೀರ್ಮಾನವೂ .,  ರಸ್ತೆ ಮೇಲಿನ .,ದತ್ತುವಿಗೆ ಸೇರಿದ್ದ ಒಂದಿಷ್ಟು ಜಾಗದ ದಾನವೂ ಎಲ್ಲ ಸೇರಿ.ಇನ್ದೆಕೂ ಊರು ನಂದನ ವನದಂತೆ ಕಾಣುತ್ತಿತ್ತು ಗಪ್ಪಜ್ಜನಿಗೆ.ಬೆಂಗಳೂರಿನಲ್ಲಿದ್ದ ರಾಮುವಿನ ಮಗ ಕಾಂತ್ರಾಟುದಾರ ಪ್ರಕಾಶ ತಾ ಕಟ್ಟಿಸಿ ಕೊಡ್ತೆ ದೆವ್ಸ್ತಾನವ ಅಂತೆಲ್ಲ ಹೇಳಿದ್ದು ಕೇಳಿ ಅಬ್ಬ ., ದೇವರು ಬರುವ ಕಾಲಕ್ಕೆ ತಾನೆ ದಾರಿ ಮಾಡಿ ಕೊಳ್ಳುವ  ಅನ್ನುವ ಮಾತು ನಿಜವೆನಿಸಿತ್ತು ಗಪ್ಪಜ್ಜನಿಗೆ.ಇದೊಂದು ಆಗಿಬಿಟ್ಟರೆ ತಣ್ಣಗೆ ಕಣ್ಣುಮುಚ್ಚಲಕ್ಕು ಅಂತ ಹೇಳಿ ಹೆಂಡತಿ ಜಾನಕಿಯ ಹತ್ತಿರ ಬೈಸಿಕೊಂಡೂ  ಆಗಿತ್ತು.೭೦ ರ ಇಳಿವಯಸ್ಸಿನ ಗಪ್ಪಜ್ಜ ಒಂದೇ ದಿನದಲ್ಲಿ ೭೦ ರ ಹರೆಯದ ಗಪ್ಪಜ್ಜನಾಗಿದ್ದ.

ಅಂದಿನಿಂದ ಗಪ್ಪಜ್ಜನಿಗೆ ದೇವಸ್ತಾದ ಕಾಯಕವೇ ಮನೆ ಆಯಿತು.ಏರು ಜವ್ವನದ ಹುಡುಗರು ನಾಚುವಂತೆ ಜಾಗ ಸರಿ ಮಾಡುವ, ದೇವಸ್ತಾನದ ಕಟ್ಟಡ ಕೆಲಸ.ಮೇಲ್ವಿಚಾರಣೆ., ಸರಿಯಾದ ಲೆಕ್ಕ ಪತ್ರ ವಿಚಾರಣೆ ಬಣ್ಣ .,ರೇತಿ ಅಂತ ಹೇಳುತ್ತಲೇ ವರ್ಷವಾಗಿತ್ತು.ಗಪ್ಪಜ್ಜನ ಬೆವರ ಹನಿಯ ಮೂರ್ತ ರೂಪ ಬ್ರಹ್ಮ ಗಣಪತಿ ದೇವಸ್ತಾನ ಊರ ಮದ್ಯದ ಜಾಗದಲ್ಲಿ ನಿಂತಿತ್ತು.

ದೇವರು ಕೊಪ್ಪಲಿಗೆ ಬರಲು ಮಡಿಯುಟ್ಟು ನಿಂತಿದ್ದ.

ದೇವರು - ೧


ಗಣಪತಿಯಜ್ಜ ಮತ್ತೊಮ್ಮೆ ಗಟ್ಟಿಯಾಗಿ ಹೇಳಿದ."ಇಲ್ಲ ನಮಗೊಂದು ದೇವಸ್ತಾನ ಬೇಕು.ದೇವರಿಲ್ಲದ ಊರು ಗಂಡು ದಿಕ್ಕಿಲ್ಲದ ಮನೆ ಎರೆಡು ಒಳ್ಳೆಯದಕ್ಕಲ್ಲ".ಕಾನು ಮನೆಯ ವೆಂಕಪ್ಪ .,ಆಚೆ ದಿಂಬದ ಸಿದ್ದಜ್ಜ .,ಮೊದಲಮನೆ ಗಿರಿಯವರಿಗೆ ಯಾಕೋ ಇದೆಲ್ಲ ಹಿಡಿಸಲಿಲ್ಲ.ಯಾಕೆ ಈ ಮುದುಕನಿಗೆ ಇಲ್ಲದ ಉಸಾಬರಿ ಅನ್ನುವ ಭಾವ ಒಡೆದು ತೋರುತ್ತಿತ್ತು.ನೂರೆಕೆರೆ ತೋಟದ ಒಡೆಯ ದತ್ತುವಿಗೂ ಇದರ ಪರ ಒಲವಿದ್ದುದರಿಂದ ಎದುರಾಡುವ ಧೈರ್ಯ ಯಾರೂ ಮಾಡಲಿಲ್ಲ.ಉಸಿರು ಮಗಚುವ ಮೌನ ಕಂಡು ದತ್ತುವೆ ನಿರ್ಧರಿಸಿದ."ಗಪ್ಪಜ್ಜಾ ಸದ್ಯಕ್ಕೆ ಇಷ್ಟಿರ್ಲಿ.,ಎಲ್ಲರಿಗೂ ನಾಲ್ಕ್ ದಿನ ಯೋಚನೆ ಮಾಡಕ್ಕೆ ಟೈಮ್ ಬೇಡದಾ...".ಮೀಟಿಂಗ್ ಮುಗಿಸಿದ ಹಾಗೆ ಅನಿಸಿದ್ದರಿಂದ ಗಪ್ಪಜ್ಜ ಮನೆ ಕಡೆ ಹೊರಟ.
                                                          ------------------------------------------------------------------
..ಊರು ಅಂದಕೂಡಲೇ ಮನಸ್ಸಿಗೆ ಬರುವಂತಹದ್ದೆ ಊರು ಅದೂ ಕೂಡ.ಮಲೆನಾಡಿನದು.ಬರಾಬ್ಬರಿ ಮಳೆ ಬರುವ ಊರು ನಮ್ದು ಅಂತೆಲ್ಲ ನಾವು   ಬಯಲುಸೀಮೆಗೆ ಹೋದಾಗ ಕತೆ ಕೊಚ್ಚಿ ಮನೆಗೆ ಬಂದದ್ದು ಉಂಟು. ಈಗೀಗ ಆಚೆ ಮನೆಯ  ಗಣಪತಿಯಜ್ಜ ಇವೆಲ್ಲ  ಎಂತ ಮಳೆ .,ಕಲಿ ಎರೆಡನೆ ಕಾಲು ಇಟ್ಟಾ ಅಂತ ಹಲುಬುವುದನ್ನ ಕೇಳಿ ನಕ್ಕಿದ್ದ ನೆನಪು.ಎಂದೂ ನಗೆ ಮಾಸದ ಕವಳದ ಬಾಯಿಗಳ ಕಲರವ .,ಕೆಂಪು ಅಡಕೆಯ ತೊಗರಿನದೆ ಬಣ್ಣದ ಕೆನ್ನೆಯ ಹೆಂಗಳೆಯರ ನಗು.ಎಲ್ಲ ಮೀರುವ ಅವಕಾಶವಿದ್ದೋ ಹಲಸಿನಕಾಯಿಯ ಹಪ್ಪಳ ತಟ್ಟುತ್ತಲೇ ಸಂತೃಪ್ತವಾಗುವ ಕೈಗಳು    .ಇವನ್ನೆಲ್ಲ ಒಡಲೊಳಗೆ ಇಟ್ಟುಕೊಂಡಿದ್ದಷ್ಟೇ ವ್ಯತ್ಯಾಸ.

ದಾಸವಾಳ ,ಸಂಪಿಗೆ .,ಕೌಳಿ ನೇರಳೆ ಮಾವು ಹಲಗೆ ಮುಳ್ಳಣ್ಣು ಲೆಕ್ಕವಿಲ್ಲದ ಹೆಸರಿಟ್ಟುಕೊಂಡ ಊರಿಗೆ ತಾನೊಬ್ಬನಿಲ್ಲವೆಂದರೆ ಹೇಗೆಂದು ದೇವರಿಗೂ ಅನಿಸಿತ್ತೇನೋ.ಊರ ಹಿರಿಯ ಗಣಪತಿಯಜ್ಜ ದೇವರಿಗೆ ಸ್ವಾಗತ ಕೋರಲು ತಯಾರಾಗಿದ್ದ ಒಟ್ಟಿನಲ್ಲಿ.

Saturday, May 14, 2011

....ಮತ್ತು ಪ್ರೀತಿ

ಎನಗೆ ಸಾವಿಲ್ಲವೇ ,ಬರಿ ರೂಪಾಂತರವಷ್ಟೇ.......!!!
ಕಣ್ಣೀರ ಹನಿಯಾಗ್ತೇನೆ ,ಇಲ್ಲಾ ಚರಿತ್ರೆಯ ಪುಟಗಳಾಗುತ್ತೇನೆ,
ಯಾರದ್ದೋ ನಗುವಿನ ಕಾರಣವಗ್ತೇನೆ...,,,,
ಇಲ್ಲಾ ಎಲ್ಲಾದರೂ ರಕ್ತದ ಕಲೆಯಾಗ್ತೇನೆ..,,

ಎನಗೆ ಸಾವಿಲ್ಲವೂ ..,,

ರಕ್ತವಾಗಿ ,ಜೀವವಾಗಿ ,ಹನಿ ಹನಿ
ಮಳೆಯ ನಡುವೆ ತಣ್ಣೀರ ಭಾವವಾಗಿ ,
ಅನಾಮಿಕ ಹುಡುಗಿಯ ಕನಸಿನ ಚಿತ್ರವಾಗಿ ,
ತುಂಟ ತುಟಿಗಳ ನಡುವೆ ಸ್ಪರ್ಶವಾಗಿ ..,,!!

ಬರಿ ರೂಪಾಂತರವಷ್ಟೇ...!!!

ಲೇಖನಿಯ ತುದಿಯ ಮೌನವಾಗಿ ,.
ಮಿಲನ ಸುಖದ ಮೂಲವಾಗಿ .,
ಹಲವು ಭಾವಗಳಿಗೆ ವ್ಯಕ್ತಪ್ರಜ್ಞೆಯಾಗಿ ,
ಗೆಜ್ಜೆಯಾಗಿ .,ಹೆಜ್ಜೆಯಾಗಿ ..,ಕಣ್ಣರೆಪ್ಪೆಯ ಸದ್ದಾಗಿ
ತರುಣ ಮನಸಿನ ಪಿಸುಮಾತಾಗಿ .

ನಾನು ಪ್ರಿತಿಯಾಗ್ತೇನೆ ....

ತೋಳಹಾರವಾಗಿ,ಕೆನ್ನೆಯಾ ಕೆಂಪಾಗಿ .
ನಾಚುವ ಮನಸಿನ ,ಕಾಣುವ ಕನಸಿನ
ಕನಚಿನ ನೋಟದ .,ಪ್ರತಿಮುತ್ತಿನ ಹಂಬಲಕೆ ಕಾರಣವಾಗಿ

ಪ್ರೀತಿಯೇ ನಾನಾಗ್ತೇನೆ............

ಅವಳು ಮತ್ತು ನೆನಪು

ಆರ್ದ್ರ ಮಳೆಯ ಜೋರ ನಡುವೆ .,ಒಂಟಿ ಕೊಡೆಯ ಕೆಳಗೆ ನಿಂತು ತುಂಟ ನೀರನಿಡಿವ ಆಟ .,
ಒದ್ದೆ ಒದ್ದೆ ಕೈಯನಿಡಿದು,ಬೆಚ್ಚಗಾಗೋ ನಿನ್ನ ನೋಟ
ಮುದ್ದೆಯಾಗೋ ಲತೆಯನಿಡಿದು,ಮುದ್ದು ಮನಸ ಬೊಗಸೆಲಿಡಿದು
ಮೆದ್ದು ಬರುವ ಕಳ್ಳನಾಟ
ಮಾಸ ಕಳೆದರೂ ಮಾಸದ ನೆನಪುಗಳಿಗೆ,ಮೊಸವೇತಕೆ ಗೆಳತಿ.....

ನಿನ್ನ ತುಟಿಯ ನಗುವಿನಂಚು
ನನ್ನ ಮನದ ಭಾವಚುಂಚ ಬರೆವ ಕುಂಚವಾದ ಸಮಯ
ಖಾಲಿ ಕೊರಳು ಮುತ್ತ ಸರದಿ .,ಬಳ್ಳಿ ನಡುವ ಬಳಸಿ ಹಿಡಿದು
ಹೃದಯವಿತ್ತ ಗಳಿಗೆ.................
ಮರೆಯಲಾಗದ ನೆನಪುಗಳಿಗೆ ಮೊಸವೇತಕೆ ಹುಡುಗಿ

ಕೈಯ ಬಳೆಯ ಶಬ್ದಗಳಲಿ,ಹಂಸಗಮನ ಹೆಜ್ಜೆಗಳಲಿ
ಹರಿದ ಸರದ ದಾರದಲಿ , ನಿನ್ನ ತನುವು ನನ್ನೆದೆಂದು
ಮಾತು ಕೊಟ್ಟ ಹೊತ್ತುಗಳಲಿ ...
ನೆನಪುಗಳೇ ನೆನಪಾಗಿಬಿಡುವ ನೆನಪಿಗೇತಕೆ ಮೋಸ ಗೆಳತಿ

ಪ್ರೀತಿಸದ ಗೆಳತಿಗೆ ಪ್ರೀತಿಸಿದ ಹುಡುಗ
ಪ್ರೀತಿಯ ನೆನಪಿಗೇ ಮೊಸವೇತಕೆ ಬೆಡಗಿ:)

ಅವಳು ಮತ್ತು ಕನಸು

ನಿನ ಮುಂಗುರುಳ ಕೊಂಕಲ್ಲಿ .,ಆ ತುಟಿಯ ಅಂಚಲ್ಲಿ
ಆ ಮುತ್ತ ಮತ್ತಲ್ಲಿ .,ಬಿಸಿ ಉಸಿರ ಅಪ್ಪುಗೆಯಲ್ಲಿ
ಆ ಸ್ಪರ್ಶದ ಕನಸಲ್ಲಿ.,ಕನಸ ಕನವರಿಕೆಯಲ್ಲಿ  ನಾ ಕರಗಿ ಹೋಗುವ ಮುನ್ನ
ಅಕ್ಷರೂವನಿತೆಯಾಗೆ ಪ್ರಿಯೆ ., ನನ ರಕ್ತದ ಹನಿ ಹನಿಯಲ್ಲಿ

ಮಿಲನ ಸುಖದ ಮೂಲದಲಿ ., ಮನಸ ಹುಚ್ಚುಕೋಡಿಯಲಿ
ಪ್ರೇಮಪತ್ರದ ಅಕ್ಷರದಲಿ..ಆ ಅಕ್ಷರದ ಭಾವದಲಿ
ನಿನ ಕಾಲ ಕಿರುಬೆರಳಿಗೆ ನಾ ಮುತ್ತಿಟ್ಟ ಅನುಭಾವದಿ
ನೀ ಕರುಗುವ ಮುನ್ನ ., ಹುಡುಗಿ ಕಾಡಿಬಿಡು ಒಮ್ಮೆ
ನನ ಎದೆಯ ಪ್ರತಿಮಿಡಿತದಲಿ

ಕಣ್ಣಿರ ಸ್ಪರ್ಶದಲಿ ..,ಮಳೆಯ ಪ್ರತಿ ಹನಿಯಲ್ಲಿ
ಕೆನ್ನೆಯ ಕೆಂಪಲ್ಲಿ.., ಕಾಲ್ಗೆಜ್ಜೆಯ ಸದ್ದಲ್ಲಿ
ಭಾವ ಭಾವಗಳ ವ್ಯಕ್ತ ಪ್ರಜ್ಞೆಯಲಿ
ನಾ ಕಾಣುವ ಸ್ವಪ್ನದ ಮೂರ್ತ ರೂಪದಲಿ
ಒಮ್ಮೆ ನನ್ನವಳಾಗಿಬಿಡು ಬಿಡು ಗೆಳತಿ .. ಈ ಪ್ರೀತಿ ಸಾಯುವ ಮುನ್ನ

ಪ್ರಿತಿಸಿಯೂ ಪ್ರಿತಿಸದ ಮನಸಿಗೆ.,ಮತ್ತೆ ಪ್ರೀತಿಸುವೆ ಎಂಬ ಭ್ರಮೆಗೆ  
ಪ್ರಾಣಕಾಂತನ  ಮನಸಿನ ಪುಟದಲಿ ಹಸ್ತಾಕ್ಷರವನ್ನಿತ್ತ ತಪ್ಪಿಗೆ
ಬಂದುಬಿಡು ಮತ್ತೊಮ್ಮೆ ..ಕಾಡಿಬಿಡೆ ಮನದನ್ನೆ